ಕೊಪ್ಪಳ

ಹೊದ್ದು ಮಲಗಿದೆ ನಗರಸಭೆ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 25
ಕೊಪ್ಪಳದಲ್ಲಿನ ಹಲವು ಕಾಲೋನಿಗಳ ಸ್ಥಿತಿಗತಿ ಹಾಗೂ ಸ್ಥಳೀಯ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕನ್ನಡಪ್ರಭ ಕಳೆದ ಐದು ದಿನಗಳಿಂದ ನಿರಂತರವಾಗಿ ಕಾಲೋನಿಗಳ ಕಥೆ-ವ್ಯಥೆ ಕುರಿತು ಸರಣಿ ಮಾಲಿಕೆ ಬಿಚ್ಚಿಟ್ಟರೂ ನಗರಸಭೆ ಈ ಬಗ್ಗೆ ಚಕಾರ ಎತ್ತಿಲ್ಲ. ಸಮಸ್ಯೆಗಳ ಕುರಿತು ಮಾತನಾಡಿಲ್ಲ, ಮಾತನಾಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ, ನಗರಸಭೆ ಆಡಳಿತದಲ್ಲಿ ಹಲವು ನ್ಯೂನತೆಗಳಿದ್ದು, ಮೌನಂ ಸಮ್ಮತಿ ಲಕ್ಷಣಂ ಎನ್ನುವ ಸಂದೇಶ ಸೂಚಿಸಿದಂತಿದೆ.
ಮೌನಕ್ಕೆ ಶರಣಾದ ನಗರಸಭೆ ಆಡಳಿತ ವೈಖರಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ನಗರದಲ್ಲಿ ಈಗಲೂ ಹಲವು ಸಮಸ್ಯೆಗಳು ರುದ್ರತಾಂಡವವಾಡುತ್ತಿವೆ. ಈ ಬಗ್ಗೆ ನಗರಸಭೆ ಸದಸ್ಯರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ತಿರುಗಿ ನೋಡಿಲ್ಲ. ಇದರಿಂದ ಅಲ್ಲಿಯ ಜನತೆ ಮಾತ್ರ ನರಳಾಟದಿಂದ ಇನ್ನೂ ಹೊರ ಬಂದಿಲ್ಲ.
ಶೌಚಾಲಯ, ಸ್ವಚ್ಛತೆ ಇಲ್ಲ: ಕೊಪ್ಪಳದಲ್ಲಿರುವ 31 ವಾರ್ಡ್‌ಗಳ ಪೈಕಿ ಹಲವು ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಸರಿಯಾದ ಸಾರ್ವಜನಿಕ ಮಹಿಳಾ ಶೌಚಾಲಯ ಇಲ್ಲದಂತಾಗಿವೆ. ಕಲ್ಯಾಣ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಂತೂ ಹೇಳ ತೀರದು. ರೈಲ್ವೆ ಸ್ಟೇಷನ್ ಏರಿಯಾದಲ್ಲಿ ಚರಂಡಿಗಳ  ಸ್ವಚ್ಛತೆ ಮಾಡಲು ಪೌರ ಕಾರ್ಮಿಕರೆ ಇಲ್ಲ. ನಗರದಲ್ಲಿ ಹಂದಿಗಳ ಕಾಟ ತಪ್ಪಿಲ್ಲ. ಗುಡ್ಡದಲ್ಲಿ ವಾಸ ಮಾಡುವ ಜನತೆಯನ್ನು ಆ ದೇವರೆ ಕಾಪಾಡಬೇಕು ಎನ್ನುವ ಸ್ಥಿತಿ ಅವರಲ್ಲಿ ಕಾಡುತ್ತಿದೆ. ಈ ಬಗ್ಗೆ ನಗರಸಭೆಗೆ ಗೊತ್ತಿದ್ದರೂ ಮೌನಕ್ಕೆ ಶರಣಾಗಿದೆ.
ಎಲ್ಲವೂ ಲೆಕ್ಕಾಚಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆಗೆ ಪ್ರತಿ ವರ್ಷವೂ ಸಾವಿರಾರು ಮನೆಗಳು ಮಂಜೂರಾಗಿ ಬರುತ್ತವೆ. ಆದರೂ ಅವೆಲ್ಲವೂ ಉಳ್ಳವರ, ಪ್ರಭಾವಿಗಳ, ಇಲಾಖೆಗಳಿಗೆ ನಿಕಟ ಸಂಪರ್ಕವಿಟ್ಟುಕೊಂಡ ವ್ಯಕ್ತಿಗಳ ಪಾಲಾಗುತ್ತಿವೆ ಎನ್ನುವುದು ಮನೆಯಿಲ್ಲದ ಜನರ ಆರೋಪ. ನಮಗೆ ಮನೆ ಮಂಜೂರಾತಿಗೆ ಎಲ್ಲ ಅರ್ಹತೆ ಇದ್ದರೂ ಇಲಾಖೆ ಅಧಿಕಾರಿಗಳು ನಮ್ಮಲ್ಲಿನ ನ್ಯೂನತೆ ಹೇಳಿ ಅರ್ಜಿ ತಿರಸ್ಕರಿಸಿರುತ್ತಾರೆ. ಆದರೆ, ಪ್ರತಿ ವರ್ಷದ ಎಲ್ಲ ಅನುದಾನದಲ್ಲಿ ಬರೋಬ್ಬರಿ ಲೆಕ್ಕಾಚಾರವಿರುತ್ತದೆ. ಬಡವರಿಗೆ ಮನೆ ದೊರೆಯುವುದಿಲ್ಲ. ಸರ್ಕಾರವೇ ನಿರ್ಮಿಸಿದ ಕಾಲೋನಿಗಳಿಗೆ, ಜನತೆ ಹೆಸರಿಟ್ಟುಕೊಂಡ ಕಾಲೋನಿಗೆ ಕನಿಷ್ಠ ಮೂಲಸೌಲಭ್ಯ ಕೊಡುವುದಿಲ್ಲ. ಆದರೂ ಆರ್ಥಿಕ ವರ್ಷದ ಆಯ- ವ್ಯಯದಲ್ಲಿ ಲೆಕ್ಕಾಚಾರ ಇರುತ್ತದೆ. ಅನುದಾನ ಸಂಬಂಧಿಸಿದ ಕಾಲೋನಿಗೆ ಮಂಜೂರಾಗಿ ಬಂದರೂ ಕೆಲವೆ ದಿನದಲ್ಲಿ ಕರಗಿ ಮಾಯವಾಗಿರುತ್ತದೆ.
