ಗವಿಮಠ ದಾಸೋಹಕ್ಕೆ ಭಾರಿ ದಾನ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 1
ಕೊಪ್ಪಳ ಗವಿಮಠ ಜಾತ್ರೆಗೆ ಭಕ್ತ ಸಾಗರದಂತೆ ದೇಣಿಗೆಯೂ ಹರಿದು ಬರುತ್ತಿದೆ. ಮಹಾದಾಸೋಹಕ್ಕೆ ಬಹುತೇಕ ಭಕ್ತರು ಕ್ವಿಂಟಲ್ಗಟ್ಟಲೇ ವಸ್ತುಗಳನ್ನು ನೀಡುತ್ತಿದ್ದಾರೆ. ಎಪಿಎಂಸಿ ವರ್ತಕರು 25 ಕ್ವಿಂಟಲ್ ಬೂಂದಿಯನ್ನು ಸಿದ್ಧ ಮಾಡುತ್ತಿದ್ದು, ಭಾನುವಾರ ಮಹಾದಾಸೋಹಕ್ಕೆ ಸಲ್ಲಿಸಲಿದ್ದಾರೆ.
ಮುದ್ದಾಬಳ್ಳಿ ಗ್ರಾಮದ 10-12 ಬಾಣಸಿಗರು ಹಗಲು ರಾತ್ರಿ ಬೂಂದಿ ಸಿದ್ಧತೆ ಕಾಯಕದಲ್ಲಿ ತೊಡಗಿದ್ದಾರೆ. ಇಷ್ಟು ಪ್ರಮಾಣದ ಬೂಂದಿ ಗವಿಮಠದ ಜಾತ್ರೆ ದಾಸೋಹಕ್ಕೆ ದೇಣಿಗೆ ಆಗುತ್ತಿರುವುದು ಇದೇ ಮೊದಲು. ಗವಿಸಿದ್ಧೇಶ್ವರ ಗಂಜ್ (ಎಪಿಎಂಸಿ) ಮಾರುಕಟ್ಟೆ ಪ್ರಾಂಗಣದಲ್ಲಿರುವ ವರ್ತಕರೆಲ್ಲರೂ ಸೇರಿ 12 ಕ್ವಿಂಟಲ್ ಸಕ್ಕರೆ, 6 ಕ್ವಿಂಟಲ್ ಕಡಲೆ ಹಿಟ್ಟು, ಮೂರು ಕ್ವಿಂಟಲ್ ಎಣ್ಣೆ, 25 ಕೆಜಿ ದ್ರಾಕ್ಷಿ ಹಾಗೂ 5 ಕೆಜಿ ಯಾಲಕ್ಕಿ ನೀಡಿದ್ದು, 25 ಕ್ವಿಂಟಲ್ ಬೂಂದಿ ಮಾಡುವ ಕಾರ್ಯ ಭರದಿಂದ ಸಾಗಿದೆ.
200 ಕ್ವಿಂಟಲ್ ಮಾದಲಿ: ಗವಿಸಿದ್ಧೇಶ್ವರ ಗೆಳೆಯರ ಬಳಗ ನೀಡಿದ 150 ಕ್ವಿಂಟಲ್ ಮಾದಲಿ ಇದೆ. ಇತರ ಭಕ್ತರು ಇನ್ನೂ 50 ಕ್ವಿಂಟಲ್ ಮಾದಲಿ ಕೊಟ್ಟಿದ್ದಾರೆ. ಅನೇಕ ಭಕ್ತರು ಬಗೆಬಗೆಯ ಸಿಹಿ ತಯಾರಿಸಿ ತಂದು ಗವಿಮಠಕ್ಕೆ ನೀಡುತ್ತಿದ್ದಾರೆ. ಕೆಲವರು ಹೆಸರು ಹೇಳದೆ ತಮ್ಮ ಕೊಡುಗೆ ಸಲ್ಲಿಸುತ್ತಿದ್ದಾರೆ. ಹೀಗೆ ಬಂದಿರುವ ತುಪ್ಪದ ಪ್ರಮಾಣ ಇದುವರೆಗೆ 10 ಕ್ವಿಂಟಲ್ ಆಗಿದೆ.
ಇನ್ನು ಕಾಳು, ಕಡಿ, ಧಾನ್ಯವನ್ನೂ ಭಕ್ತರು ಮೆರವಣಿಗೆಯಲ್ಲಿ ತಂದು ಕೊಡುತ್ತಿದ್ದಾರೆ. ಗಂಗಾವತಿ, ಕಾರಟಗಿಯಿಂದ 300 ಕ್ವಿಂಟಲ್ ಅಕ್ಕಿ ದಾನ ಬಂದಿದೆ. ಅನೇಕರ ದಾನಗಳು ಇನ್ನಷ್ಟೇ ಲೆಕ್ಕಕ್ಕೆ ಸಿಗಬೇಕಿವೆ.
ಕ್ವಿಂಟಲ್ ಕರಿಬೇವು: ತಾಲೂಕಿನ ಬಿಸರಳ್ಳಿ ಗ್ರಾಮದ ಹನುಮರಡ್ಡಿ ತಿಮ್ಮರಡ್ಡಿ ದಾಸೋಹಕ್ಕೆ 1 ಕ್ವಿಂಟಲ್ ಕರಿಬೇವು ನೀಡಿದ್ದಾರೆ. ನಿತ್ಯ ತಡರಾತ್ರಿ 2-3 ಗಂಟೆ ವರೆಗೂ ಮಹಾಪ್ರಸಾದ ನಡೆದಿರುತ್ತದೆ. ಮತ್ತೆ ಬೆಳಗ್ಗೆಯೇ ಪ್ರಾರಂಭವಾಗುತ್ತದೆ. ಜಾತ್ರೆಗೆ ಬಂದಿರುವ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ನೂರಾರು ಕಾರ್ಯಕರ್ತರು, ಸ್ವಯಂ ಸೇವಕರು ಬಿಡುವಿಲ್ಲದೆ ದಾಸೋಹದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮಗಳಿಂದ ಸ್ವಯಂಸೇವಕರನ್ನು ಕಳುಹಿಸುವ ಪರಿಪಾಠ ಆರಂಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

