ಸಕಾಲದಿಂದ ಸೇವಾ ದಕ್ಷತೆ ವೃದ್ಧಿ
ಕನ್ನಪಪ್ರಭ ವಾರ್ತೆ, ಕೊಪ್ಪಳ, ಜು. 17
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುವ ವಿವಿಧ ಸೇವೆಗಳನ್ನು ಸಕಾಲ ಕಾಯ್ದೆ ವ್ಯಾಪ್ತಿಯಲ್ಲಿ ಸೇರಿಸಿದ್ದು, ಇದರಿಂದ ಸರ್ಕಾರಿ ನೌಕರರಲ್ಲಿನ ಸೇವಾ ದಕ್ಷತೆ ವೃದ್ಧಿಸಲು ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅಭಿಪ್ರಾಯಪಟ್ಟರು.
ಅವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದೊಂದಿಗೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಕಾಲ ಕಾಯ್ದೆ ಜಾರಿಗೊಂಡ ನಂತರ, ಅಧಿಕಾರಿ, ನೌಕರರಲ್ಲಿ ಸೇವಾ ದಕ್ಷತೆಯಲ್ಲಿ ವೃದ್ಧಿ ಕಂಡುಬಂದಿದ್ದು, ಆಡಳಿತ ವ್ಯವಸ್ಥೆಯಲ್ಲಿ ಚುರುಕುತನ ಮೂಡುತ್ತಿದೆ. ಕಳೆದ ತಿಂಗಳು ಸಕಾಲ ಅಧಿನಿಯಮ ಅನುಷ್ಠಾನದಲ್ಲಿ ಅಂದರೆ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಕಂದಾಯ ಇಲಾಖೆ ಮೊದಲನೆ ಸ್ಥಾನದಲ್ಲಿ ಹಾಗೂ ಕೊಪ್ಪಳ ಜಿಲ್ಲೆ ಮೊದಲನೆ ಸ್ಥಾನದಲ್ಲಿತ್ತು. ಆದರೆ ಪ್ರಸಕ್ತ ತಿಂಗಳು ಕಂದಾಯ ಇಲಾಖೆ 4ನೇ ಸ್ಥಾನದಲ್ಲಿದ್ದರೆ, ಕೊಪ್ಪಳ ಜಿಲ್ಲೆ 7ನೇ ಸ್ಥಾನದಲ್ಲಿದೆ. ಇಲಾಖೆಗಳು ತಮ್ಮ ಕಚೇರಿಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಸಕಾಲ ಅಧಿನಿಯಮದಡಿ ಸ್ವೀಕರಿಸಬೇಕು. ಆದರೆ ಕೆಲವು ಇಲಾಖೆಗಳು ಅರ್ಜಿಗಳನ್ನು ಸಕಾಲ ವ್ಯಾಪ್ತಿಗೆ ಬದಲಾಗಿ ಬೈಪಾಸ್ನಲ್ಲಿ ಪಡೆಯುತ್ತಿರುವುದರಿಂದ, ಅರ್ಜಿ ಸ್ವೀಕೃತಿ ಹಾಗೂ ವಿಲೇವಾರಿಯ ಬಗ್ಗೆ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ.
ಕೊಪ್ಪಳ ಜಿಲ್ಲೆಯಲ್ಲಿ ಆಯುಷ್, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಕನ್ನಡ ಮತ್ತು ಸಂಸ್ಕೃತಿ, ಅಗ್ನಿಶಾಮಕ, ಪರಿಸರ ಮಾಲಿನ್ಯ ನಿಯಂತ್ರಣ, ಯುವಜನ ಸೇವೆ ಮತ್ತು ಕ್ರೀಡೆ, ಲೋಕೋಪಯೋಗಿ ಇಲಾಖೆಗಳಲ್ಲಿ ಸಕಾಲ ಕಾಯ್ದೆ ಅನುಷ್ಠಾನ ತೃಪ್ತಿಕರವಾಗಿಲ್ಲ. ಈ ಇಲಾಖೆಗಳಲ್ಲಿ ಅರ್ಜಿಗಳೇ ಸಕಾಲದಡಿ ಸ್ವೀಕೃತಿಯಾಗುತ್ತಿಲ್ಲ. ಇನ್ನು ನಗರಸಭೆ, ಸ್ಥಳೀಯ ಸಂಸ್ಥೆಗಳು ಸಕಾಲ ಕಾಯ್ದೆಯಡಿ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಕಾಲ ಕಾಯ್ದೆ ಅನುಷ್ಠಾನಕ್ಕೆ ಕಂಪ್ಯೂಟರ್ ಕೊರತೆ ಇದ್ದಲ್ಲಿ ಅಂತಹ ಇಲಾಖೆಗಳು ತಮ್ಮ ಬೇಡಿಕೆಯ ಪ್ರಸ್ತಾವನೆಯನ್ನು ಹದಿನೈದು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸಕಾಲ ಕಾಯ್ದೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವವರಿಗೆ ಈ ಮೊದಲ ಕೇವಲ ಪರಿಹಾರ ಶುಲ್ಕ ಮಾತ್ರ ವಸೂಲು ಮಾಡಲಾಗುತ್ತಿತ್ತು. ಆದರೆ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿಯನ್ನು ತಂದಿದ್ದು, ಇದೀಗ ಸಕಾಲ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ತಿಳಿಸಿದರು.
ಕೃಷ್ಣಮೂರ್ತಿ ದೇಸಾಯಿ ಸಕಾಲ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಸವರಾಜ್, ಉಪ ಪ್ರಾಚಾರ್ಯ ಪ್ರಾಣೇಶ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

