ಕೋಲಾರ

ಇನ್ನೂ ನಿಲ್ಲದ ಕಾಮುಕರ ಅಟ್ಟಹಾಸ

Published On :

ಪಾ.ಶ್ರೀ.ಅನಂತರಾಮ್
ಕೋಲಾರ: ಜಿಲ್ಲೆಯಲ್ಲಿ ಕಾಮುಕರ ಅಟ್ಟಹಾಸ ಇನ್ನು ನಿಂತಿಲ್ಲ. ಸರ್ಕಾರ 'ಕಾಮದಹನ'ಕ್ಕಾಗಿ ಗೂಂಡಾ ಕಾಯಿದೆ ಜಾರಿಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ವಿವಿಧ ಸಂಘ ಸಂಸ್ಥೆಗಳು ಅತ್ಯಾಚಾರಿಗಳಿಗೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರಿಗೆ ಬಿಸಿ ಮುಟ್ಟಿಸಲು ಪ್ರತಿಭಟನೆ, ಜಿಲ್ಲಾ ಬಂದ್ ನಡೆಸಿದರೂ ದಿನಕ್ಕೊಂದು ಘಟನೆಗಳು ಬೆಳಕಿಗೆ ಬರುತ್ತಿವೆ. ಪ್ರಾರಂಭದಲ್ಲಿ ಕೊಂಚ ಎಡವಿದರೂ ಜನತೆಯ ಆಕ್ರೋಶದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಅತ್ಯಾಚಾರ ಮತ್ತು ಮಹಿಳೆಯವರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧಿಸಿದ ದೂರು ಬಂದ ಕೂಡಲೇ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯಿಂದ ಜನ ಜಾಗೃತಿ ಸಭೆಗಳು ಮುಂದುವರೆದಿವೆ. ಆದರೂ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಬುದ್ಧಿಮಾಂಧ್ಯ ಯುವತಿಯ ಮೇಲೆ ಅತ್ಯಾಚಾರ ಹಾಗೂ ಪುಂಡನೊಬ್ಬ ತಡ ರಾತ್ರಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿರುವ ಘಟನೆಯಿಂದ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಅತ್ಯಾಚಾರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ವ್ಯಕ್ತಿ ಎಂಥ ದೊಡ್ಡ ಮನೆತನಕ್ಕೆ ಸೇರಿರಲಿ, ರಾಜಕಾರಣಿಗಳ ಬೆಂಬಲಿಗನಾಗಿರಲಿ, ಯಾವುದೇ ಜಾತಿ-ಧರ್ಮದವನಾಗಿರಲಿ ಕಾನೂನು ರೀತಿ ಶಿಕ್ಷೆ ಅನುಭವಿಸುವುದಕ್ಕೆ ಸಮಾಜ ಅವಕಾಶ ಮಾಡಿಕೊಡಬೇಕು. ರಾಜಿ ಸಂಧಾನ, ಜಾತಿ ವ್ಯಾಮೋಹ, ಬಂಧುತ್ವ, ಓಟಿನ ರಾಜಕಾರಣವನ್ನು ಬದಿಗೊತ್ತದಿದ್ದರೆ ಈ ಸಮಸ್ಯೆ ಹಾಗೆಯೇ ಮುಂದುವರಿದುಕೊಂಡು ಹೋಗುತ್ತದೆ.
ಕೋಲಾರ ಜಿಲ್ಲೆ ಹೋರಾಟಗಳ ಬೀಡು ಎಂಬುದು ನಿಜ. ಆದರೆ, ಪುಂಡರ ಹಾವಳಿ ತಡೆಯಲು ಸರ್ಕಾರ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ರಾಜಕೀಯ ಹಸ್ತಕ್ಷೇಪ,ಅಟ್ರಾಸಿಟಿಯ ದುರುಪಯೋಗ, ದಲಿತ ಕಾಲೋನಿಗಳಲ್ಲಿ ಹೆಚ್ಚಿನ ಭದ್ರತೆ, ಜಮೀನು, ಹೊಲ ಗದ್ದೆಗಳಿಗೆ ಹೋಗುವ ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿಶೇಷ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಯುವಕರ ಮನಸ್ಸುಗಳನ್ನು ಹಾಳುಗೇಡುವುತ್ತಿರುವ ಚಟುವಟಿಕೆಗಳ ನಿಗ್ರಹಕ್ಕೆ ಗಮನ ನೀಡಬೇಕಾಗಿದೆ. ಆಯಾ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆ, ಐಕ್ಯತೆಯ ಕೂಟಗಳನ್ನು ನಡೆಸಿ ಕೆಟ್ಟ ಮನಸ್ಸುಗಳನ್ನು ಪರಿವರ್ತಿಸುವ ಜವಾಬ್ದಾರಿಯನ್ನು ಊರಿನ ಮುಖಂಡರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ವಹಿಸಿಬೇಕು. ಒಂದು ವೇಳೆ ಏನಾದರೂ ತಪ್ಪುಗಳು ಆದಲ್ಲಿ ಸಂಘ ಸಂಸ್ಥೆಗಳನ್ನು ಹಾಗೂ ಊರಿನ ಮುಖಂಡರನ್ನು ಹೊಣೆ ಮಾಡಿದಲ್ಲಿ, ಪ್ರತಿಯೊಂದು ಊರಿನಲ್ಲಿ ಭಯ-ಭಕ್ತಿ ತಾನಾಗಿಯೇ ವೃದ್ಧಿಸುತ್ತದೆ. ನೆಮ್ಮದಿಯ ವಾತಾವಣ ಮೂಡುವುದರಲ್ಲಿ ಅನುಮಾನವಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.