ಕೊಪ್ಪಳ

ಬತ್ತ ನಾಟಿಗೆ ನೀರಿಲ್ಲ: ಆತಂಕ

Published On :

ಬತ್ತದ ಕಣಜ ಎಂದೇ ಖ್ಯಾತಿ ಪಡೆದ ಗಂಗಾವತಿ ತಾಲೂಕಿನ ರೈತ ಸಮುದಾಯ ಈ ಬಾರಿ ನಾಟಿಗೆ ನೀರಿಲ್ಲದೆ ಅತಂತ್ರವಾಗಿದ್ದಾರೆ. ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರು ತುಂಗಭದ್ರಾ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಆದರೆ ಈ ಬಾರಿ ಜಲಾಶಯ ಭರ್ತಿಯಾಗಿಲ್ಲ. ಇದರಿಂದಾಗಿ ನಾಲೆಗೆ ನೀರು ಬಿಡದ ಕಾರಣ ಬತ್ತ ನಾಟಿಗಾಗಿ ಸಿದ್ಧಪಡಿಸಿದ ಸಸಿ ಮಡಿಗಳು ಒಣಗಿ ಹೋಗುತ್ತಿವೆ.
ಜಲಾಶಯ ಭರ್ತಿಯಾಗಲು 103 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕಳೆದ ವರ್ಷ ಈ ವೇಳೆಗೆ 20 ಟಿಎಂಸಿ ನೀರು ಸಂಗ್ರಹವಾಗಿತ್ತು.   ಆದರೆ ಈಗ ಜಲಾಶಯದಲ್ಲಿ 27 ಟಿಎಂಸಿ ನೀರು ಮಾತ್ರ ಇದೆ. ಈ ಬಾರಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಪೂರೈಕೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಲಾಶಯದ ಒಳ ಹರಿವು 42 ಸಾವಿರ ಕ್ಯುಸೆಕ್ ಇದ್ದು, ಹೊರ ಹರಿವು  ಪ್ರಮಾಣ 250 ಕ್ಯುಸೆಕ್ ಇದೆ. ಜಲಾಶಯ ಭರ್ತಿಯಾಗಲು ಇನ್ನು 76 ಟಿಎಂಸಿ ನೀರು ಅವಶ್ಯವಾಗಿದ್ದರಿಂದ ಎಡದಂಡೆ ಕಾಲುವೆಗೆ ನೀರು ಪೂರೈಕೆ ವಿಳಂಬವಾಗುವ ಸಾಧ್ಯತೆ ಇದೆ.
ನಾಟಿ ಕಡಿಮೆ: ಗಂಗಾವತಿ ತಾಲೂಕಿನಲ್ಲಿ ಒಟ್ಟು 35,400 ಹೆಕ್ಟೇರ್ ಪ್ರದೇಶದಲ್ಲಿ ಜಲಾಶಯದ ನೀರನ್ನು ಬಳಸಲಾಗುತ್ತದೆ. ನದಿ ನೀರು ಮತ್ತು ಕೊಳವೆಬಾವಿ ಅವಲಂಬಿತ ರೈತರು 3500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬತ್ತ ನಾಟಿ ಮಾಡಿದ್ದು, ಹೆಬ್ಬಾಳ, ಮುಸ್ಟೂರು, ಮರಳಿ ಗ್ರಾಮಗಳ ಪ್ರದೇಶದಲ್ಲಿ 1500 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ನಾಟಿ ಮಾಡಿದ್ದಾರೆ. ಅದರಂತೆ ಸಿದ್ದಾಪುರ ಹೋಬಳಿಯಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದು, ಕನಕಗಿರಿ ಹೋಬಳಿ ಪ್ರದೇಶದಲ್ಲಿ 5ರಿಂದ 10 ಹೆಕ್ಟೇರ್ ಮಾತ್ರ ಬತ್ತ ನಾಟಿಯಾಗಿದೆ.
