ಗಂಡನ ಕೊಂದ ಕೊಲೆಗಾತಿ!
ಕೋಲಾರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ಘಟನೆ ಮೂರು ತಿಂಗಳ ನಂತರ ಬೆಳಕಿಗೆ ಬಂದಿದ್ದು, ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರದ ಹರೀಶ್ ಕೊಲೆಯಾಗಿದ್ದ ವ್ಯಕ್ತಿ. ಪೊಲೀಸರು ಮೃತನ ಪತ್ನಿ ಸವಿತಾ ಹಾಗೂ ಪ್ರಿಯಕರ ಸುನೀಲ್ನನ್ನು ಬಂಧಿಸಿದ್ದಾರೆ. ಸವಿತಾ ಮತ್ತು ಸುನೀಲ್ ನಡುವೆ ಇದ್ದ ಪ್ರೇಮಾನುಬಂಧವನ್ನು ಹರೀಶ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಿಯತಮೆಯ ಸೂಚನೆಯಂತೆ ಪ್ರಿಯಕರ ಹರೀಶ್ನನ್ನು ನಂಬಿಸಿ ಕೆ.ಬಿ.ಹೊಸಹಳ್ಳಿಗೆ ಕರೆತಂದು ಕೊಲೆ ಮಾಡಿದ್ದ. ಸಾಕ್ಷ್ಯ ಮುಚ್ಚಿ ಹಾಕಲು ಹರೀಶ್ ಶವವನ್ನು ಕೆರೆಯಲ್ಲಿ ಹೂತು ಹಾಕಿದ್ದ. ಮೃತನ ತಂದೆ ಮತ್ತು ತಾಯಿಗೆ ಸುನೀಲ್ ಮತ್ತು ಸೊಸೆಯ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು.
ಏನಿದು ಪ್ರಕರಣ?: ಹರೀಶ್ ದೇವನಹಳ್ಳಿ ತಾಲೂಕು ವಿಜಯಪುರ ವಾಸಿ. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಕೆ.ಬಿ.ಹೊಸಹಳ್ಳಿ ಮೂಲದ ಸುನೀಲ್, ಹರೀಶ್ ಪತ್ನಿ ಸವಿತಾ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಇದನ್ನು ಬಲವಾಗಿ ಆಕ್ಷೇಪಿಸಿದ ಪತಿ ಇರುವವರೆಗೂ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಅದಕ್ಕಾಗಿ ತನಗೆ ಒಲ್ಲದ ಗಂಡನನ್ನು ಮುಗಿಸಿಬಿಡುವಂತೆ ಆಕೆ ಪ್ರಿಯಕರ ಸುನೀಲ್ಗೆ ತಿಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವಯೋಜಿತ ನಿರ್ಧಾರದಂತೆ ಹರೀಶ್ಗೆ ಹೆಚ್ಚಾಗಿ ಮದ್ಯ ಸೇವನೆ ಮಾಡುವಂತೆ ಮಾಡಿ ಪ್ರಜ್ಞೆ ತಪ್ಪಿಸಿ, ಚಾಕುವಿನಿಂದ ಹರೀಶ್ನ ಎದೆ, ಹೊಟ್ಟೆಗೆ ಇರಿದು ಕೊನೆಗೆ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ ಸುನೀಲ್. ನಂತರ ಶವವನ್ನು ಕೆರೆಯಲ್ಲಿ ಹೂತ್ತು ಶವ ಮೇಲಕ್ಕೆ ಬರದಂತೆ ಕಲ್ಲು ಹಾಕಿದ್ದ. ಮೃತನ ಕಡೆಯವರಿಗೆ ವಿಷಯ ಮುಚ್ಚಿಸಲು ಹರೀಶ್ ನಾಪತ್ತೆಯಾಗಿರುವುದಾಗಿ ಪುಕಾರು ಎಬ್ಬಿಸಲಾಗಿತ್ತು. ಮೃತನ ಕಡೆಯವರು ವ್ಯಕ್ತಪಡಿಸಿದ್ದ ಅನುಮಾನ ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪರಿಶೀಲನೆ: ಬುಧವಾರ ವಿಜಯಪುರ ಹಾಗೂ ವೇಮಗಲ್ ಪೊಲೀಸರು ಸ್ಥಳಕ್ಕೆ ಆರೋಪಿಯೊಂದಿಗೆ ಬಂದ ತಹಸೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದರು. ನಂತರ ಜಾಲಪ್ಪ ಆಸ್ಪತ್ರೆಯ ವೈದ್ಯರಿಂದ ಸ್ಥಳದಲ್ಲೇ ಶವ ಪರೀಕ್ಷೆ ಸ್ಥಳದಲ್ಲಿಯೇ ಮಾಡಲಾಯಿತು.ದೊಡ್ಡಬಳ್ಳಾಪುರ ಡಿವೈಎಸ್ಪಿ ಕೋನಪ್ಪ ರೆಡ್ಡಿ, ವಿಜಯಪುರ ಸಿಪಿಐ ಮಹೇಶ್ಕುಮಾರ್, ಪಿಎಸ್ಐ ಶಿವಕುಮಾರ್, ವೇಮಗಲ್ ಠಾಣೆಯ ಪಿಎಸ್ಐ ಯಶ್ವಂತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಂಚನೆ: ದೂರು ದಾಖಲು
