ಕೊಪ್ಪಳ

ಫೆ. 15ರಿಂದ ಡಿಎಸ್ಸೆಸ್‌ಶಿಬಿರ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 25
ಫೆ. 15ರಿಂದ 17ರ ವರೆಗೆ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರವನ್ನು ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಹೇಳಿದರು.
ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 15ರಂದು ಮಧ್ಯಾಹ್ನ 1.30 ಗಂಟೆಗೆ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಕಸಾಪದ ಮಾಜಿ ಅಧ್ಯಕ್ಷ ಡಾ. ಚಂದ್ರಶೇಖರ ಪಾಟೀಲ (ಚಂಪಾ) ನೆರವೇರಿಸುವರು. ಅಧ್ಯಕ್ಷತೆಯನ್ನು ಲಕ್ಷ್ಮೀನಾರಾಯಣ ನಾಗವಾರ ವಹಿಸುವರು. ಇದೇ ಸಂದರ್ಭದಲ್ಲಿ 'ಮಾನವತೆಯ ರಾಯಭಾರಿ' ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ್ ನೆರವೇರಿಸುವರು. ಅತಿಥಿಗಳಾಗಿ ಸಮಿತಿಯ ಜಿಲ್ಲಾ ಸಂಚಾಲಕ ಎಫ್.ವೈ. ದೊಡ್ಡಮನಿ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಅಯ್ಯಪ್ಪ ಅರೋಲಿ, ಬಸವರಾಜ ಮುಧೋಳ, ಶೋಭಾ ಕಟ್ಟಿಮನಿ, ಶ್ಯಾಮ ಘಾಟ್ಗೆ ಉಪಸ್ಥಿತರಿರುವರು.
ಅಂದು ಮಧ್ಯಾಹ್ನ ಕನ್ನಡ ಮತ್ತು ಮರಾಠಿ ದಲಿತ ಆತ್ಮಕತೆಗಳು, 5 ಗಂಟೆಗೆ ಮಹಿಳೆಯರು ಮತ್ತು ಜಾತಿನ್ಯಾಯ-ಲಿಂಗನ್ಯಾಯ, ಫೆ. 16ರಂದು ಬೆಳಗ್ಗೆ 9ಕ್ಕೆ ಅಂಬೇಡ್ಕರ್, ಲೋಹಿಯಾ ಚಿಂತನೆಗಳು, 11.30ಕ್ಕೆ ಮೂಲನಿವಾಸಿಗಳೇ ನೀವೆಷ್ಟು ಬಲ್ಲಿರಿ ನಿಮ್ಮ ಇತಿಹಾಸ, 2ಕ್ಕೆ ಬೌದ್ಧಧರ್ಮ ಯಾರಿಗೆ? ಏಕೆ, 3.30ಕ್ಕೆ 20ನೇ ಶತಮಾನದ ಜ್ಞಾನಸೂರ್ಯ ಅಂಬೇಡ್ಕರ್, 5.50ಕ್ಕೆ ಅಹಿಂದ ವರ್ಗಗಳ ರಾಜಕೀಯ ಚಿಂತನೆ. ಫೆ. 17ರಂದು ಬೆಳಗ್ಗೆ 9ಕ್ಕೆ ದಲಿತರ ಆರ್ಥಿಕ ಸ್ಥಿತಿಗತಿಗಳು, 11.30ಕ್ಕೆ ಜಾಗತೀಕರಣ ಮತ್ತು ಸಮಾಜವಾದ ಕುರಿತು ಗೋಷ್ಠಿಗಳು ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಪಾಟೀಲ, ಜಿ.ಕೆ. ಗೋವಿಂದರಾವ್, ಹೇಮಗಿರಿಶ ಹಾವಿನಾಳ, ರೇವಣಪ್ಪ ಕೊಂಡಿಕೊಪ್ಪ, ಎ.ಎಸ್. ಮುಕುಂದರ, ಸುರೇಶ ಕಟ್ಟಿಮನಿ, ವಿಜಯ ಮುಳಗುಂದ, ಸಾಧಿಕ ನರಗುಂದ ಮುಂತಾದವರು ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಶೋಭಾ ಕಟ್ಟಿಮನಿ, ಬಸವರಾಜ ಮುಧೋಳ, ಶ್ಯಾಮ ಘಾಟ್ಗೆ, ವಿಜಯ ಮುಳಗುಂದ, ವೈ.ಕೆ.ಬುಡ್ಡಮ್ಮನವರ, ಎಫ್.ಐ. ದೊಡ್ಡಮನಿ, ಚಂದ್ರು ಚಕ್ರವರ್ತಿ, ಸುರೇಶ ಮಣ್ಣೂರ, ಶಿವಾಜಿ ಬನವಾಸಿ, ಕಲ್ಲಪ್ಪ ಕಾಂಬಳೆ, ಜೀವನಹಳ್ಳಿ ವೆಂಕಟೇಶ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ದಲಿತರಿಗೆ ಅನ್ಯಾಯ: ಫೆ. 9ರಿಂದ 11ರ ವರೆಗೆ ಬಿಜಾಪುರದಲ್ಲಿ ನಡೆಯುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರಿಗೆ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಬಿಜಾಪುರದಲ್ಲಿ ದಲಿತ ಸಂಘಟನಾ ಸಮಿತಿಯ ವತಿಯಿಂದ ಸಮ್ಮೇಳನದಲ್ಲಿ ಕುಮಾರ ಕಕ್ಕಯ್ಯಪೋಳ್ ವೇದಿಕೆ ಇಲ್ಲವೇ ದಲಿತರ ಗೋಷ್ಠಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕೂಡ ಫೆ. 9ರಂದು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರ ಕುರಿತು ಯಾವುದೇ ರೀತಿಯ ಗೋಷ್ಠಿ ಹಮ್ಮಿಕೊಳ್ಳದೇ ಇರುವುದು ವಿಷಾದನೀಯವಾಗಿದ್ದು, ಈ ಸಮ್ಮೇಳನವನ್ನು ದಲಿತ ಸಂಘಟನೆ ವಿರೋಧಿಸುತ್ತದೆ ಎಂದರು.


ನಿರ್ಣಯ ಖಂಡನೀಯ
ಗುರುವಾರ ಸಂಜೆ ಗದಗ, ಬೆಟಗೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿರುವ 54 ವಕಾರ ಸಾಲುಗಳ ಕುರಿತು ಶೇ 50ರಷ್ಟು ಭೂಬಾಡಿಗೆದಾರರ ಮತ್ತು ಶೇ. 50ರಷ್ಟು ನಗರಸಭೆಗೆ ನೀಡುವಂತೆ ಎಲ್ಲ ಸದಸ್ಯರು ನಿರ್ಣಯ ಕೈಗೊಂಡಿರುವ ಕ್ರಮ ಖಂಡನಾರ್ಹವಾಗಿದೆ. ಈ ವಕಾರ ಸಾಲಿನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ಈ ಕುರಿತು ನಗರಸಭೆ ನಿರ್ಣಯ ಕೈಗೊಂಡಿರುವುದು ನ್ಯಾಯಾಲಯಕ್ಕೆ ಅವಮಾನ ಮಾಡಿದಂತೆ ಹಾಗೂ ಈ ವಕಾರ ಸಾಲಿನಲ್ಲಿ ದಲಿತರಿಗಾಗಿ ಶೇ. 22.75 ಮಳಿಗೆಗಳನ್ನು ಮೀಸಲಿಡುವಂತೆ ನಗರಸಭೆಗೆ ಒತ್ತಾಯಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.