ಗಂಗಾವತಿ ತಾಲೂಕಿನಲ್ಲಿ ಶೇ. 50ರಷ್ಟು ಕೊಳವೆಬಾವಿ ಮತ್ತು ನದಿ ನೀರು ಅವಲಂಬಿತರಾಗಿದ್ದರು ಸಹ, ಈಗ ಮಳೆ ಅಭಾವ ಉಂಟಾಗಿದೆ. ಒಂದೆಡೆ ಮಳೆ ಅವಲಂಬಿಸಿರುವ ರೈತರಿಗೆ ಮಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನು ಅರ್ಧದಷ್ಟು ರೈತರು ಕಾಲುವೆಗೆ ನೀರು ಬಿಡದೇ ಇರುವುದರಿಂದ ತತ್ತರಿಸುತ್ತಿದ್ದಾರೆ.
ಬತ್ತ ಬೀಜ ಪೂರೈಕೆ: ಗಂಗಾವತಿ ತಾಲೂಕಿನಲ್ಲಿ ಬತ್ತ ಬೀಜಕ್ಕೆ ಕೊರತೆಯಾಗಬಾರದೆಂಬ ಕಾರಣಕ್ಕೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಿಗೆ ವಿವಿಧ ತಳಿಗಳ ಬತ್ತದ ಬೀಜಗಳನ್ನು ಪೂರೈಸಿದೆ. ಬತ್ತ ಎಂಟಿವಿ 1010, ಡಿಬಿಟಿ ಸೋನಾ ಮಸೂರಿ ಮತ್ತು 17-98 ತಳಿಗಳ ಬೀಜಗಳನ್ನು ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸುತ್ತಾರೆ.
ಐಸಿಸಿ ಸಭೆ ಇಲ್ಲ: ತುಂಗಭದ್ರಾ ನದಿ ಅಚ್ಚುಕಟ್ಟು ಪ್ರಾಧಿಕಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವಗೆ ನೀರು ಬಿಡುವ ದಿನಾಂಕ ನಿರ್ಧಾರ ಮಾಡಲಾಗುತ್ತಿತ್ತು. ಈಗ ಜಲಾಶಯದಲ್ಲಿ ನೀರು ಭರ್ತಿಯಾಗದ ಕಾರಣ ಸಭೆಯ ದಿನಾಂಕ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಸೂಪರಿಟೆಂಡೆಂಟ್ ಎಂಜಿನಿಯರ್ ಶಿವಕುಮಾರ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾದರೆ ಜಲಾಶಯಕ್ಕೆ ಅಧಿಕ ನೀರು ಬರುತ್ತಿತ್ತು. ಈಗ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗುತ್ತಿಲ್ಲ.
ಈ ತಿಂಗಳಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಜಲಾಶಯ ಭರ್ತಿಯಾಗುತ್ತದೆ ಎಂಬ ನಿರೀಕ್ಷೆ ಈ ಭಾಗದ ರೈತರಲ್ಲಿ ಇದೆ. ಜಲಾಶಯ ಭರ್ತಿಯಾಗುತ್ತಿದ್ದಂತೆಯೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕಾಲುವೆಗೆ ನೀರು ಬಿಡುವ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಶಿವಕುಮಾರ ತಿಳಿಸಿದರು.
ಪ್ರಸ್ತುತ ಜಲಾಶಯದಲ್ಲಿ ನೀರಿನ ಕೊರತೆ ಇದ್ದು, ನಾಲೆಗೆ ನೀರು ಬಿಡುವುದು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ರೈತ ಸಮುದಾಯ ಆತಂಕಗೊಂಡಿದೆ. ವರುಣದೇವ ರೈತರ ಕೆರೆಗೆ ಓಗೊಟ್ಟು ಧರೆಗೆ ಇಳಿದರೆ ಜಲಾಶಯ ಭರ್ತಿಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.