ಅತ್ಯಾಚಾರ ತಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಕನಕಗಿರಿ, ಜು. 22
ರಾಜ್ಯದಲ್ಲಿ ಅತ್ಯಾಚಾರ ತಡೆಗೆ ಆಗ್ರಹಿಸಿ ಕನ್ನಡ ಸಮರ ಸೇನೆ ನೇತೃತ್ವದಲ್ಲಿ ಪಟ್ಟಣದ ರಾಜಬೀದಿಯಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು.
ಬಳಿಕ ಕನ್ನಡ ಸಮರ ಸೇನೆಯ ಜಿಲ್ಲಾಧ್ಯಕ್ಷ ಶರಣಪ್ಪ ಎಚ್. ನಾಯಕ ಮಾತನಾಡಿ, ಅತ್ಯಾಚಾರವನ್ನು ತಡೆಗಟ್ಟುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಮುಗ್ಧ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಾರೆ. ಪೊಲೀಸರು ಮಾತ್ರ ಕ್ರಮಕ್ಕೆ ಮುಂದಾಗಿಲ್ಲ. ಗೃಹ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆಯೇ ವಿನಃ ರಾಜ್ಯದಲ್ಲಾಗುವ ಅತ್ಯಾಚಾರ ಪ್ರಕರಣಗಳ ತಡೆಗೆ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಆದ್ದರಿಂದ ರಾಜ್ಯದಲ್ಲಿ ಅತ್ಯಾಚಾರ ತಡೆಗೆ ಕಾನೂನು ಕ್ರಮ ಕೈಗೊಂಡು ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಮೆರವಣಿಗೆ ಮೂಲಕ ತೆರಳಿ ನಾಡ ಉಪತಹಸೀಲ್ದಾರ್ ಮಂಜುನಾಥ ನಂದನ್ಗೆ ಮನವಿ ಸಲ್ಲಿಸಿದರು. ಬಸವರಾಜ ಅಮೀನಗಡ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು.
ಕಂದಾಯ ನೀರಿಕ್ಷಕ ಗುಂಡಪ್ಪ ತೆಗ್ಗಿನಮನಿ, ಗ್ರಾಮಲೆಕ್ಕಾಧಿಕಾರಿ ರಮೇಶ ತಾಳಿಕೇರಿ, ಕನ್ನಡ ಸಮರ ಸೇನೆಯ ಅಧ್ಯಕ್ಷ ರುದ್ರಪ್ಪ ಬುಕನಟ್ಟಿ, ಯುವ ಘಟಕದ ಅಧ್ಯಕ್ಷ ಗೌತಮ್ ಯಾದವ್, ಪ್ರಮುಖರಾದ ಬಸವರಾಜ, ಶ್ರೀಧರ ಸೂಡಿ, ಪಂಪಾಪತಿ ನಾಯಕ, ಗೋಪಾಲದಾಸ, ಮಕ್ತುಂಸಾಬ್, ಹೊನ್ನುರುಸಾಬ್, ಶ್ರೀಧರ ಮಹೇಂದ್ರಕರ, ಶ್ಯಾಮಣ್ಣ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.
ಪಿಯುಸಿಎಲ್ ಖಂಡನೆ
ಕೊಪ್ಪಳ: ರಾಜ್ಯದಲ್ಲಿ 10 ದಿನಗಳಲ್ಲಿ 60ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪಿಯುಸಿಎಲ್ ಜಿಲ್ಲಾ ಘಟಕ ಖಂಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ, ಬೆಂಗಳೂರಿನ ವಿಬ್ಗಯಾರ್ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ನೇರ ಜವಾಬ್ದಾರಿ ಆ ಶಾಲೆ ಆಡಳಿತ ಮಂಡಳಿಯದ್ದೇ ಆಗಿದೆ. ಘಟನೆ ನಡೆದು 18 ದಿನ ಕಳೆದ ಮೇಲೆ ಆರೋಪಿ ಬಂಧಿಸಿದ್ದಾರೆ. ಇದಕ್ಕೆ ಪೊಲೀಸ್ ಉದಾಸೀನತೆಯೇ ಕಾರಣ. ಇಂಥ ಘಟನೆಗಳೂ ಶಿಕ್ಷಣ ಸಂಸ್ಥೆಗಳಲ್ಲಿ ನಡೆದಾಗ ಆಡಳಿತ ವರ್ಗವನ್ನೂ ಆರೋಪಿಗಳೆಂದೇ ಪರಿಗಣಿಸಬೇಕು. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷ ಅಲ್ಲಾಗಿರಿರಾಜ, ರಘು ಎಚ್., ಪ್ರಧಾನ ಕಾರ್ಯದರ್ಶಿ ಸಿರಾಜ್ ಬಿಸರಳ್ಳಿ, ಖಜಾಂಚಿ ರಾಜಾಭಕ್ಷಿ ಎಚ್.ವಿ., ಸದಸ್ಯ ರಾಜಶೇಖರ ಮುಳುಗುಂದ, ಜೆ. ಭಾರದ್ವಾಜ, ಬಸವರಾಜ್ ಶೀಲವಂತರು ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