ಕೆಜಿಎಫ್: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕಾಂಗ್ರೆಸ್ನ ಸ್ಥಳೀಯ ಮುಖಂಡ ಮುತ್ತುಮಾಣಿಕ್ಯಂ ಲಕ್ಷಾಂತರ ರುಪಾಯಿ ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರು ಉರಿಗಾಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೆಚ್ಚಿನ ತನಿಖೆಗಾಗಿ ದೂರನ್ನು ಬೆಂಗಳೂರಿನ ಗಂಗಾಪುರ ಠಾಣೆಗೆ ವರ್ಗಾಯಿಸಲಾಗಿದೆ. ಉರಿಗಾಂ ಠಾಣೆ ವ್ಯಾಪ್ತಿಯ ನಾರ್ತ್ ಟ್ಯಾಂಕ್ ಬ್ಲಾಕ್ ನಿವಾಸಿ ಮುತ್ತುಮಾಣಿಕ್ಯಂ ಅವರು ಬೆಂಗಳೂರಿನ ಗಂಗಾಪುರ ನಿವಾಸಿ ವಳ್ಳರಸಿ ಮಹಿಳೆಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 7 ಲಕ್ಷ ಪಡೆದಿದ್ದಾರೆ. ಹಣ ಪಡೆದು ನಾಲ್ಕು ವರ್ಷವಾದರೂ ಕೆಲಸ ಕೊಡಿಸಿಲ್ಲ. ಹಣ ವಾಪಸ್ ನೀಡುವಂತೆ ಮಹಿಳೆ ಒತ್ತಾಯಿಸಿದಾಗ 4 ಲಕ್ಷ ಮಾತ್ರ ಕೊಟ್ಟಿದ್ದಾರೆ. ಉಳಿದ 3 ಲಕ್ಷ ಕೊಡದೆ ವಂಚಿಸಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.
ಟಗರು ಕದ್ದೊಯ್ದರು
ಕೆಜಿಎಫ್: ಮನೆ ಮುಂದೆ ಕಟ್ಟಿಹಾಕಿದ್ದ ಟಗರು ಕದ್ದೊಯ್ದ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಂಚಗುಂಟಹಳ್ಳಿ ಗ್ರಾಮದ ನಿವಾಸಿ ಗೋವಿಂದಪ್ಪ ಎಂಬುವರು ರಾತ್ರಿ ಮಲಗುವ ಮುನ್ನ ತಮ್ಮ ಮನೆಯ ಮುಂದೆ ಟಗರು ಕಟ್ಟಿಹಾಕಿದ್ದರು. ರಾತ್ರಿ 1.30ಕ್ಕೆ ಎಚ್ಚರಗೊಂಡಿದ್ದು, ಹೊರಗೆ ಬಂದು ನೋಡಿದಾಗ ಟಗರನ್ನು ಕಳ್ಳರು ಬಿಚ್ಚಿಕೊಂಡು ಹೋಗಿದ್ದು ಗೊತ್ತಾಗಿದೆ. ಗೋವಿಂದಪ್ಪ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ ತಾಳದೆ ಆತ್ಮಹತ್ಯೆ
ಚಿಂತಾಮಣಿ: ಗಂಡನ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಣಿಯೊಬ್ಬಳು ಮಂಗಳವಾರ ರಾತ್ರಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ತಾಲೂಕಿನ ನಾಯಿಂದ್ರಹಳ್ಳಿ ಗ್ರಾಮದ ಅನಿತ(25) ಕೋಂ ಮೋಹನ್ ಎಂಬ ಗೃಹಣಿ ಮಂಗಳವಾರ ರಾತ್ರಿ ಕೊಠಡಿಯೊಂದರಲ್ಲಿ ಕುತ್ತಿಗೆಗೆ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಕೋಲಾರ ತಾಲೂಕಿನ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇರಾಳ ಗ್ರಾಮದ ಬೈರಾರೆಡ್ಡಿ ಮತ್ತು ನಾನಮ್ಮ ಎಂಬವರ ಮಗಳನ್ನು ತನ್ನ ಸೋದರ ಮಾವ ಮೋಹನ್ಗೆ ಕೊಟ್ಟು 6 ವರ್ಷಗಳಿಂದ ಹಿಂದೆ ಮದುವೆ ಮಾಡಲಾಗಿತ್ತು.
ಮದುವೆ ಸಮಯದಲ್ಲಿ ಚಿನ್ನ ಮತ್ತು ವರೋಪಚಾರ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆಗಾಗಿ ಮೋಹನ್ ತನ್ನ ಮಗಳನ್ನು ಪೀಡಿಸುತ್ತಿರುವುದಾಗಿ ಪೋಲೀಸರ ಮುಂದೆ ಹೇಳಿರುವುದಾಗಿ ಮೃತಳ ತಂದೆ ದೂರು ನೀಡಿದ್ದಾರೆ. ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿ ಭೇಟಿ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

