760 ಯೂನಿಟ್ ರಕ್ತ ಸಂಗ್ರಹ
ಚಿಕ್ಕಬಳ್ಳಾಪುರ: ಇಲ್ಲಿನ ಸಿವಿವಿ ಕ್ಯಾಂಪಸ್ನಲ್ಲಿ 760 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ರಾಜ್ಯದಲ್ಲಿಯೇ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಇಲ್ಲಿವರೆಗೂ ಇನ್ಫೋಸೀಸ್ 745 ಯೂನಿಟ್ ರಕ್ತವನ್ನು ಸಂಗ್ರಹಿಸಿರುವುದು ರಾಜ್ಯ ಮಟ್ಟದ ದಾಖಲೆಯಾಗಿದ್ದು ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚಿಗೆ ಜಾಗೃತಿ ಮೂಡಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
18ನೇ ದತ್ತಿ ದಿನಾಚರಣೆ ಮತ್ತು ಸಿವಿವಿ ಜಯಂತಿ ಅಂಗವಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಕೆ.ವಿ. ಶಿಕ್ಷಣ ದತ್ತಿ ನಗರದ ಹೊರವಲಯದ ಸಿ.ವಿ.ವಿ ಕ್ಯಾಂಪಸ್ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು.
ಪೊಲೀಸರು, ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಪತ್ರಕರ್ತರು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಸ್ವಯಂ ಪ್ರೇರಣೆಯಿಂದ ಹೆಚ್ಚು ರಕ್ತ ಸಂಗ್ರಹವಾಗಲು ಸಹಕರಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಶಿಬಿರ ರಾತ್ರಿ 9 ಗಂಟೆವರೆಗೆ ನಡೆದಿದ್ದು ರಂಜಾನ್ ಉಪವಾಸ ವ್ರತದಲ್ಲಿದ್ದ ಮುಸ್ಲಿಮರು ಸಹ ಸಂಜೆ ಬಂದು ರಕ್ತದಾನ ಮಾಡಿ ಎಲ್ಲರ ಗಮನ ಸೆಳೆದರು.
ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರ ಕಾರ್ಯ ನಿರ್ವಹಿಸಿ ರಕ್ತದ ಕೊರತೆ ನೀಗಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡುವ ಸಲುವಾಗಿ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಹಲವರು ವಿಶೇಷ ಕಾರ್ಯಕ್ರಮಗಳ ಹೆಸರಿನಲ್ಲಿ ಹೆಚ್ಚಿಗೆ ರಕ್ತದಾನ ಶಿಬಿರಗಳನ್ನು ಕೈಗೊಳ್ಳುತ್ತ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಇದರ ನಡುವೆ ಈ ಹಿಂದೆ ಅತಿ ಹೆಚ್ಚು ರಕ್ತವನ್ನು ಸಂಗ್ರಹಿಸಿಕೊಟ್ಟಿದ್ದ ಶಿಕ್ಷಣ ದತ್ತಿ ಈ ಬಾರಿ ರಾಜ್ಯದ ದಾಖಲೆಯನ್ನು ಮುರಿದಿದೆ. ಸ್ವತಃ ಶಿಕ್ಷಣ ದತ್ತಿಯ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮತ್ತು ಪತ್ನಿ ಸುಜಾತ್ ನವೀನ್ ಕಿರಣ್ ಸಹ ರಕ್ತವನ್ನು ಕೊಟ್ಟರು. ಇನ್ನೂ ಹೆಚ್ಚಿಗೆ ಜನ ರಕ್ತದಾನ ಮಾಡಲು ಬಂದರೂ ಸಮಯದ ಅಭಾವ ಕಾಡಿತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ರಕ್ತದಾನ ಶಿಬಿರವನ್ನು ಆಯೋಜಿಸುವ ಚಿಂತನೆಯಲ್ಲಿದೆ ಶಿಕ್ಷಣ ದತ್ತಿ.
ರಕ್ತದಾನ ಶಿಬಿರಕ್ಕೆ ಜಿಲ್ಲಾಧಿಕಾರಿ ಆರ್. ವಿಶಾಲ್ ಭೇಟಿ ನೀಡಿ, ಇಡೀ ರಾಜ್ಯದಲ್ಲಿಯೇ ದಾಖಲೆ ಪ್ರಮಾಣದ 750 ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಕೆ.ವಿ ಮತ್ತು ಪಂಚಗಿರಿ ದತ್ತಿ ಉತ್ತಮ ಕೆಲಸ ಮಾಡಿದ್ದು ಈ ಸಾಧನೆ ಇತರರಿಗೆ ಮಾರ್ಗದರ್ಶನವಾಗಬೇಕು ಎಂದರು.
ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ, ರಕ್ತದಾನ ಮಹತ್ವವನ್ನು ಒಳಗೊಂಡ ಕಾರ್ಯವಾಗಿದೆ. ಕಳೆದ 13 ವರ್ಷಗಳಿಂದ ದತ್ತಿ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾರಾಯಾಣಾಚಾರ್ , ಡಾ. ಹೇಮಂತ್ ರಾವ್ ಸಾವಲಗಿ, ಡಾ. ಕಾರ್ತೀಕ್, ಡಾ. ಮಹದೇವಸ್ವಾಮಿ, ಟೆಕ್ನೀಷಿಯನ್ ಸೂಪರ್ ವೈಸರ್ ರವಿಲಂಬಾಣಿ, ಲ್ಯಾಬ್ ಟೆಕ್ನಿಷಿಯನ್ ನಾಗೇಶ್, ಶ್ರೀನಾಥ್, ಮಂಜುಳ, ಜೈ ಆನಂದ್ ತಂಡ ಹಾಗೂ ಕೆ.ವಿ.ಟಿ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಿ. ನರಸಿಂಹಯ್ಯ, ದತ್ತಿ ದಿನಾಚರಣೆ ಸಮಿತಿ ಸಂಚಾಲಕ ಡಾ.ಆರ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

