ಕೋಲಾರ

ಶ್ರಮಯೇವ ಜಯತೆ!

Published On :

ಮಾಲೂರು: ಬೆವರನ್ನು ಹರಿಸಿ ದೇಶ ಕಟ್ಟುವ ಶ್ರಮಿಕರಿಗೆ ಸಿಗಬೇಕಾಗಿದ್ದ ಗೌರವಗಳು ಈ ದೇಶದಲ್ಲಿ ಕೈಗಾರಿಕೋದ್ಯಮಿಗಳ ಪಾಲಾಗುತ್ತಿರುವುದು ಈ ದೇಶದ ದೊಡ್ಡ ದುರಂತ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಸರ್ವಾಧ್ಯಕ್ಷ ಸಾಹಿತಿ ವೆಂಕಟಾಪು ಸತ್ಯಂ ಹೇಳಿದರು.
ತಾಲೂಕಿನ ಚಿಕ್ಕತಿರುಪತಿಯಲ್ಲಿ ಶನಿವಾರ ನಡೆದ 3 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ, ಸರ್ಕಾರವನ್ನೇ ನಿಯಂತ್ರಿಸುವ ಕೈಗಾರಿಕೋದ್ಯಮಿಗಳ ಕೈಯಿಂದ ಸಮಾಜವನ್ನು ರಕ್ಷಿಸಬೇಕಾಗಿದೆ. ಸಮಾನತೆಯ ಸಮಾಜ ನಿರ್ಮಿಸಬೇಕಾಗಿದೆ. ನಮ್ಮ ದೇಶದ ಸಂವಿಧಾನ ಅತಿ ಶ್ರೇಷ್ಠವಾಗಿದ್ದು, ಅದನ್ನು ಗೌರವಿಸಿ ಅದರಂತೆ ನೆಡೆದುಕೊಂಡರೆ ಸಾಕು ದೇಶದಲ್ಲಿ ಉತ್ತಮ ಸಮಾನತೆಯ ಸಮಾಜ ನಿರ್ಮಿಸಬಹುದು ಎಂದರು.
ವಚನ ಸಾಹಿತ್ಯ ಚಳವಳಿ ಪ್ರಪಂಚ ಕಂಡ ಅತಿ ಶಕ್ತಿಯುತ ಸಾಹಿತ್ಯ ಪರಂಪರೆಯಾಗಿದೆ ಎಂದ ವೆಂಕಟಾಪು ಸತ್ಯಂ, ಸಂಸ್ಕೃತಿ, ಇಂಗ್ಲಿಷ್ ಭಾಷೆಗಳಿಗೆ ನೀಡುವ ಗೌರವವನ್ನು ಜೀವ ಭಾಷೆಯಾಗಿರುವ ಕನ್ನಡಕ್ಕೆ ನೀಡದಿರುವುದು ದುರಂತ ಎಂದರು.
ನಿಕಟ ಪೂರ್ವ ಅಧ್ಯಕ್ಷ ಕವಿ ಕೃಷ್ಣಪ್ಪ ಮಾತನಾಡಿ, ಇಂತಹ ಸಮ್ಮೇಳವು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸುವ ವೇದಿಕೆಯಾಗಬೇಕು. ಸಾಹಿತ್ಯ ಕ್ಷೇತ್ರದಲ್ಲಿರುವವರು ಕನ್ನಡ ಸಾಹಿತ್ಯ ಕೃತಿಗಳನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಿ ಕನ್ನಡ ಸಾಹಿತ್ಯದ ಕಂಪನ್ನು ಎಲ್ಲಡೆ ಪಸರಿಸುವಂತೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ದಂಪತಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಮಧುಸೂಧನ್ ಕಾರ್ಯಕ್ರಮ ನಿರೂಪಿಸಿದರು.
ಧ್ವಜ ಹಸ್ತಾಂತರ
ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ ಅವರು ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ರವರಿಗೆ ಹಸ್ತಾಂತರಿಸಿದರು. ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ಅವರ 'ನೇಸರು ನನ್ನ ದೇವರು' ಪುಸ್ತಕವನ್ನು ಹಾಗೂ ಸಮ್ಮೇಳನದ ಅಂಗವಾಗಿ ಅಶ್ವಥ್ ರೆಡ್ಡಿ ಸಂಪಾದಕತ್ವದ ನೀರು-ತೇರು ಪುಸ್ತಕವನ್ನು ಶಾಸಕ ಮಂಜುನಾಥ್ ಗೌಡ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಯಲ್ಲಮ್ಮ, ರತ್ನಮ್ಮ, ಯಶೋಧಮ್ಮ, ತಾ.ಪಂ. ಅಧ್ಯಕ್ಷೆ ನಾಗವೇಣಿ, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ತಹಸೀಲ್ದಾರ್ ಶಿವುಕುಮಾರ್,ತಾ.ಪಂ.ಸದಸ್ಯರಾದ ಪುಟ್ಟಸ್ವಾಮಿ,ಲೋಕೇಶ್,ರಾಜಪ್ಪ, ಇಓ ಸಂಜೀವಪ್ಪ, ದಾನಿ ಡಾ.ವೀರಾಸ್ವಾಮಿ ರೆಡ್ಡಿ, ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಇದ್ದರು.
ಸಭಿಕರ ನಡುವೆ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್
ಸಾಹಿತ್ಯ ಸಮ್ಮೇಳನದ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ರವರು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಆಶ್ಚರ್ಯ ತಂದಿತ್ತು. ಸಮ್ಮೇಳನಾಧ್ಯಕ್ಷರ,ಉದ್ಘಾಟಕರ ನಡುವೆ ವೇದಿಕೆ ಹಂಚಿಕೊಳ್ಳಬೇಕಾಗಿದ್ದ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಸಭಿಕರ ನಡುವೆ ಕುಳಿತು ಸಮ್ಮೇಳನವನ್ನು ವೀಕ್ಷಿಸಿದ್ದು ಸಾಹಿತ್ಯಾಸಕ್ತರ ಗಮನ ಸೆಳೆಯಿತು.  ತಮ್ಮ ವರ್ತನೆ ಕುರಿತು ಕನ್ನಡಪ್ರಭ ಜತೆ ಮಾತನಾಡಿದ ಜೆ.ಜಿ.ನಾಗರಾಜ್, ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಉದ್ಘಾಟಕರು ಹಾಗೂ ಕಸಾಪ ಜಿಲ್ಲಾಧ್ಯಕ್ಷರು. ಆದರೆ ಇಲ್ಲಿನ ಸಂಘಟಿಕರಿಗೆ ತುಮಕೂರಿನಿಂದ ಸಮ್ಮೇಳನ ಉದ್ಘಾಟಿಸಲು ಬಂದಿದ್ದ ಹಿರಿಯ ಸಾಹಿತಿ ನಟರಾಜ್ ಬೂದಾಲ್‌ರನ್ನು ಎಲ್ಲಿ ಆಸನ ನೀಡಬೇಕೆಂಬ ಜ್ಞಾನವಿದ್ದಂತಿಲ್ಲ. ಕಸಾಪ ಜಿಲ್ಲಾಧ್ಯಕ್ಷರಿಗೆ ಹೇಗೆ ಮಾರ್ಯಾದೆ ನೀಡಬೇಕೆಂಬುದು ಗೋತ್ತಿಲ್ಲ ಅನಿಸುತ್ತದೆ. ವೇದಿಕೆಯಲ್ಲಿ ಅವಶ್ಯವಿರುವವರನ್ನು ಬಿಟ್ಟು ಎಲ್ಲ ನುಗಿದ್ದು, ಈ ಅವಾಂತರಗಳಿಗೆ ಕಾರಣವಾಗಿರಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.