ಕೊಪ್ಪಳ

ನಗರಸಭೆ ಗೊತ್ತುವಳಿ ಗೋಲ್‌ಮಾಲ್

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 25
ಹೇಳುವುದು ಒಂದು... ಮಾಡುವುದು ಇನ್ನೊಂದು...
ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುವುದೇ ಬೇರೆ ಹಾಗೂ ಗೊತ್ತುವಳಿಯಲ್ಲಿ ದಾಖಲಾಗುವುದೇ ಬೇರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಅಂಶ. ಈ ಕುರಿತು ಸದಸ್ಯರು ಹಲವು ಬಾರಿ ಪ್ರಶ್ನೆ ಮಾಡಿದರೂ ಅಧಿಕಾರಿಗಳು ಇಲ್ಲದ ಸಬೂಬು ನೀಡಿ, ವಿಷಯಾಂತರ ಮಾಡುತ್ತಿದ್ದರು. ಆದರೆ, ಇದರ ಬಣ್ಣ ಬಯಲು ಮಾಡುವಂಥ ದಾಖಲೆಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ.
ಫೆ. 19ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿರುವ ವಿಷಯಗಳ ಹೊರತಾಗಿಯೂ ಅನೇಕ ಗೊತ್ತುವಳಿಗಳನ್ನು ಸೇರಿಸಲಾಗಿದೆ. ಸದಸ್ಯರು ನೀಡಿರುವ ಅಭಿಪ್ರಾಯವೇ ಬೇರೆ ಹಾಗೂ ಗೊತ್ತುವಳಿಯಲ್ಲಿ  ದಾಖಲಾಗಿರುವ ವಿಷಯಗಳೇ ಬೇರೆ. ಸದಸ್ಯರು ಚರ್ಚಿಸುವ ಅನೇಕ ವಿಷಯಗಳ ಕುರಿತು ಸದಸ್ಯರು ಹೇಳಿರುವುದೆಲ್ಲವನ್ನು ತಿಪ್ಪೆ ಸಾರಿಸಿ ಮತ್ತೊಂದು ಅಭಿಪ್ರಾಯವನ್ನು ಸೇರಿಸಿ ದಾಖಲು ಮಾಡಲಾಗುತ್ತದೆ. ಈ ವೇಳೆಯಲ್ಲಿ ಮಾಡಬಾರದ್ದೆಲ್ಲವನ್ನು ಮಾಡಿಕೊಳ್ಳುವ ತಂತ್ರವೂ ಅಡಗಿದೆ.
ಸಾಮಾನ್ಯ ಸಭೆಯಲ್ಲಿ 103ರಿಂದ 179ರ ವರೆಗಿನ ವಿಷಯಗಳು ಮಾತ್ರ ಚರ್ಚೆಯಾಗಿವೆ. ಇದು ಅಂದು ಸಭೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ಗೊತ್ತಿರುವ ಅಂಶವೇ. ಆದರೆ, ಗೊತ್ತುವಳಿಯ ದಾಖಲಾತಿಯ ವೇಳೆಯಲ್ಲಿ ಇದರ ಸಂಖ್ಯೆ 182 ಆಗಿದೆ.
ಸೇರ್ಪಡೆ: ನಗರಸಭೆಯಲ್ಲಿ ಚರ್ಚೆಯಾದ ಕುರಿತು ದಾಖಲಾದ ಅಸಲಿ ಪ್ರತಿ ಮತ್ತು ಅನಂತರ ಅದನ್ನು ತಿದ್ದುಪಡಿ ಮಾಡಿ ಸೇರಿಸಲಾದ ವಿಷಯಗಳನ್ನೊಳಗೊಂಡ ಪ್ರತಿ ಸೇರಿದಂತೆ ಎರಡು ಪ್ರತಿಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ. ಕೊನೆಯ ಮೂರು ವಿಷಯಗಳು ಅತ್ಯಂತ ಮಹತ್ವದ್ದಾಗಿದ್ದು, ಅವುಗಳಲ್ಲಿ ಕೆಲವೊಂದು ಸದಸ್ಯರಿಗೆ ಸೇರಿದ್ದಾಗಿವೆ. ಆದರೆ, ವಾಸ್ತವದಲ್ಲಿ ಗೊತ್ತುವಳಿಯುದ್ದಕ್ಕೂ ಅನೇಕ ಅಂಶಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಸೇರಿಸಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರಿದಿದೆ.
ಈಗಾಗಲೇ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದೆ. ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದು, ಈ ಕುರಿತು ಪ್ರಶ್ನಿಸಿದ್ದಾರೆ. ಆದರೂ ನಗರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷೆ ಲತಾ ವೀರಣ್ಣ ಅವರು ಸೇರಿದಂತೆ ಅನೇಕರು ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ನಗರಸಭೆ ಸದಸ್ಯನೋರ್ವ ಪಡೆದಿರುವ ಮಾಹಿತಿ ಹಕ್ಕಿನಿಂದಲೇ ಇದೆಲ್ಲವೂ ಬೆಳಕಿಗೆ ಬಂದಿದೆ. ಸದಸ್ಯ ಪ್ರಾಣೇಶ ಮಾದಿನೂರು ಅವರು ಮಾಹಿತಿ ಪಡೆದಿರುವುದಲ್ಲದೆ ತಮ್ಮಲ್ಲಿರುವ ಮತ್ತೊಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ನಗರಸಭೆಯಲ್ಲಿ ಗೊತ್ತುವಳಿಯಲ್ಲಿ ಸಿಬ್ಬಂದಿ ತಿಪ್ಪೆ ಸಾರಿಸಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಬರೆದುಕೊಳ್ಳುತ್ತಾರೆ. ಆದ್ದರಿಂದ ಇದನ್ನು ರೆಕಾರ್ಡ್ ಮಾಡುವ ಅಗತ್ಯವಿದೆ ಎಂದು ಅನೇಕ ಸಾರಿ ಸಭೆಯಲ್ಲಿಯೇ ಪ್ರಸ್ತಾಪವಾಗಿತ್ತು. ಆಗ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಚರ್ಚೆಯಾಯಿತಾದರೂ ಅದು ಕಾರ್ಯಗತವಾಗಲೇ ಇಲ್ಲ. ಆದರೆ, ಗೊತ್ತುವಳಿಯನ್ನು ತಿದ್ದುವ ದಂಧೆ ಮಾತ್ರ ಯಥಾವತ್ತಾಗಿ ಮುಂದುವದಿದಿದೆ.
- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.