ಥೂ.. ಇವರೆಂಥ ಅಧಿಕಾರಿಗಳು!
ಮಾಲೂರು: ಅಧಿಕಾರಿಗಳ ಗೈರು ಹಾಜರಿ ಪ್ರಶ್ನಿಸಿ ಸಾರ್ವಜನಿಕರು ಪ್ರತಿಭಟನೆಗಿಳಿದು ಗ್ರಾಮ ಸಭೆಯನ್ನೇ ಮುಂದೂಡಿಸಿದ ಘಟನೆ ತಾಲೂಕಿನ ಮಡಿವಾಳ ಪಂಚಾಯ್ತಿಯಲ್ಲಿ ಗುರುವಾರ ನಡೆದಿದೆ.
ಸರ್ಕಾರಿ ಇಲಾಖೆಗಳಿಗೆ ಹಾಗೂ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಗುರುವಾರ ನಡೆಯಲಿರುವ ಗ್ರಾಮ ಸಭೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ಪಂಚಾಯ್ತಿ ಅಧ್ಯಕ್ಷೆ ನಾರಾಯಣಮ್ಮ ನೇತೃತ್ವದಲ್ಲಿ ಸಭೆ ಆರಂಭವಾಯಿತು. ಜಿಪಂ ಸದಸ್ಯೆ ಯಲ್ಲಮ್ಮ, ತಾಪಂ ಸದಸ್ಯ ಎಸ್.ವಿ.ಲೋಕೇಶ್, ನೋಡಲ್ ಅಧಿಕಾರಿ ಭವ್ಯರಾಣಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಮತಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಆದರೆ ತೋಟಗಾರಿಕೆ, ಕೃಷಿ ಹಾಗೂ ಅರಣ್ಯ ಬಿಟ್ಟರೆ ಬೇರೆ ಯಾವ ಪ್ರಮುಖ ಇಲಾಖೆ ಅಧಿಕಾರಿಗಳು ಬಂದಿರಲಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಎಲ್ಲ ಅಧಿಕಾರಿಗಳು ಬಂದ ನಂತರ ಸಭೆ ನಡೆಸುವಂತೆ ಒತ್ತಾಯಿಸಿದರು.
ಕಳದೆ ಸಭೆಯಲ್ಲೂ ಸರ್ಕಾರಿ ಅಧಿಕಾರಿಗಳು ಗೈರು ಹಾಜರಾದಾಗ ಮುಂದಿನ ಸಭೆಯಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ನೋಡಲ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗಲೂ ಅಧಿಕಾರಿಗಳು ಬಂದಿಲ್ಲ. ಅವರು ಬರದೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಜಿಪಂ ಸದಸ್ಯೆ ಯಲ್ಲಮ್ಮ, ತಾಪಂ ಸದಸ್ಯ ಲೋಕೇಶ್ ಹಾಗೂ ಪಂಚಾಯ್ತಿ ಸದಸ್ಯರು ದನಿಗೂಡಿಸಿ ನೋಡಲ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಪಿಡಿಒ ಸುಮತಿ, ಎಲ್ಲ ಸರ್ಕಾರಿ ಇಲಾಖೆಗಳಿಗೆ ಸಭೆ ನಡೆಯುವ ಬಗ್ಗೆ ಮಾಹಿತಿ ನೀಡಿ ಅವರಿಂದ ಸಹಿ ಪಡೆಯಲಾಗಿದೆ. ಅವರ ಗೈರು ಹಾಜರಿ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಷ್ಟೇ ನನಗಿರುವ ಅಧಿಕಾರ ಎಂದರು.
ನೋಡಲ್ ಅಧಿಕಾರಿ ಭವ್ಯರಾಣಿ ಮಾತನಾಡಿ, ಕಳೆದೆರಡು ಸಭೆಗಳಿಂದ ಗೈರು ಹಾಜರಾಗುತ್ತಿರುವ ಇಲಾಖೆ ಅಧಿಕಾರಿಗಳ ಬಗ್ಗೆ ಫೋನ್ ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಇಲ್ಲಿನ ವರದಿಯನ್ನು ಶೀಘ್ರ ಕಳುಹಿಸಲಾಗುವುದು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಯಿಂದ ಸಭೆಯನ್ನು ಆ.8ರಂದು ಮುಂದೂಡಲಾಗುತ್ತಿದೆ ಎಂದರು.
ಅಧಿಕಾರಿಗಳ ಈ ಬೇಜವಾಬ್ದಾರಿ ನಡುವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ತಾಪಂ ಸದಸ್ಯ ಲೋಕೇಶ್, ಈ ಭಾಗದ ಜನರಲ್ಲಿ ಬೆಸ್ಕಾಂ, ಕಂದಾಯ, ಮಹಿಳಾ ಮತ್ತು ಮಕ್ಕಳ ಇಲಾಖೆಗಳಲ್ಲಿ ಕೇಳುವ ಹಲವು ಸಮಸ್ಯೆಗಳಿದ್ದವು. ಆದರೆ ಅಧಿಕಾರಿಗಳ ಗೈರು ಹಾಜರಿ ಸಾರ್ವಜನಿಕರಿಗೆ ನಿರಾಸೆ ಮೂಡಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎದರು.
ಪಂಚಾಯ್ತಿ ಸದಸ್ಯ ರಾಮಚಂದ್ರ ಮಾತನಾಡಿ, ಗ್ರಾಮ ಅಭಿವೃದ್ಧಿ ದೇಶದ ಅಭಿವೃದ್ಧಿ ಎನ್ನುತ್ತಾರೆ. ಆದರೆ ಗ್ರಾಮಗಳ ಸಮಸ್ಯೆ ಕೇಳುವ ಕಿವಿ ನಮ್ಮ ಅಧಿಕಾರಿಗಳಿಗೆ ಇಲ್ಲ. ಇಂತಹ ಅಧಿಕಾರಿಗಳಿಂದ ಗ್ರಾಮ ಅಭಿವೃದ್ಧಿ, ಗ್ರಾಮಸ್ಥರ ಆರ್ಥಿಕ ಸ್ಥಿತಿ ಬದಲಾಗುವುದೇ ಎಂದು ಪ್ರಶ್ನಿಸಿದರು. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ಆಶಯದಿಂದ ಸಭೆಗೆ ಬಂದಿದ್ದ 500ಕ್ಕೂ ಹೆಚ್ಚು ಗ್ರಾಮಸ್ಥರು ಅಧಿಕಾರಿಗಳನ್ನು ಬೈಯುತ್ತ ವಾಪಸ್ ತೆರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

