ರು. 1.72 ಕೋಟಿ ಉಳಿತಾಯ ಬಜೆಟ್
ಕೋಲಾರ: ನಗರಸಭೆಯ 2014-15ನೇ ಸಾಲಿಗೆ 1.72 ಕೋಟಿ ಉಳಿತಾಯ ಬಜೆಟ್ಗೆ ಸರ್ವಾನುಮತದ ಅನುಮೋದನೆ ದೊರೆತಿದೆ.
ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್ ಮಂಡಿಸಿದ ಬಜೆಟ್ಗೆ ಸರ್ವ ಸದಸ್ಯರು ಮೇಜು ತಟ್ಟುವ ಮೂಲಕ ಸ್ವಾಗತಿಸಿ ಅನುಮೋದಿಸಿದರು.
ನಗರಸಭೆಗೆ ಮಾರ್ಚ್ 2014 ಅಂತ್ಯಕ್ಕೆ 14.90 ಕೋಟಿ ಅಖೈರು ಶಿಲ್ಕು ಉಳಿದಿದ್ದು, 2014-15ನೇ ಸಾಲಿನಲ್ಲಿ 45.19 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಅಖೈರು ಶಿಲ್ಕು ಮತ್ತು ಆದಾಯ ಸೇರಿದಂತೆ ಒಟ್ಟು 60.10 ಕೋಟಿ ಆದಾಯ ನಿರೀಕ್ಷಿಸಿದ್ದು, ಇದೇ ಅವಧಿಯಲ್ಲಿ 58.37 ಕೋಟಿ ನಿರೀಕ್ಷಿತ ಖರ್ಚು ಮಾಡುವ ಗುರಿಯ ಮೂಲಕ 1.72 ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಅವರು ಪ್ರಕಟಿಸಿದರು.
ನಗರಸಭೆಯಲ್ಲಿ ಆದಾಯ ನಿರೀಕ್ಷೆಯಿಂದ 3 ಕೋಟಿ ಆಸ್ತಿ ತೆರಿಗೆ, 1.12 ಕೋಟಿ ನೀರಿನ ತೆರಿಗೆ, 24 ಲಕ್ಷ ಮಳಿಗೆ ಬಾಡಿಗೆ, 23 ಲಕ್ಷ ಅಭಿವೃದ್ಧಿ ಕರ, 14.50 ಲಕ್ಷ ಕಟ್ಟಡ ಪರವಾನಗಿ ಶುಲ್ಕ, ಮಾರುಕಟ್ಟೆ, ಬಸ್ ನಿಲ್ದಾಣ ಸಂತೆ ಶುಲ್ಕದಿಂದ 6.20 ಲಕ್ಷ, ಲೈಸೆನ್ಸ್ ಶುಲ್ಕದಿಂದ 6.12 ಲಕ್ಷ, ವೇತನ ಅನುದಾನದಿಂದ 3.56 ಕೋಟಿ, ವಿದ್ಯುತ್ ಶಕ್ತಿ ಅನುದಾನದಿಂದ 4.50 ಕೋಟಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ, ಎಸ್ಎಫ್ಸಿ ಬರ ಪರಿಹಾರ ನಿಧಿಯಿಂದ 2 ಕೋಟಿ, 13ನೇ ಹಣಕಾಸು ಯೋಜನೆಯಿಂದ 3.50 ಕೋಟಿ, ಅಸಾಮಾನ್ಯ ಆದಾಯ ಮತ್ತು ಅಮಾನತ್ ಖಾತೆಗಳಿಂದ 24.80 ಕೋಟಿ, ರಾಜ್ಯ ಹಣಕಾಸು ಆಯೋಗದಿಂದ ಎಸ್ಎಫ್ಸಿ ಅನುದಾನವಾಗಿ 6.35 ಕೋಟಿ, ಮುಖ್ಯಮಂತ್ರಿಗಳ ಪಟ್ಟಣ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ, ಆಶ್ರಯ ಯೋಜನೆಯಿಂದ 1 ಕೋಟಿ, ಇತರ ವಸೂಲಿಗಳಿಂದ 1.92 ಕೋಟಿ, ಬಂಡವಾಳ ಆದಾಯವಾಗಿ 7.15 ಕೋಟಿ ಸೇರಿದಂತೆ ಒಟ್ಟು 60.10 ಕೋಟಿ ಅದಾಯ ನಿರೀಕ್ಷಿಸಲಾಗಿದೆ.
