ಯಾವ ದಾರಿ ಶಿವ?
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 11
ಎಲ್ಲಿಗೆ ಹೋಗಲಿ? ಯಾರನ್ನು ನಂಬಲಿ? ದಾರಿ ತಿಳಿಯದಾಗಿದೆ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶಿವರಾಜ ತಂಗಡಗಿ ಚಡಪಡಿಸುತ್ತಿದ್ದಾರೆ.
ಈಗಾಗಾಲೇ ಕಾಂಗ್ರೆಸ್ ಟಿಕೆಟ್ ಖಚಿತಪಡಿಸಿಕೊಂಡಿರುವ ತಂಗಡಗಿ ಬಿಜೆಪಿಯಲ್ಲಿಯೂ ತಳವೂರಿದ್ದಾರೆ.
ಸರ್ಕಾರ ಇರುವುದರೊಳಗಾಗಿ ಕ್ಷೇತ್ರಕ್ಕೆ ಏನಾದರೂ ತೆಗೆದುಕೊಂಡು ಮತದಾರರ ಮನ ಗೆಲ್ಲೋಣ ಎಂದು ತೀರ್ಮಾನಿಸಿ ಈಗ ತಂಗಡಗಿ ಅವರು ಬಿಜೆಪಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಂತ ಕಾಂಗ್ರೆಸ್ ಪಕ್ಷವನ್ನೂ ತಿರಸ್ಕರಿಸುವಂತಿಲ್ಲ.
ಕೆಲವು ದಿನಗಳ ಹಿಂದಷ್ಟೇ ಶಾಸಕ ಶಿವರಾಜ ತಂಗಡಗಿ ಇನ್ನೇನು ಕಾಂಗ್ರೆಸ್ ಸೇರುವುದು ಖಚಿತವಾಗಿತ್ತು. ಅವರಿಗೆ ಟಿಕೆಟ್ ದೃಢಪಟ್ಟಿದೆ ಎಂದು ಕಾಂಗ್ರೆಸ್ನಲ್ಲಿದ್ದ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿದ್ದ ಮುಕುಂದರಾವ್ ಭವಾನಿಮಠ ಪಕ್ಷ ತೊರೆದರು. ಇದರಿಂದ ತಂಗಡಗಿ ಕಾಂಗ್ರೆಸ್ ಸೇರ್ಪಡೆಗೆ ರತ್ನಗಂಬಳಿ ಹಾಕಿದಂತಾಯಿತು.
ಇದಾದ ನಂತರವೇ ಅಚ್ಚರಿ ಬೆಳವಣಿಗೆ ನಡೆದಿದೆ. ಕಾರಟಗಿ ಮತ್ತು ಕನಕಗಿರಿಯಲ್ಲಿ ಯಾವುದಾದರೂ ಒಂದನ್ನು ತಾಲೂಕು ಮಾಡಿದರೆ ತಮಗೆ ಕಂಠಕ ಎಂದು ಅರಿತ ಶಾಸಕ ಶಿವರಾಜ ತಂಗಡಗಿ ಎರಡನ್ನೂ ತಾಲೂಕು ಕೇಂದ್ರ ಮಾಡುವುದಾಗಿ ಹೇಳುವ ಮೂಲಕ ಎರಡು ಭಾಗದ ಜನರ ಮನ ಗೆಲ್ಲಲು ಯತ್ನಿಸಿದರು.
ಅದರಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಬಳಿ ಪಟ್ಟು ಹಿಡಿದು, ಎರಡನ್ನೂ ತಾಲೂಕು ಕೇಂದ್ರನ್ನಾಗಿ ಮಾಡುವಂತೆ ಮನವಿ ಮಾಡಿದರು. ಈ ಬೇಡಿಕೆಯನ್ನು ಈಡೇರಿಸಿದರೆ ನಾನು ಬಿಜೆಪಿಯೊಂದಿಗೆ ಇರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಅದರಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕನಕಗಿರಿ, ಕಾರಟಗಿ ಎರಡನ್ನೂ ತಾಲೂಕು ಕೇಂದ್ರವೆಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಇದರಿಂದ ತಂಗಡಗಿ ಅತ್ಯಂತ ಖುಷಿಯಾಗಿದ್ದಾರೆ. ಆದರೆ, ಅವರಿಗೀಗ ಮುಂದಿನ ದಾರಿ ತಿಳಿಯದಾಗಿದೆ. ತಮ್ಮ ಬೇಡಿಕೆ ಈಡೇರಿಸಿದ ಬಿಜೆಪಿಗೆ ಹೋಗಬೇಕೋ ಅಥವಾ ಈಗಾಗಲೇ ಮಾತುಕತೆಯಾಗಿರುವ ಕಾಂಗ್ರೆಸ್ ಸೇರಬೇಕೋ ಎನ್ನುವ ಸಂದಿಗ್ಧತೆಯಲ್ಲಿ ಅವರು ಸಿಲುಕಿದ್ದಾರೆ. ಮತದಾರರ ಮನವೊಲಿಸುವುದು ಸುಲಭವಾದರೂ ಆಂತರಿಕ ಒಪ್ಪಂದಗಳನ್ನು ಹೇಗೆ ನಿಭಾಯಿಸಬೇಕು ಎಂದು ಚಿಂತೆಗೀಡಾಗಿದ್ದಾರೆ.
ಹಾಗೊಂದು ವೇಳೆ ಶಾಸಕ ಶಿವರಾಜ ತಂಗಡಗಿ ಬಿಜೆಪಿಗೆ ಹೋಗಿದ್ದೇ ಆದರೆ, ಮುಕುಂದರಾವ್ ಭವಾನಿಮಠ ಕಾಂಗ್ರೆಸ್ಗೆ ಮರಳುವ ಸಾಧ್ಯತೆಯೂ ಇದೆ. ಆದರೆ, ಈಗಾಗಲೇ ಬಿಎಸ್ಆರ್ ಕಾಂಗ್ರೆಸಪಕ್ಷದಲ್ಲಿ ಗುರುತಿಸಿಕೊಂಡಿರುವುದರಿಂದ ಅದು ಕಷ್ಟವಾಗಲಿದೆ. ತಂಗಡಗಿ ತೂಗುಯ್ಯಾಲೆಯಲ್ಲಿ ಎಲ್ಲರೂ ತೂಗಾಡುವಂತೆ ಆಗಿದೆ.
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

