ಕೊಪ್ಪಳ

ಹಾಸ್ಟೆಲ್ ವಿದ್ಯಾರ್ಥಿಗಳ ಕಡೆಗಣನೆ: ಉಮೇಶ

Published On :

ಕೊಪ್ಪಳ: ಹಾಸ್ಟೆಲ್‌ಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ವಿದ್ಯಾರ್ಥಿಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕಡೆಗಣಿಸುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಆರೋಪಿಸಿದರು.
ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ಎಸ್‌ಎಫ್‌ಐ ಕೊಪ್ಪಳ ತಾಲೂಕು ಸಮಿತಿ ವತಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ ಮತ್ತು ಹಾಸ್ಟೆಲ್ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಕೇರಳ, ತಮಿಳುನಾಡಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರು. 1500 ಆಹಾರ ಭತ್ಯೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೈದಿಗಳಿಗೆ ಆಹಾರ ಭತ್ಯೆಗಾಗಿ ದಿನಕ್ಕೆ ರು. 124 ನೀಡುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದಿನಕ್ಕೆ 27 ನೀಡುತ್ತಿದೆ. ಗುಣಮಟ್ಟದ ಆಹಾರ, ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು ಸಿಗದೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಶೇ. 30 ಹಣ ಮೀಸಲಿಡಬೇಕು. ಹಾಸ್ಟೆಲ್‌ಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಮಾತನಾಡಿ, ಜಿಲ್ಲೆಯ ಹಾಸ್ಟೆಲ್‌ಗಳು ಕಳಪೆಯಾಗಲು ಶಾಸಕ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಕಾರಣ. ಹಾಸ್ಟೆಲ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಸಂಗಣ್ಣ ಕರಡಿ ಹಾಸ್ಟೆಲ್‌ಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ಗಂಗಾವತಿ, ಸಿಂಧನೂರು, ಶಿರಗುಪ್ಪದಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿಯನ್ನು ಕೇರಳ ಸರ್ಕಾರ ಖರೀದಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಆದರೆ ಜಿಲ್ಲೆಯ ವಿದ್ಯಾರ್ಥಿಗಳು ದುರ್ವಾಸನೆಯ ಅಕ್ಕಿ ತಿನ್ನುವಂತೆ ಮಾಡುತ್ತಿದ್ದಾರೆ ಜನಪ್ರತಿನಿಧಿಗಳು,  ಅಧಿಕಾರಗಳು ಎಂದು ಆರೋಪಿಸಿದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ, ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಭದ್ರತೆ ಇಲ್ಲ. ತಕ್ಷಣ ವಾರ್ಡನ್‌ಗಳು, ಕಾವಲುಗಾರರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಹಾಸ್ಟೆಲ್ ಹೋರಾಟ ಸಮಿತಿ ಸಂಚಾಲಕರನ್ನಾಗಿ ಪರಶುರಾಮ ರಾಠೋಡ್, ಸಹಸಂಚಾಲಕರನ್ನಾಗಿ ಸಂಧ್ಯಾ, ಆಂಜನೇಯ ಸೇರಿದಂತೆ 15 ಜನರನ್ನು ಆರಿಸಲಾಯಿತು.
ಜ. 23ರಂದು ಹಾಸ್ಟೆಲ್ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಪಂಗೆ ಮುತ್ತಿಗೆ ಹಾಕಲು ತಿರ್ಮಾನಿಸಲಾಯಿತು.
ಸಂಘಟನೆ ಜಿಲ್ಲಾ ಮುಖಂಡರಾದ ದುರಗೇಶ್ ಡಗ್ಗಿ, ಗ್ಯಾನೇಶ್ ಕಡಗದ್, ಹನುಮಂತ ಭಜಂತ್ರಿ. ಸಂಧ್ಯಾ, ಡಿವೈಎಫ್‌ಐನ ಸುಂಕಪ್ಪ ಗದಗ, ನಗರದ 9 ಹಾಸ್ಟೆಲ್‌ಗಳ ಪ್ರತಿನಿಧಿಗಳು ಇದ್ದರು.
ಬಾಳಪ್ಪ ಹುಲಿಹೈದರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಸುಬಾನ್ ಸೈಯದ್ ಪ್ರಾಸ್ತಾವಿಕ ಮಾತನಾಡಿದರು. ಪರಶುರಾಮ ರಾಠೋಡ್ ನಿರೂಪಿಸಿದರು. ಶಿವರಾಜ್ ವಂದಿಸಿದರು. ಇದಕ್ಕೂ ಮೊದಲು ಕ್ರಾಂತಿಗೀತೆಗಳನ್ನು ಹಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.