ಬಿಸಿಯೂಟ ಅಲ್ಲ, ಹುಳುಗಳೂಟ?
ಚಿಕ್ಕಬಳ್ಳಾಪುರ: ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿಸುವ ಸಲುವಾಗಿ ಸರ್ಕಾರ ಒದಗಿಸುತ್ತಿರುವ ಬಿಸಿಯೂಟದ ಬದಲಿಗೆ ಇಲ್ಲೊಂದು ಶಾಲೆ ಮಕ್ಕಳಿಗೆ ಹುಳುಗಳನ್ನು ತಿನ್ನಿಸುತ್ತಿದೆ. ಸ್ವತಃ ಹುಳುಗಳನ್ನು ಕಣ್ಣಾರೆ ಕಂಡರೂ ಕಂದಮ್ಮಗಳು ಅನಿವಾರ್ಯವಾಗಿ ಪ್ರತಿನಿತ್ಯ ಹುಳುಗಳ ಮಿಶ್ರಿತ ಊಟದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ತಾಲೂಕಿನ ನಂದಿ ಗ್ರಾಮದ ಸುಲ್ತಾನ್ ಪೇಟೆ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ವಾನ ಬಿಸಿಯೂಟ ವ್ಯವಸ್ಥೆಯು ಸೋಮವಾರ ಬಯಲಿಗೆ ಬಂದು ಆಕ್ರೋಶಕ್ಕೆ ಕಾರಣವಾಯಿತು. ಬಿಸಿಯೂಟಕ್ಕಾಗಿ ಇಟ್ಟಿದ್ದ ಗೋದಿಯಲ್ಲಿ ಕಾಳುಗಳಿಗಿಂತ ಹೆಚ್ಚಾಗಿ ಹುಳುಗಳೇ ಇದ್ದವು. ಗೋದಿಯನ್ನು ಚಾಪೆಯ ಮೇಲೆ ಹಾಕುತ್ತಿದ್ದಂತೆ ಸರಸರನೇ ಹುಳುಗಳು ಸರಿದಾಡುತ್ತಿದ್ದನ್ನು ಕಂಡವರಿಗೆ ವಾಕರಿಕೆಯೂ ಬಂತು.
ಶಾಲೆಯ ಒಂದು ಕೊಠಡಿಯಲ್ಲಿ ದಾಸ್ತಾನು ಮಾಡಿದ್ದ 30 ಕೆ.ಜಿ ಗೋದಿಯನ್ನು ಶಾಲಾ ಮಕ್ಕಳಿಗೆ ಕೊಟ್ಟು ಗಿರಣಿ ಅಂಗಡಿಗೆ ಕಳುಹಿಸಿದ್ದಾಗ ಗಿರಣಿ ಮಾಲೀಕರು ನೋಡಿ ಗೋದಿಯಲ್ಲಿರುವ ಹುಳುಗಳನ್ನು ಕ್ಲೀನ್ ಮಾಡಿಕೊಂಡು ಬರುವಂತೆ ಸೂಚಿಸಿದ್ದಾರೆ. ಆಗ ಗಿರಣಿ ಅಂಗಡಿಗೆ ಬಂದಿದ್ದ ಕೆಲವರು ಹುಳುಗಳನ್ನು ನೋಡಿ ಮಕ್ಕಳನ್ನು ಕೇಳಿದ್ದಾರೆ. ಅಲ್ಲದೇ ತಕ್ಷಣ ಶಾಲೆಗೆ ಹೋಗಿ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯ ಶಿಕ್ಷಕರೊಂದಿಗೆ ದಾಸ್ತಾನು ಕೊಠಡಿಗೆ ಹೋಗಿ ನೋಡಿದಾಗ ಕೇವಲ ಗೋದಿ ಮಾತ್ರವಲ್ಲ, ಅಕ್ಕಿ, ಬೇಳೆಯಲ್ಲಿ ಹುಳುಗಳು ರಾಶಿಯಾಗಿಯೇ ಕಂಡು ಬಂದಿದೆ. ಇದರಿಂದ ಕೆಂಡಾಮಂಡಲರಾದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯದ ಕತೆ: ಕಳೆದ ಕೆಲ ದಿನಗಳಿಂದಲೂ ಹುಳುಗಳ ಮಿಶ್ರಿತ ಆಹಾರವನ್ನೇ ತಿನ್ನಿಸಲಾಗುತ್ತಿದೆ. ಹುಳುಗಳು ಕಂಡು ಬಂದರೂ ಕ್ಲೀನ್ ಮಾಡುತ್ತಿಲ್ಲ. ಹುಳುಗಳ ಗೋದಿ ಕಾಳಿನಿಂದ ಹಿಟ್ಟು ಮಾಡಿಸಲಾಗುತ್ತಿದೆ. ಇದರಿಂದ ಗೋದಿ ಹಿಟ್ಟಿನಲ್ಲಿ ಹುಳುಗಳು ಇರುವುದು ಗೊತ್ತಾಗುವುದು ಇಲ್ಲ. ರಾಗಿ ಹಿಟ್ಟಿನ ಬದಲಿಗೆ ಗೋದಿ ಹಿಟ್ಟಿನಲ್ಲಿಯೇ ಮುದ್ದೆ ತಯಾರಿಸಿ ಮಕ್ಕಳಿಗೆ ಕೊಡಲಾಗುತ್ತಿದೆ. ಇನ್ನೂ ಬಹಳಷ್ಟು ಸಂದರ್ಭಗಳಲ್ಲಿ ಅನ್ನ, ಸಾರಿನಲ್ಲಿ ಹುಳು ಬಿದ್ದಿರುವುದನ್ನು ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನಲಾಗುತ್ತಿದೆ. ಕೆಲ ಬಡ ಮಕ್ಕಳು ಹೇಗೋ ದೇವರ ಮೇಲೆ ಭಾರ ಹಾಕಿ ತಿನ್ನುತ್ತಿದ್ದಾರೆ. ಆದರೆ, ಹೆಚ್ಚಿಗೆ ಮಕ್ಕಳು ತಿನ್ನುತ್ತಿಲ್ಲ. ತಂದೆ ತಾಯಿಗಳೇ ಬಿಸಿಯೂಟ ಮಾಡಬೇಡಿ ಎಂದೇಳಿ ಮನೆಯಿಂದ ಊಟವನ್ನು ಕಳುಹಿಸಿಕೊಡುತ್ತಾರೆ. ಇಲ್ಲವೇ ಮನೆಗೆ ಬರುವಂತೆ ಸೂಚಿಸುತ್ತಾರೆ.
ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ
ಶಾಲಾ ಕಾಲೇಜುಗಳು, ವಸತಿ ನಿಲಯಗಳಿಗೆ ಕಳುಹಿಸುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹುಳುಗಳ ಮಿಶ್ರಿತ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಂದ ತಯಾರಿಸಿದ ಊಟವನ್ನು ತಿನ್ನಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆಹಾರ ಪದಾರ್ಥಗಳು ಸರಬರಾಜಾದ ಸಂದರ್ಭದಲ್ಲಿ ಕೆಲ ಶಿಕ್ಷಕರು ಗಮನಕ್ಕೆ ತರುತ್ತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ದೂರುಗಳು ಕೇಳಿ ಬಂದಾಗ ಎಲ್ಲೋ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ ಎಂದು ಸುಮ್ಮನಾಗುತ್ತಿದ್ದಾರೆ. ಇದರಿಂದ ಅಡುಗೆ ಸಿಬ್ಬಂದಿ ಆ ಆಹಾರ ಪದಾರ್ಥಗಳನ್ನು ಊಟಕ್ಕೆ ಬಳಸುತ್ತಿದ್ದಾರೆ. ಶಿಕ್ಷಕರು ಸುಮ್ಮನಿರುತ್ತಾರೆ, ಅಡುಗೆ ಸಿಬ್ಬಂದಿ ಊಟ ಹಾಕುತ್ತಾರೆ, ಮಕ್ಕಳು ಅನಿವಾರ್ಯವಾಗಿ ಅದನ್ನು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಶಾಲಾ ಕಾಲೇಜುಗಳಿಗೆ ಹೋಗಿ ಗುಣಮಟ್ಟ ತಪಾಸಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಮಕ್ಕಳಿಗೆ ಹಾಕ್ತೀರಾ?
ಹುಳುಗಳು ಕಣ್ಣಿಗೆ ಕಾಣ್ತಾ ಇದೆ. ಹೆಚ್ಚಿಗೆ ಹುಳುಗಳೇ ತುಂಬಿವೆ. ಆದರೂ ಅದರಲ್ಲಿಯೇ ಬಿಸಿಯೂಟ ತಯಾರಿಸುತ್ತಿದ್ದೀರಲ್ಲ..
ಇದನ್ನು ನಿಮ್ಮ ಮಕ್ಕಳಿಗೆ ತಿನ್ನುಸುತ್ತೀರಾ. ಹೀಗೆ ಗ್ರಾಮಸ್ಥರು ಮುಖ್ಯ ಶಿಕ್ಷಕ ನಾರಾಯಣ ಸೂರ್ಯರವರನ್ನು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಗೋದಿ, ಅಕ್ಕಿ, ಬೇಳೆ ಬಂದಿದೆ. ಅದನ್ನು ಸರಿಯಾಗಿ ನೋಡಿಕೊಂಡಿಲ್ಲ. ಅದರಲ್ಲಿ ಹುಳುಗಳು ಬಿದ್ದಿರುವುದು ಗೊತ್ತಾಗಿಲ್ಲ. ದಾಸ್ತಾನು ಕೊಠಡಿಯಲ್ಲಿದ್ದ ಗೋದಿಯನ್ನು ಅಡುಗೆ ಸಿಬ್ಬಂದಿ ಗಿರಣಿಗೆ ಹಾಗೆಯೇ ಕಳುಹಿಸಿದ್ದಾರೆ. ಇದರಿಂದ ತಪ್ಪಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸುತ್ತಿದ್ದಂತೆ ಮತ್ತಷ್ಟು ಗರಂ ಆದರು. ಗೋದಾಮಿನಲ್ಲಿಟ್ಟಿರುವ ಆಹಾರ ಪದಾರ್ಥಗಳನ್ನು ಪರಿಶೀಲಿಸುವುದು ನಿಮ್ಮ ಕರ್ತವ್ಯ. ಅದನ್ನು ಮಾಡದೇ ನಿರ್ಲಕ್ಷ್ಯ ವಹಿಸಿದ್ದೀರಿ. ನಾಳೆ ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಗತಿ, ಹುಳುಗಳನ್ನು ತಿನ್ನುವುದರಿಂದ ಕಾಯಿಲೆಗಳು ಬರಬಹುದು. ನಿಮ್ಮ ಮಕ್ಕಳೇ ಇದ್ದಿದ್ದರೆ ಹುಳುಗಳ ಆಹಾರವನ್ನು ತಿನ್ನಿಸುತ್ತಿದ್ದೀರಾ ಎಂದು ಮುಖಂಡರಾದ ವೆಂಕಟಾಚಲಪತಿ ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