ಇದೇ ಅವಧಿಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ 3.50 ಕೋಟಿ, ಹೊಸ ಚರಂಡಿ ನಿರ್ಮಾಣಕ್ಕೆ 1.50 ಕೋಟಿ, ಹೊಸ ಪೈಪ್ಲೈನ್ ಅಳವಡಿಕೆಗೆ 50 ಲಕ್ಷ, ಹೊಸ ಪಂಪ್ಸೆಟ್ ಖರೀದಿಗೆ 2.50 ಕೋಟಿ, ಯರಗೋಳ್ ಯೋಜನೆ ಅನುದಾನವಾಗಿ 50 ಲಕ್ಷ, ರಸ್ತೆ ದುರಸ್ತಿ ಹಾಗೂ ರಸ್ತೆ ಮೆಟಲಿಂಗ್ಗೆ 10 ಲಕ್ಷ, ಚರಂಡಿ ದುರಸ್ತಿಗೆ 25 ಲಕ್ಷ, ನಗರ ನೈರ್ಮಲೀಕರಣಕ್ಕೆ 1.50 ಕೋಟಿ, ಪೈಪ್ಲೈನ್ ದುರಸ್ತಿಗೆ 50 ಲಕ್ಷ, ಪಂಪ್ ಮೋಟಾರು ದುರಸ್ತಿಗೆ 30 ಲಕ್ಷ, ನೀರು ಸರಬರಾಜು ಸಾಮಗ್ರಿ ಖರೀದಿಗೆ 10 ಲಕ್ಷ, ಬೀದಿ ದೀಪ ಖರೀದಿಗೆ 2.55 ಕೋಟಿ , ಬೀದಿ ದೀಪ ನಿರ್ವಹಣೆಗೆ 50 ಲಕ್ಷ, ಬೀದಿ ದೀಪ ನಿರ್ವಹಣೆ ಹಾಗೂ ವಿದ್ಯುತ್ ಬಿಲ್ಗೆ 90 ಲಕ್ಷ, ನೀರು ಸರಬರಾಜು ವಿದ್ಯುತ್ ಬಿಲ್ಗೆ 3.60 ಕೋಟಿ, ಹೊಸ ಕೊಳವೆ ಬಾವಿ ಕೊರೆಯಲು 3 ಕೋಟಿ, ಘನತ್ಯಾಜ್ಯ ಜಮೀನು ಮತ್ತು ಸಲಕರಣೆಗಳಿಗಾಗಿ 1.50 ಕೋಟಿ, ವೇತನ ಪಾವತಿಗಾಗಿ 3.67 ಕೋಟಿ, ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣಕ್ಕಾಗಿ 2.21 ಕೋಟಿ ನಿಗದಿ ಮಾಡಲಾಗಿದೆ ಎಂದು ಮುಬಾರಕ್ ವಿವರಿಸಿದರು. ಸಭೆ ಆರಂಭಕ್ಕೆ ಮುನ್ನವೇ ಸದಸ್ಯ ರೌತ್ ಶಂಕರಪ್ಪ ಮಾತನಾಡಿ, ಇನ್ನು ಮುಂದೆ ಪ್ರತಿ ತಿಂಗಳೂ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು. ಮುರಳೀಗೌಡ ಮಾತನಾಡಿ, ಅಗಲಿದ ಸದಸ್ಯ ಎಲ್.ನಸೀರ್ ಕುಟುಂಬಕ್ಕೆ ನಗರಸಭೆಯಿಂದ ಪರಿಹಾರ ಬಿಡುಗಡೆ ಮಾಡಲು ಕೋರಿದರಲ್ಲದೆ, ಹಿಂದಿನ ಎಲ್ಲಾ ಸಭೆಗಳ ನಡವಳಿಕೆಗಳನ್ನು ನೀಡಬೇಕು, ನಗರದ ಹಲವು ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ಕಂಪನಿಗಳು ಅಪಾಯಕಾರಿ ಟವರ್ಗಳನ್ನು ಅಳವಡಿಸಿದ್ದು ಇದನ್ನು ತೆಗೆಯುವಂತೆ ನೋಟಿಸ್ ನೀಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನಗರಸಭೆ ಕ್ರಮ ತೆಗೆದುಕೊಳ್ಳಬೇಕೆಂದರು.
ನಗರಸಭೆ ಸದಸ್ಯರಾದ ಪ್ರಸಾದ್ ಬಾಬು ಮತ್ತು ಮುರಳೀಗೌಡ ಮಾತನಾಡಿ, ಬರಗಾಲದ ಪರಿಸ್ಥಿತಿ ಇರುವುದರಿಂದ ಹಾಗೂ ಜನತೆಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದ ವಾತಾವರಣ ಇರುವುದರಿಂದ ನಗರಸಭೆ ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆ ಮತ್ತು ತೆರಿಗೆ ಮೇಲಿನ ಬಡ್ಡಿ ವಸೂಲಾತಿಯನ್ನು ರದ್ದುಗೊಳಿಸಬೇಕು, ತೆರಿಗೆಗೆ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮುಬಾರಕ್, ಈ ಬಗ್ಗೆ ಸರ್ಕಾರದ ಹಂತದಲ್ಲಿಯೇ ಕ್ರಮ ಜರುಗಿಸಬೇಕಾಗಿರುವುದರಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.
ಹಿರಿಯ ಸದಸ್ಯ ಸಲಾಲುದ್ದೀನ್ ಬಾಬು ಮಾತನಾಡಿ, ದೀಪ ಹಾಕಿದವರೇ ಒಂದು ವರ್ಷ ಕಾಲ ಮೇಲ್ವಿಚಾರಣೆ ನಿರ್ವಹಣೆ ನಡೆಸಬೇಕೆಂಬುದನ್ನು ಟೆಂಡರ್ ಷರತ್ತಿನಲ್ಲಿ ಸೇರ್ಪಡೆ ಮಾಡಬೇಕೆಂದು ಸಲಹೆ ನೀಡಿದರು. ಸದಸ್ಯ ಸೋಮಶೇಖರ್ ಮಾತನಾಡಿ, ಬರ ಪರಿಹಾರಕ್ಕಾಗಿ ನಿರೀಕ್ಷೆ ಮಾಡುತ್ತಿರುವ 2 ಕೋಟಿ ಏನೇನೂ ಸಾಲದಾಗಿರುವುದರಿಂದ ಕನಿಷ್ಠ 5ರಿಂದ 10 ಕೋಟಿ ಮೀಸಲಿಡಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

