ಕೆರೆ ನುಂಗಣ್ಣರಿಗೆ ಕೇಡುಗಾಲ
ಪಾ.ಶ್ರೀ. ಅನಂತರಾಮ್
ಕೋಲಾರ: ಕೆರೆ, ರಾಜಾ ಕಾಲುವೆ ಸೇರಿದಂತೆ ಸರ್ಕಾರದ ಆಸ್ತಿ ಒತ್ತುವರಿ ತೆರವು ಕಾರ್ಯಾಚರಣೆ ಜೇನುಗೂಡಿಗೆ ಕೈಹಾಕಿದಷ್ಟೇ ಅಪಾಯಕಾರಿ ಎಂಬುದು ಅರಿವಿದ್ದರೂ ಜಿಲ್ಲಾಧಿಕಾರಿ ಡಿ.ಕೆ. ರವಿ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ.
ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳ ಪೈಕಿ ಅನೇಕರು ಈ ಕಾರ್ಯಕ್ಕೆ ಮುತುವರ್ಜಿ ತೋರಿಸಿದ್ದರಾದರೂ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಬೆಂಬಲ ಸಿಗದೆ ಅಸಹಾಯಕರಾಗಿದ್ದರು. ಇನ್ನು ಕೆಲವರು ಕಾಲ ಕೂಡಿ ಬರಬೇಕೆಂದು ಹೇಳಿ ಒತ್ತುವರಿದಾರರಿಗೆ ಸರ್ಕಾರಿ ಆಸ್ತಿ ಕಬಳಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು 2,500ಕ್ಕೂ ಹೆಚ್ಚು ಕೆರೆಗಳಿವೆ. ಬಹುತೇಕ ಕೆರೆಗಳು ಮರಳು ಮಾಫಿಯಾಗಳಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಬರಡಾಗಿವೆ. ನೀರಿನ ಖನಿಜವನ್ನು ಪುಕ್ಕಟೆ ಆಸ್ತಿಯನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಕೆಲವರು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ.
ಒತ್ತುವರಿದಾರರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಧೈರ್ಯದಿಂದ ಸರ್ಕಾರಿ ಆಸ್ತಿ ಕಬಳಿಕೆ ಮಾಡಲು ಅವಕಾಶವಾಗಿದ್ದು ವೋಟಿನ ರಾಜಕಾರಣಕ್ಕೆ ಇರುವ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕು ಕಾರಣವೆಂದರೆ ತಪ್ಪಾಗಲಾದರು. ತಡವಾದರೂ ಜಿಲ್ಲೆಯ ಕೆರೆಗಳನ್ನು ಸಂರಕ್ಷಣೆ ಮಾಡುವ ಕಾಲ ಕೂಡಿ ಬಂದಿದೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ನೇತೃತ್ವದಲ್ಲಿ ಕೆರೆಗಳ ಉಳಿಸಿ ಆಂದೋಲನ ಆ.15ರಂದು ಪ್ರಾರಂಭವಾಗಲಿದೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಕೆಲ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಜಿಲ್ಲೆಯಿಂದ ಎತ್ತಂಗಡಿ ಆದರು ಸರಿ ಜಿಲ್ಲೆಯ ಕೆರೆಗಳನ್ನು ಉಳಿಸುವುದಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆಂದು ಜಿಲ್ಲಾಧಿಕಾರಿ ಸಂಕಲ್ಪ ಮಾಡಿದ್ದಾರೆ. ಜನತೆ ಜಿಲ್ಲೆಯ ಆಸ್ತಿ ಹಾಗೂ ಮುಂದಿನ ಪೀಳಿಗೆಯ ಭವಿಷ್ಯದಿಂದ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಪ್ರೋತ್ಸಾಹ ನೀಡುವ ವಿಶ್ವಾಸವನ್ನು ಕೆರೆ ಉಳಿಸಿ ಆಂದೋಲನ ಸಮಿತಿಯ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ವರದಿ ನೀಡಲು ಸೂಚನೆ: ಈ ಕಾರ್ಯ ಕೆಲ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಅಪಥ್ಯವಾಗಿದ್ದರೂ ಭವಿಷ್ಯ ಅರ್ಥಮಾಡಿಕೊಂಡಿರುವವರು ಖಂಡಿತ ಕೈಜೋಡಿಸುವ ನಿರೀಕ್ಷೆ ಇದೆ.
