ಕೋಲಾರ

ಕಾಮ ವಿರುದ್ಧ ಕಹಳೆ

Published On :

ಕೋಲಾರ, ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಲು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ, ಕೆಜಿಎಫ್, ಮಾಲೂರು ನೀರಸ, ಕೋಲಾರ ನಗರದಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ಹೆದ್ದಾರಿಯಲ್ಲಿ ವಾಹನ ತಡೆದು ಚಕ್ರಗಳ ಗಾಳಿ ತೆಗೆದ ಯುವಕರು, ಬಸ್ಸುಗಳ ಸಂಚಾರ ಅಸ್ತವ್ಯಸ್ತ,  ಬ್ಯಾಂಕು, ಶಾಲಾ-ಕಾಲೇಜುಗಳು ಬಂದ್.

ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳು ಗುರುವಾರ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ಬಂದ್ ಬಹುತೇಕ ಯಶಸ್ವಿಯಾಗಿದೆ. ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಬಂಗಾರಪೇಟೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಘಟನೆ ಕೊರತೆಯಿಂದಾಗಿ ಕೆಜಿಎಫ್ ಮತ್ತು ಮಾಲೂರಿನಲ್ಲಿ ನೀರಸವಾಗಿತ್ತು. ಕೋಲಾರ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಚಕ್ರಗಳಿಗೆ ಗಾಳಿ ತೆಗೆದ ಪರಿಣಾಮ ಪ್ರಯಾಣಿಕರು ತೊಂದರೆಗೆ ಒಳಗಾದರೂ, ರಾಜ್ಯ ರಸ್ತೆ ಸಾರಿಗೆ ನಿಗಮದವರು ಮುಂಜಾಗ್ರತಾ ಕ್ರಮವಾಗಿ ಬಸ್ಸುಗಳ ಸಂಚಾರ ನಿಲ್ಲಿಸಿದ್ದರು.
ಬೆಂಬಲಿಸಿದ ಸಂಘಟನೆಗಳು
ಕೋಲಾರ: ಜಿಲ್ಲೆಯಲ್ಲಿ ಗುರುವಾರ ನಡೆದ ಬಂದ್‌ಗೆ ಜನವಾದಿ ಮಹಿಳಾ ಸಂಘಟನೆ, ವಿವಿಧ ದಲಿತ ಸಂಘಟನೆಗಳು, ಅಂಗನವಾಡಿ ಮಹಿಳಾ ಸಂಘಟನೆಗಳು, ರೈತ ಸಂಘ ಮತ್ತು ಹಸಿರು ಸೇನೆ, ಜಯಕರ್ನಾಟಕ ಸಂಘಟನೆ, ಮಾನವ ಹಕ್ಕುಗಳ ಜಾಗೃತಿ ಸಮಿತಿ, ನವ ಕರ್ನಾಟಕ ರಕ್ಷಣಾ ವೇದಿಕೆ, ವಕೀಲರ ಸಂಘ, ವಿದ್ಯಾರ್ಥಿಗಳ ಒಕ್ಕೂಟ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಖಂಡಿಸಿದರು. ರಾಜ್ಯ ಸರ್ಕಾರದ ವಿಫಲತೆ ಖಂಡಿಸಿ ಘೋಷಣೆ ಕೂಗಿದರು. ವಿವಿಧ ಸಂಘಟನೆಗಳ ಮುಂಖಡರಾದ ವಿ. ಗೀತಾ, ವಿಜಯಕುಮಾರ್, ಗಾಂಧಿನಗರ ನಾರಾಯಣಸ್ವಾಮಿ, ರಮಣ, ಅಮರೇಶ್, ಆಂಜನಮ್ಮ, ಪಂಡಿತ್ ಮುನಿವೆಂಟಪ್ಪ, ಶಾಂತಮ್ಮ, ಸುಶೀಲ, ಎಂ.ವಿ. ನಾರಾಯಣಸ್ವಾಮಿ, ಸ್ವಾಮಿ, ಮಂಗಳ, ಶೈಲ, ಮುನಿವೆಂಟಮ್ಮ, ಸದಾನಂದ, ಜಯದೇವ ಪ್ರಸನ್ನ, ಹೂವಳ್ಳಿ ನಾಗರಾಜ್, ಕೆ. ಶ್ರೀನಿವಾಸ ಗೌಡ, ಅಬ್ಬಣಿ ಶಿವಪ್ಪ, ಮುನಿಯಪ್ಪ, ದೊಡ್ಡಸಬ್ಬೇನಹಳ್ಳಿ ಕೃಷ್ಣಪ್ಪ,ಶ್ರೀರಾಮ್, ವೆಂಕಟೇಶ್, ಮುನೇಶ್, ಗಣೇಶ್ ಗೌಡ, ಆನಂದ್, ಸತೀಶ್, ಸುರೇಶ್ ಗೌಡ ನೇತೃತ್ವ ವಹಿಸಿದ್ದರು.


