ಕಾಮದ ಕಣ್ಣು ಮಂಜಾಗಲಿ
ಚಿಕ್ಕಬಳ್ಳಾಪುರ: ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಬಲ ಕಾಯ್ದೆ ರೂಪಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿ ಸಿಪಿಎಂ, ಮಹಿಳಾ, ರೈತ, ಕನ್ನಡಪರ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.
ಸಾರ್ವಜನಿಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದರು. ಔಷಧಾಲಯಗಳು ಮತ್ತು ಆಸ್ಪತ್ರೆಗಳು, ಕೇಂದ್ರ ಅಂಚೆ ಕಚೇರಿಯನ್ನು ಹೊರತುಪಡಿಸಿ ಹೋಟೆಲ್, ಚಲನಚಿತ್ರ ಮಂದಿರ, ಖಾಸಗೀ ಮತ್ತು ಸರ್ಕಾರಿ ಸಂಸ್ಥೆಗಳು ರಜೆ ಘೋಷಿಸಿದ್ದವು. ಶಾಲಾ ಕಾಲೇಜುಗಳಿಗೆ ರಜೆಯ ಯಾವುದೇ ಮುನ್ಸೂಚನೆ ನೀಡದ ಕಾರಣ ಗೊಂದಲ ಮೂಡಿತ್ತಾದ್ದರೂ ಯಾವುದೂ ಕಾರ್ಯ ನಿರ್ವಹಿಸಲಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಲಾರಿ ಸೇರಿದಂತೆ ಬಹುತೇಕ ವಾಹನಗಳು ನಗರ ಪ್ರದೇಶದಲ್ಲಿ ಸಂಚರಿಸಲಿಲ್ಲ. ರಸ್ತೆಗಿಳಿದ ಕೆಲ ವಾಹನಗಳ ಸಂಚಾರಕ್ಕೆ ಪ್ರತಿಭಟನಾಕಾರರು ಹಲವೆಡೆ ತಡೆಯೊಡ್ಡಿದರು.
ಬೆಳಿಗ್ಗೆ 6 ಗಂಟೆಯಾಗುತ್ತಿದ್ದಂತೆ ನಗರದ ಶಿಡ್ಲಘಟ್ಟ ವೃತ್ತ, ಬಲಮುರಿಗಣಪತಿ ವೃತ್ತದ ರಸ್ತೆಯಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ಕನ್ನಡಪರ ಸಂಘಟನೆಗಳ ಮುಖಂಡರು ಬೈಕ್ಗಳಲ್ಲಿ ದಿಕ್ಕಾರ ಕೂಗುತ್ತ ಬೈಕ್ ರ್ಯಾಲಿ ನಡೆಸಿ ಎಲ್ಲೂ ಅಂಗಡಿ ಮುಂಗಟ್ಟುಗಳು ಕಾರ್ಯ ನಿರ್ವಹಿಸದಂತೆ ನೋಡಿಕೊಂಡರು. ನಂತರ ನಗರದ ರೈಲ್ವೆ ನಿಲ್ದಾಣಕ್ಕೆ ತೆರಳಿ ಚಿಕ್ಕಬಳ್ಳಾಪುರ-ಬೆಂಗಳೂರು ರೈಲನ್ನು ಕೆಲ ಸಮಯ ತಡೆದರು.
ಸಿಪಿಎಂ, ಜೀವಿಕ, ರೈತ, ಮಹಿಳಾ, ವಿದ್ಯಾರ್ಥಿ ಪರ ಹಾಗೂ ಕರವೇ, ಕರುನಾಡಸೇನೆ, ಜಯಕರ್ನಾಟಕ ಸೇರಿದಂತೆ ಕನ್ನಡ ಪರ ಸಂಘಟನೆಗಳು ನಾಡಧ್ವಜಗಳನ್ನಿಡಿದು ನಗರದಲ್ಲಿ ಪ್ರತಿಭಟನೆ ನಡೆಸಿದವು. ಬಿ.ಬಿ.ರಸ್ತೆ, ಎಂ.ಜಿ. ರಸ್ತೆಯಲ್ಲಿ ಮೆರವಣಿಗೆ ಹೊರಟು ಪ್ರಬಲ ಮಹಿಳಾ ಕಾಯ್ದೆಯನ್ನು ರೂಪಿಸಬೇಕೆಂದು ಒತ್ತಾಯಿಸಿತು. ಪ್ರತಿಭಟನೆಯಲ್ಲಿ ಮುನಿವೆಂಕಟಪ್ಪ, ಮುನಿಕೃಷ್ಣಪ್ಪ, ಸುಷ್ಮಾ ಶ್ರೀನಿವಾಸ್, ಜೀವಿಕ ರತ್ನಮ್ಮ, ಅಗಲಗುರ್ಕಿ ಚಲಪತಿ, ಜಯಂತ್ , ನಾರಾಯಣಸ್ವಾಮಿ, ಮಂಚನಬಲೆ ಶ್ರೀನಿವಾಸ್, ಯಲುವಹಳ್ಳಿ ಸೊಣ್ಣೇಗೌಡ, ಆಂಜನೇಯರೆಡ್ಡಿ, ಭಕ್ತರಹಳ್ಳಿ ಭೈರೇಗೌಡ ಭಾಗವಹಿಸಿದ್ದರು.
ಪ್ರತಿಭಟನಾಕಾರರಿಗೆ ಎಚ್ಚರಿಕೆ: ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಡಿವೈಎಸ್ ಪಿ. ಚಿನ್ನಸ್ವಾಮಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ರಸ್ತೆಯಲ್ಲಿ ವಾಹನಗಳು ತಡೆದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನಿಗದಿತ ಸಮಯದಲ್ಲಿ ರಸ್ತೆ ತಡೆ ನಡೆಸಿ, ಆದರೆ, ಯಾವುದೇ ವಾಹನಗಳನ್ನು ಬಿಡದಿದ್ದರೆ ಪ್ರಕರಣ ದಾಖಲಿಸಿ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಾವು ಬಲವಂತ ಮಾಡುತ್ತಿಲ್ಲ, ಮನವಿ ಮಾಡುತ್ತಿದ್ದೇವೆ ಎಂದು ಜನ ತಿಳಿಸಿದಾಗ ಮಾತಿನ ಚಕಮಕಿ ಉಂಟಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

