ಸುದ್ದಿ ಸಂಕ್ಷೇಪ
ರವಿ ಅಧಿಕಾರ ಸ್ವೀಕಾರ
ಕೊಪ್ಪಳ: ಜಿಲ್ಲಾ ಪಂಚಾಯ್ತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಿ.ಕೆ. ರವಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಪಂ ಸಿಇಓ ಆಗಿದ್ದ ಎಸ್.ರಾಜಾರಾಂ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಇದೀಗ ಸರ್ಕಾರ ಡಿ.ಕೆ. ರವಿ ಅವರನ್ನು ನೇಮಕ ಮಾಡಿದೆ.
ಬಿಎಸ್ವೈಗೆ ಜನತೆ ಪಾಠ ಕಲಿಸಲಿದ್ದಾರೆ: ಬಂಡಿ
ಕುಕನೂರು: ಬಿಜೆಪಿಯಿಂದ ಅಧಿಕಾರ ಪಡೆದು ಪಕ್ಷದ ಧುರೀಣರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆ ಮುಂದಿನ ದಿನಮಾನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಹೇಳಿದರು. ಸ್ಥಳೀಯ ಆರ್ಯರ ಮತ್ತು ಸೊರಟೂರು ಆಯಿಲ್ ಮಿಲ್ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಬಿಜೆಪಿ ಸರ್ಕಾರ ತನ್ನ ಅಧಿಕಾರ ಪೂರೈಸಲಿದೆ ಎಂದ ಅವರು ಒಂದಿಷ್ಟು ಶಾಸಕರು ರಾಜಿನಾಮೆ ಕೊಟ್ಟ ತಕ್ಷಣ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ ಎನ್ನುವುದು ಶುದ್ಧ ಸುಳ್ಳು. ಸರ್ಕಾರ ಬಹುಮತ ಸಾಬೀತು ಪಡಿಸಲು ಸಿದ್ಧವಾಗಿದೆ ಎಂದರು. ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಡಾ. ಎಂ.ಬಿ. ರಾಂಪುರ, ನ್ಯಾಯವಾದಿ ಗವಿಸಿದ್ಧಪ್ಪ ಆರೇರ, ಈಶಪ್ಪ ಆರೇರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ರವಿತೇಜ ಅಬ್ಬಿಗೇರಿ ಇದ್ದರು.
ಯುವತಿ ಆತ್ಮಹತ್ಯೆ
ಕೊಪ್ಪಳ: ಮಕ್ಕಳಾಗದೆ ಮನನೊಂದು ಯುವತಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಇರಕಲ್ಗಡಾ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮೃತಳು ವಿಶಾಲಾಕ್ಷಿ ಬಸಯ್ಯ ಮಲಕಸಮುದ್ರ (24). 2 ವರ್ಷದಿಂದ ಮಕ್ಕಳಾಗದಿದ್ದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆಶವ ಗುರುತಿಗೆ ಸಹಕರಿಸಿ
ಕೊಪ್ಪಳ: ತಾಲೂಕಿನ ಅಗಳಕೇರಾ ಗ್ರಾಮದ ಕೆರೆಯಲ್ಲಿ ಸುಮಾರು 35 ರಿಂದ 40 ವಯಸ್ಸಿನ ಮಹಿಳೆಯ ಮೃತ ದೇಹ ಪತ್ತೆಯಾಗಿದ್ದು, ಈ ಮಹಿಳೆಯ ಗುರುತು ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆ ಪಿಎಸ್ಐ ಮನವಿ ಮಾಡಿದ್ದಾರೆ. ಮೃತ ಮಹಿಳೆ ವಯಸ್ಸು 35 ರಿಂದ 40, ಎತ್ತರ 5.5, ದುಂಡನೆ ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಎರಡು ಕೈಗಳ ಮೇಲೆ ಹೂವಿನ ಹಚ್ಚೆ ಇದೆ. ಮುಖದ ಭಾಗ ಕಿವಿ, ಕೈ ಕಾಲುಗಳ ಚರ್ಮವನ್ನು ಜಲಚರಗಳು ತಿಂದಿವೆ. ಹಸಿರು ಬಣ್ಣದ ಸೀರೆ ಹಾಗೂ ಜಂಪರ ಧರಿಸಿದ್ದು, ಎರಡು ಕೈಯಲ್ಲಿ ಹಸಿರು ಬಳೆ, ಬಲಗೈಲಿ ಬೆಳ್ಳಿ ಬಣ್ಣದ ಖಡಗ, ಮೂಗಿನಲ್ಲಿ ಬಂಗಾರ ಬಣ್ಣದ ಜೋಗೆರ ಮೂಗುತಿ ಧರಿಸಿರುತ್ತಾಳೆ. ಈ ಬಗ್ಗೆ ಮಾಹಿತಿ ಸಿಕ್ಕರೆ ದೂ. ಕೊಪ್ಪಳ ಎಸ್ಪಿ 08539230111, ಡಿಎಸ್ಪಿ 08539230342, ಸಿಪಿಐ ಗ್ರಾಮೀಣ ವೃತ್ತ 08539221333, ಪಿಎಸ್ಐ ಮುನಿರಾಬಾದ್ 08539270333 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