ಶಾಲಾ-ಕಾಲೇಜುಗಳಿಗೆ ರಜೆ
ಬ್ಯಾಂಕುಗಳ ಕಾರ್ಯಾಚರಣೆ ಸ್ತಬ್ಧವಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸಿನಿಮಾ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಜವಳಿ ಅಂಗಡಿಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಕೆಲ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸುವ ಸಂದರ್ಭದಲ್ಲಿ ತಾಲೂಕು ಕಚೇರಿಗೆ ನುಗ್ಗಿ ತಹಸೀಲ್ದಾರ್ ಅವರನ್ನು ಕಚೇರಿಯಿಂದ ಹೊರ ಬರುವಂತೆ ದಮಕಿ ಹಾಕಿದರಾದರೂ, ತಿಳುವಳಿಕೆಯುಳ್ಳ ಮುಖಂಡರ ಮಧ್ಯ ಪ್ರವೇಶದಿಂದಾಗಿ ಪ್ರತಿಭಟನಾಕಾರರು ತಾಲೂಕು ಕಚೇರಿಯಿಂದ ವಾಪಸ್ಸಾದರು. ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಕೋಲಾರ ನಗರದ ಎಲ್ಲಾ ವೃತ್ತಗಳಲ್ಲಿ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಂ.ಜಿ. ರಸ್ತೆ, ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಎಂ.ಬಿ. ರಸ್ತೆ, ಸರ್ಕಾರಿ ಬಸ್ ನಿಲ್ದಾಣ, ಹಳೇ ಬಸ್‌ನಿಲ್ದಾಣದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.


ಉಳಿದೆಡೆ ಹೇಗೆ?
ಶ್ರೀನಿವಾಸಪುರದಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಪಿಐಎಂ ಮುಖಂಡರು ಮೆರವಣಿಗೆ ನಡೆಸಿ ಬಂದ್‌ಗೆ ಸಹಕಾರ ಕೋರಿದರು. ಪಟ್ಟಣದಿಂದ ನೆರೆಯ ಆಂಧ್ರ ಪ್ರದೇಶಕ್ಕೆ ಹೋಗಲು ಬಸ್ಸುಗಳು ಇಲ್ಲದೆ ಜನ ಪರದಾಡಿದರು. ಮುಳಬಾಗಲಿನಲ್ಲೂ ಬಂದ್ ಬಹುತೇಕ ಯಶಸ್ಸು ಕಂಡಿತು. ಸರ್ಕಾರಿ ಬಸ್ಸುಗಳ ನಿಲ್ಲುಗಡೆಯಿಂದ ಹೆದ್ದಾರಿ ಬಿಕೋ ಎನ್ನುತ್ತಿತ್ತು. ಬಂಗಾರಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿತ್ತು. ಅಂಗನವಾಡಿ ಕಾರ್ಯಕರ್ತರು ಅತ್ಯಾಚಾರಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೆಜಿಎಫ್‌ನಲ್ಲಿ ಎಡಪಕ್ಷಗಳ ಕಾರ್ಯಕರ್ತರಿದ್ದರೂ, ಸಂಘಟನೆಯ ಕೊರತೆಯಿಂದ ಬಂದ್ ಆಚರಿಸಲಾಗಲಿಲ್ಲ.  ಮಾಲೂರಿನಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿತು.

ವಕೀಲರ ಬೆಂಬಲ
ಪ್ರಗತಿಪರ ಸಂಘಟನೆಗಳು ನೀಡಿದ್ದ ಕೋಲಾರ ಬಂದ್‌ಗೆ ವಕೀಲರು ಬೆಂಬಲ ಸೂಚಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಸತೀಶ್ ನೇತೃತ್ವದಲ್ಲಿ ಸಭೆ ಸೇರಿದ್ದ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.