ಈ ಸಂಬಂಧ ಜಿಲ್ಲೆಯ ಐದು ತಾಲೂಕಿನ ತಹಸೀಲ್ದಾರ್ಗಳ ಸಭೆ ನಡೆಸಿ ಆ.12ರೊಳಗೆ ತಮ್ಮ ತಾಲೂಕಿನಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದ ವರದಿ ನೀಡುವಂತೆ ಸೂಚಿಸಿದ್ದಾರೆ. ಆ.12ರಂದು ಹೈಕೋರ್ಟಿಗೆ ಜಿಲ್ಲೆಯ ಕೆರೆಗಳ ಒತ್ತುವರಿಗೆ ಸಂಬಂಧಿಸಿದ ಮಾಹಿತಿ ನೀಡಬೇಕಾಗಿದೆ. ಜೊತೆಗೆ ಪ್ರಾದೇಶಿಕ ಆಯುಕ್ತರು ನಡೆಸುವ ಅದಾಲತ್ನಲ್ಲಿ ಕೇಳಿ ಬರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರುವುದರಿಂದ ಜಿಲ್ಲಾಧಿಕಾರಿಗಳು ಅದಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಹೈಕೋರ್ಟ್ ಆದೇಶ ಪಾಲಿಸುವುದು ಅಧಿಕಾರಿಗಳ ಕರ್ತವ್ಯ, ಕೆರೆಗಳನ್ನು ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮ ಕೈಗೊಳ್ಳಿ, ಈ ಕೆಲಸ ಮಾಡಲು ನಿರಾಸಕ್ತಿ ತೋರಿದಲ್ಲಿ ನ್ಯಾಯಾಂಗ ಉಲ್ಲಂಘನೆ ಮಾಡಿದಂತಾಗುತ್ತದೆ, ಕ್ರಿಮಿನಲ್ ಕೇಸಿನಡಿ ಜೈಲಿಗೆ ಹೋಗಬೇಕಾಗುತ್ತದೆ. ನಿಮ್ಮಿಂದಾಗಿ ನಾನು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಖಡಕ್ ಆಗಿ ನಿರ್ದೇಶನ ನೀಡಿದ್ದಾರೆ.
ಸಣ್ಣ ನೀರಾವರಿ, ಜಿಪಂ ವ್ಯಾಪ್ತಿಗೆ ಕೆಲವು ಕೆರೆಗಳು ಬರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಹದ್ದು ಬಸ್ತು ಮಾಡಬೇಕೆಂದು ಸೂಚಿಸಿದ್ದಾರೆ. ಕೆರೆಗಳ ಒತ್ತುವರಿ ಕಾರ್ಯಾಚರಣೆ ವಿಡಿಯೋ ಚಿತ್ರಕರಣ ಕಡ್ಡಾಯವಾಗಿ ಮಾಡಬೇಕು, ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ದೂರು ದಾಖಲು ಮಾಡುವಂತೆ ಧೈರ್ಯ ತುಂಬಿದ್ದಾರೆ.
ಆ.15ರಿಂದ ಕೆರೆ ಉಳಿಸಿ ಆಂದೋಲನ
ಹೈಕೋರ್ಟ್ ಆದೇಶ ಮುಂದಿಟ್ಟುಕೊಂಡು ಕೆರೆಗಳನ್ನು ಉಳಿಸುವ ಆಂದೋಲನ ಜಿಲ್ಲೆಯಾದ್ಯಂತ ಆ.15 ರಿಂದ ಪ್ರಾರಂಭಿಸುತ್ತಿದ್ದು ಮದುವಾಡಿ ಕೆರೆಯ ಒತ್ತುವರಿ ತೆರವು ಮೂಲಕ ಉಳಿದ ಕೆರೆಗಳನ್ನು ಹಂತ ಹಂತವಾಗಿ ಸಂರಕ್ಷಣೆ ಮಾಡಲು ನಿರ್ಧರಿಸಿದ್ದು, ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ನೂರಾರು ಕೆರೆಗಳನ್ನು ಸರ್ವೇ ಮಾಡಿಸಿ ಬಂದೋಬಸ್ತ್ ಮಾಡಿಸಲು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಹತ್ತಾರು ವರ್ಷಗಳಿಂದ ಕೆರೆಗಳ ಸರ್ವೇಗಾಗಿ ಜನತೆ ಒತ್ತಾಯಿಸುತ್ತಾ ಬಂದರೂ ಸಿಬ್ಬಂದಿಯ ಕೊರತೆಯ ನೆಪ ಹೇಳಿ ಕೈಚಲ್ಲಲಾಗಿತ್ತು. ಈಗ 38 ಕೆರೆಗಳ ಸರ್ವೇ ಕಾರ್ಯವನ್ನು ಮುಗಿಸಲಾಗಿದೆ. ಒತ್ತುವರಿ ಮಾಡಿರುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ.
ಕೋಲಾರ ತಾಲೂಕಿನ 9 ಕೆರೆಗಳು, ಮುಳಬಾಗಿಲು 9, ಬಂಗಾರಪೇಟೆ 10, ಶ್ರೀನಿವಾಸಪುರ 4, ಮಾಲೂರು 6 ಕೆರೆಗಳ ಸರ್ವೇ ಕಾರ್ಯ ಮಾಡಲಾಗಿದ್ದು, ಜನತೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದಲ್ಲಿ ಕೆರೆಗಳನ್ನು ಉಳಿಸುವುದು ಕಷ್ಟವಾಗದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