ಎಲ್ಲೆಡೆ ಆಕ್ರೋಶ: ಐದು ದಿನಗಳಿಂದ ಕೊಪ್ಪಳದಲ್ಲಿನ ಗಂಭೀರ ಸಮಸ್ಯೆಗಳು ಇರುವ ಕಾಲೋನಿಗೆ 'ಕನ್ನಡಪ್ರಭ' ತೆರಳಿ ಸಮಸ್ಯೆ ಆಲಿಸಿದಾಗ, ಸ್ಥಳೀಯ ಜನರು ಜಿಲ್ಲಾಡಳಿತ, ನಗರಸಭೆ ಆಡಳಿತ ವೈಖರಿಗೆ ಛೀ.., ಥೂ.. ಎನ್ನುತ್ತಿದ್ದಾರೆ. ಕಾಲೋನಿಯಲ್ಲಿ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಚ್ಚಾ ರಸ್ತೆಗಳು, ಸ್ವಚ್ಛತೆ ಇಲ್ಲದ ಚರಂಡಿಯತ್ತ ಪೌರ ಕಾರ್ಮಿಕರು ಸುಳಿವಿಲ್ಲದ ಕುರಿತು ನೂರಾರು ಸಮಸ್ಯೆಗಳನ್ನು ತೋಡಿಕೊಂಡರು. ಈ ಎಲ್ಲ ಸಮಸ್ಯೆಗಳ ಕುರಿತು 'ಕನ್ನಡಪ್ರಭ' ವಿಸ್ತೃತವಾಗಿ ವರದಿ ಪ್ರಕಟ ಮಾಡಿದೆ. ಇದಕ್ಕೆ ಕೊಪ್ಪಳ ನಗರಸಭೆ ಮೌನಂ ಸಮ್ಮತಿ ಲಕ್ಷಣಂ ಎನ್ನುವ ಅರ್ಥದಂತೆ ಸಮಸ್ಯೆಗಳಿರುವುದು ಸತ್ಯ ಎಂದು ತನ್ನ ನಿರ್ಲಕ್ಷ್ಯತೆಯನ್ನು ಒಪ್ಪಿಕೊಂಡಂತಿದೆ. ಇದರಿಂದ ಜನತೆಯಲ್ಲಿ ಮತ್ತಷ್ಟು ಆಕ್ರೋಶದ ಮಾತುಗಳು ಬರುತ್ತಿವೆ.
ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಅಲ್ಲದೇ, ಮೀಸಲಾತಿಯಲ್ಲೂ ಅನುದಾನ ಕಾಯ್ದಿರಿಸುವ ಕುರಿತು ಕಾನೂನು ಹೇಳುತ್ತದೆ. ಜತೆಗೆ ಅರ್ಹತೆ ಇದ್ದವರಿಗೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅವೆಲ್ಲ ಇಲ್ಲಿ ನಡೆಯುವುದು ತೋರಿಕೆಗೆ ಮಾತ್ರ. ಹೀಗಾಗಿ ಮಧ್ಯಮ ಮತ್ತು ಕೆಳ ಸ್ತರದ ಜನತೆಗೆ ಇನ್ನು ಸರ್ಕಾರಿ ಸೌಲಭ್ಯಗಳು ಗಗನಕುಸುಮವಾಗಿವೆ.
ಎಚ್ಚೆತ್ತುಕೊಳ್ಳಲಿ: ಕೊಪ್ಪಳ ಜಿಲ್ಲಾಡಳಿತ, ಶಾಸಕರು, ನಗರಸಭೆ ಕನಿಷ್ಠ ಈಗಲಾದರೂ ಬಡವರು, ದುರ್ಬಲರು, ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಹಾಗೂ ಸೌಲಭ್ಯವನ್ನೇ ಕಾಣದ ಕಾಲೋನಿಗಳಿಗೆ ವಿಶೇಷ ಅನುದಾನದ ಮಂಜೂರಾತಿಗೆ ಅನುಮತಿ ಪಡೆದು ಸೌಲಭ್ಯ ಕಲ್ಪಿಸಿ ಕೊಡಲು ಮುಂದಾಗಬೇಕಿದೆ. ಸೌಲಭ್ಯ ಕಾಣದ ಜನತೆ ಬೀದಿಗಿಳಿದು ಹೋರಾಟ ಮಾಡುವ ಮುನ್ನ, ನಗರಸಭೆ ಆಡಳಿತ ಎಚ್ಚೆತ್ತುಕೊಂಡು  ಜನತೆಗೆ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಯತ್ನ ನಡೆಸಬೇಕಿದೆ.
- ದತ್ತು ಕಮ್ಮಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.