ಯಲಬುರ್ಗಾದಲ್ಲಿ ಗ್ರಾಪಂ ನೌಕರರಿಂದ ಮುಷ್ಕರ
ಕನ್ನಡಪ್ರಭ ವಾರ್ತೆ, ಯಲಬುರ್ಗಾ, ಜು. 15
ತಾಲೂಕಿನ 33 ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರು ಹಾಗೂ ಸಿಐಟಿಯು ಸಹಯೋಗದಲ್ಲಿ ಇಲ್ಲಿನ ತಾಪಂ ಎದುರು ಮಂಗಳವಾರ ಮುಷ್ಕರ ನಡೆಸಿದರು.
ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದರು. ಬಳಿಕ ತಾಪಂಗೆ ಆಗಮಿಸಿ ಧರಣಿ ಸತ್ಯಾಗ್ರಹ ನಡೆಸಿದರು.
ಗ್ರಾಪಂ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಶಂಕರ ಬೀಳಗಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಗ್ರಾಪಂ ನೌಕರರ ಬಹು ವರ್ಷಗಳ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುವವರನ್ನು ಕಾಯಂ ಮಾಡಿಕೊಳ್ಳದೇ ಅವರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ. 10-12 ತಿಂಗಳಾದರೂ ಸರಿಯಾದ ವೇತನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹೇಗೆ ನಿಭಾಯಿಸಬೇಕು. ಸರ್ಕಾರ ವೇತನ ಭದ್ರತೆಗಾಗಿ ಪ್ರತ್ಯೇಕ ಅನುದಾನ ನೀಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿದೆ. ಪ್ರತಿ ಬಾರಿ ಸುಳ್ಳು ಹೇಳುವ ಸರ್ಕಾರ ಇನ್ನಾದರೂ ನೌಕರರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಇಒ ಎಂ. ಜಯಪ್ಪ, ಹನುಮಂತಗೌಡ ಪೊಲೀಸ್ಪಾಟೀಲ ಅವರು ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿದರು. ವಾರದಲ್ಲಿ ಸಂಬಂಧಿಸಿದ ಪಿಡಿಒ ಹಾಗೂ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ತಮ್ಮ ವೇತನ ನೀಡುವುದಾಗಿ ತಿಳಿಸಿದರು. ಇನ್ನೂ ಕೆಲವು ಬೇಡಿಕೆಗಳ ಕುರಿತು ಮೇಲಧಿಕಾರಿ ಮತ್ತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಒಂದು ವೇಳೆ ಭರವಸೆಯಂತೆ ಬೇಡಿಕೆಗಳ ಈಡೇರದಿದ್ದರೆ ಪುನಃ ಧರಣಿ ಆರಂಭಿಸುವುದಾಗಿ ತಾಲೂಕಾಧ್ಯಕ್ಷ ಶಿವಶಂಕರ ಬೀಳಗಿ ಎಚ್ಚರಿಕೆ ನೀಡಿ ಧರಣಿ ಹಿಂದೆ ಪಡೆದರು.
ಬೇಡಿಕೆಗಳು: ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 18ರಿಂದ 20 ತಿಂಗಳಗಳ ವೇತನ ಬಾಕಿ ಹಣವನ್ನು ಪಾವತಿ ಮಾಡುವುದು, ಎಲ್ಲ ಗ್ರಾಪಂ ನೌಕರರಿಗೆ ಪ್ರತಿವರ್ಷ ಸಮವಸ್ತ್ರ ವಿತರಿಸಬೇಕು, ಗ್ರಾಪಂ ಸಿಬ್ಬಂದಿ ಸೇವಾ ಭದ್ರತೆ ಒದಗಿಸುವುದು, ಪ್ರತಿ ತಿಂಗಳ 5ನೇ ತಾರೀಖಿಗೆ ವೇತನ ಮಾಡಬೇಕು, ಅನುದಾನದಲ್ಲಿ ಸಿಬ್ಬಂದಿ ಹಣವನ್ನು ಸಿಬ್ಬಂದಿ ವೇತನ ಖಾತೆಗೆ ಜಮೆ ಮಾಡುವುದು, ಕಂಪ್ಯೂಟರ್ ಆಪರೇಟರ್ಗಳನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು, ಹೆಚ್ಚುವರಿ ವೇತನವನ್ನು ತೀವ್ರಗತಿಯಲ್ಲಿ ಮಂಜೂರಿ ಮಾಡಬೇಕು, ಸರ್ಕಾರಿ ಎಲ್ಲ ಸೌಲಭ್ಯಗಳು ಗ್ರಾಪಂ ನೌಕರರಿಗೆ ಕೊಡಬೇಕು, ನಿವೃತ್ತ ವೇತನ ನೀಡಬೇಕು, ಮರಣದ ನಂತರ ಸಹಾಯಧನ ಕೂಡಲೇ ಜಾರಿಗೆ ಮಾಡಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಗ್ರಾಪಂ ನೌಕರರ ಸಂಘದ ಉಪಾಧ್ಯಕ್ಷ ಶರಣಪ್ಪ ಮಡಿವಾಳರ, ಪಾರವ್ವ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಮಾನಪ್ಪ ಹೂಗಾರ, ಬಯಸ್ಯಸ್ವಾಮಿ ಹಿರೇಮಠ, ಗಂಗಮ್ಮ ಚಲವಾದಿ, ದೇವಪ್ಪ ಜಗಲಿ, ಗಂಗಮ್ಮ ಅಂಗಡಿ, ಹನುಮಪ್ಪ ಕೊಪ್ಪದ, ಕನಕಪ್ಪ ಚಲವಾದಿ, ಅಬ್ದುಲ್ ರಜಾಕ್, ಸತ್ಯವ್ವ ಚಲವಾದಿ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಹನುಮಂತಪ್ಪ ಚೌಡಾಪುರ, ಅನಸವ್ವ ಚಲವಾದಿ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಬಳಿಗೇರಿ, ಸಂಗಯ್ಯ ಹೊಸಮಠ, ಪರಶುರಾಮ ಕಂಬಳಿ, ಅಡಿವೆಪ್ಪ ಹಂಚಿನಾಳ, ಶ್ರೀಕಾಂತಗೌಡ ಮಾಲೀಪಾಟೀಲ, ಅನೇಕ ಗ್ರಾಪಂ ಸಿಬ್ಬಂದಿ ಹಾಗೂ ಮಹಿಳೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

