ಬಾನಲ್ಲಿ ಗಾಳಿಪಟದಾಟ
ಚಿಕ್ಕಬಳ್ಳಾಪುರ: ಜೋರಾಗಿ ಬೀಸುತ್ತಿದ್ದ ಗಾಳಿ ನಡುವೆ ನೂರಾರು ವಿದ್ಯಾರ್ಥಿಗಳು ಬಣ್ಣ ಬಣ್ಣದ ಗಾಳಿಪಟಗಳನ್ನು ಅಗಸದೆತ್ತರಕ್ಕೆ ಹಾರಿಸಿ ಖುಷಿಪಟ್ಟರು.
ತಾಲೂಕಿನ ಅಗಲಗುರ್ಕಿ ಬಿಜಿಎಸ್ ಅಂಗ್ಲಶಾಲೆಯಲ್ಲಿ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಸಲುವಾಗಿ ಗಾಳಿಪಟ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಹು ಉದ್ದದ ಗಾಳಿಪಟಗಳನ್ನು ಸೇರಿಸಿ ಗಾಳಿಯಲ್ಲಿ ಹಾರಾಡಿಸುತ್ತಿದ್ದರೆ ವಿದ್ಯಾರ್ಥಿಗಳು ಅಗಸದತ್ತ ನೋಡಿ ಖುಷಿಪಡುತ್ತಿದ್ದರು. ಆ ನಂತರ ಸ್ವತಃ ತಾವೇ ಶಾಲೆಯ ಆವರಣದಲ್ಲಿ ಗಾಳಿಪಟಗಳನ್ನು ಹಾರಿಸಿದರು. ಇದಕ್ಕೂ ಮುಂಚೆ ಜಾನಪದ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯದ ಮೂಲಕ ಗಮನ ಸೆಳೆದರು. ವಿವಿಧ ವೇಷಾವಳಿಗಳಲ್ಲಿ ಕಾಣಿಸಿಕೊಂಡರು. ಜಾನಪದ ಕಲಾವಿದ ಪಿಚ್ಚಹಳ್ಳಿ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳ ಮೇಳಕ್ಕೆ ಸಿದ್ಧತೆ: ನಂತರ ಮಾತನಾಡಿದ ಪಿಚ್ಚಹಳ್ಳಿ ಶ್ರೀನಿವಾಸ್, ಜಾನಪದ ಕಲೆಗಳು ತನ್ನದೇ ಆದ ಇತಿಹಾಸ, ಪರಂಪರೆಯನ್ನು ಹೊಂದಿದೆ. ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಜಾನಪದ ಕಲೆಗಳ ಬಗ್ಗೆ ಪರಿಚಯ ಮಾಡಿಕೊಡಬೇಕು. ಅಲ್ಲದೇ ಪೋಷಕರು ಸಹ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಜಾನಪದ ಕಲೆಗಳ ಗರಿಮೆ ಹೆಚ್ಚಾಗುತ್ತದೆ ಎಂದರು.
ಪ್ರಸ್ತುತ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ನಾವೆಲ್ಲರೂ ಸಿಲುಕಿಕೊಂಡು ಗ್ರಾಮೀಣ ಕಲೆಗಳನ್ನು ಮರೆಯುತ್ತಿದ್ದೇವೆ. ಕಬ್ಬಡಿ, ಖೋ ಖೋ, ಗಿಲ್ಲಿ ದಾಂಡು ಸೇರಿದಂತೆ ನಾನಾ ರೀತಿಯ ಗ್ರಾಮೀಣ ಕ್ರೀಡೆಗಳು ಪಾಶ್ಚಿಮಾತ್ಯ ಕ್ರೀಡೆಗಳ ಪ್ರಭಾವದಿಂದ ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಇದಕ್ಕೆ ನಾವು ತೋರುತ್ತಿರುವ ವರ್ತನೆಯೇ ಕಾರಣವಾಗಿದೆ ಎಂದರು.
ಜಿಲ್ಲೆಯು ಜಾನಪದ ಕಲೆಗಳಿಗೆ ಹೆಸರುವಾಸಿಯಾಗಿದೆ. ಅನೇಕರು ತಮ್ಮ ಸಾಧನೆಯ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ. ಇಂತಹ ಜಿಲ್ಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಜಾನಪದ ಮೇಳವನ್ನು ನಡೆಸಲು ಚಿಂತಿಸಲಾಗಿದೆ. ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಮೇಳವನ್ನು ನಡೆಸಿ ಮಕ್ಕಳ ಪ್ರತಿಭೆಯನ್ನು ಗುರುತಿಸುವಂತಹ ಕೆಲಸ ಮಾಡಲು ಮುಂದಾಗುವುದಾಗಿ ತಿಳಿಸಿದರು. ಅದಿಚುಂಚನಗಿರಿ ಶಾಖಾ ಮಠದ ಶ್ರೀ ಸಿದ್ಧೇಶ್ವರನಾಥ ಸ್ವಾಮೀಜಿ ಮಾತನಾಡಿ, ಮಹಿಳೆಯರನ್ನು, ಗುರು ಹಿರಿಯರನ್ನು ಗೌರವಿಸುವಂತಹ ಸಮಾಜವನ್ನು ನಿರ್ಮಾಣ ಮಾಡಬೇಕು. ಇದಕ್ಕಾಗಿ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಶಿವರಾಮರೆಡ್ಡಿ, ರೈತ ಮುಖಂಡ ಯಲುವಹಳ್ಳಿ ರಮೇಶ್, ಜಾನಪದ ಅಕಾಡೆಮಿ ರಿಜಿಸ್ಟರ್ ಪರೇಡಿ, ಮುಖ್ಯ ಶಿಕ್ಷಕ ಮೋಹನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

