ಕೋಲಾರ

ಗೋವಾ ಪ್ರವಾಸದಲ್ಲಿ ಜಿಪಂ ಸದಸ್ಯರು

Published On :

ಕ.ಪ್ರ. ವಾರ್ತೆ, ಕೋಲಾರ, ಜುಲೈ 4
ಕೋಲಾರ ಜಿಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಎರಡು ದಿನ ಬಾಕಿಯಿದ್ದು ಜೆಡಿಎಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಗೋವಕ್ಕೆ ಜಂಟಿ ಫಿಕನಿಕ್ ಹೋಗಿದ್ದಾರೆ.
ಜಿಪಂನಲ್ಲಿ ಜೆಡಿಎಸ್‌ನ 13 ಮಂದಿ ಸದಸ್ಯರಿದ್ದು ಬಹುತೇಕ ಸದಸ್ಯರು ಪ್ರವಾಸಕ್ಕೆ ತೆರಳಿದ್ದರೆ ಒಂದಿಬ್ಬರು ಮಾತ್ರ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ.
ಜೆಡಿಎಸ್‌ಗೆ ಅಧಿಕಾರ ಹಿಡಿಯಲು ಬೇಕಾಗುವಷ್ಟು ಸದಸ್ಯರ ಬಹುಮತವಿದ್ದರೂ ಬಿಜೆಪಿ ಕೆಲ ಸದಸ್ಯರನ್ನು ಗೋವಕ್ಕೆ ಕರೆದೊಯ್ದಿರುವುದಕ್ಕೆ ಜೆಡಿಎಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಜೆಡಿಎಸ್‌ನ ಆಶಾ ಲೋಕೇಶ್ ಪರ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಲಾಬಿ ನಡೆಸುತ್ತಿದ್ದರೆ ಕೋಮುಲ್ ನಿರ್ದೇಶಕ ನಂಜೇಗೌಡ ತಮ್ಮ ಪತ್ನಿ ರತ್ನಮ್ಮರನ್ನು ಅಧ್ಯಕ್ಷ ಪೀಠದಲ್ಲಿ ಕೂರಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ.
ಆಶಾ ಲೋಕೇಶ್ ಅವರಿಗೆ ಈ ಹಿಂದೆ ಅವಕಾಶಗಳು ತಪ್ಪಿರುವುದರಿಂದ ಈ ಬಾರಿ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಮಾಜಿ ಸಚಿವ ಶ್ರೀನಿವಾಸಗೌಡರು ಪ್ರಯತ್ನಿಸುತ್ತಿದ್ದಾರಲ್ಲದೆ, ಜೆಡಿಎಸ್ ಸದಸ್ಯರಲ್ಲಿ ಒಮ್ಮತ ಮೂಡಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊರೆ ಹೋಗಿದ್ದಾರೆ.

ಕಾಂಗ್ರೆಸ್ ಮೌನ: ಕಾಂಗ್ರೆಸ್‌ನಲ್ಲಿ ಕೇವಲ 5 ಮಂದಿ ಸದಸ್ಯರು ಇರುವುದರಿಂದ ಚುನಾವಣೆ ಬಗ್ಗೆ ಆಸಕ್ತಿ ತೋರದಿದ್ದರೂ ಜೆಡಿಎಸ್‌ನಲ್ಲಿ ಭಿನ್ನಮತ ಉಂಟಾದಲ್ಲಿ ಅಖಾಢಕ್ಕೆ ಇಳಿಯಲು ಮುಖಂಡರು ಚಿಂತನೆ ನಡೆಸಿದ್ದಾರೆ.
ಮಂಗಳವಾರ ರಾತ್ರಿಗೆ ಗೋವದಿಂದ ವಾಪಸ್ ಬಂದು ಬೆಂಗಳೂರಿನಲ್ಲಿ ತಂಗಲಿರುವ ಜೆಡಿಎಸ್ ಸದಸ್ಯರು ಹಾಗೂ ಮುಖಂಡರು ಪಕ್ಷದ ವರಿಷ್ಠರ ಸಲಹೆಯೊಂದಿಗೆ ಒಮ್ಮತದ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಗೋವ ಪ್ರವಾಸದಲ್ಲಿರುವ ಜಿಪಂ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.




ಪತ್ನಿಯರ ಪರ ಲಾಬಿ
ಈಗಾಗಲೇ ಕೋಮುಲ್ ನಿರ್ದೇಶಕರಾಗಿರುವ ನಂಜೇಗೌಡರು ತಮ್ಮ ಪತ್ನಿಗೆ ಅಧ್ಯಕ್ಷ ಸ್ಥಾನಕ್ಕಾಗಿ ನಡೆಸುವ ಪ್ರಯತ್ನಕ್ಕೆ ಮಾಲೂರು ಜೆಡಿಎಸ್‌ನಲ್ಲಿ ಅಪಸ್ವರ ಹೇಳಿ ಬಂದಿದೆ ಎನ್ನಲಾಗಿದೆ. ಒಂದು ವೇಳೆ ರತ್ನಮ್ಮ ಜಿಪಂ ಅಧ್ಯಕ್ಷರಾದರೆ ನಂಜೇಗೌಡ ಕ್ಷೇತ್ರದಲ್ಲಿ ಪ್ರಭಾವಿತರಾಗುತ್ತಾರೆ, ಶಾಸಕ ಮಂಜುನಾಥಗೌಡರಿಗೆ ಮುಂದಿನ ದಿನಗಳಲ್ಲಿ ಪೈಪೋಟಿ ನೀಡಬಹುದು. ಇದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕೆಂದು ಬೆಂಬಲಿಗರು ಶಾಸಕರಿಗೆ ಸಲಹೆ ನೀಡಿದ್ದಾರೆನ್ನಲಾಗಿದೆ. ಈ ಬಾರಿ ತಮ್ಮ ಪತ್ನಿಗೆ ಅಧ್ಯಕ್ಷರಾಗಲು ಅವಕಾಶ ನೀಡದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆಂದು ಜೆಡಿಎಸ್‌ನ ಆಶಾ ಪತಿ ಲೋಕೇಶ್ ಪಟ್ಟು ಹಿಡಿದಿರುವುದರಿಂದ ಒಗ್ಗಟ್ಟು ಮೂಡಿಸಲು ಮುಖಂಡರು ಹರ ಸಾಹಸ ಮಾಡುತ್ತಿದ್ದು, ಗೋವ ಪ್ರವಾಸದ ಸಂದರ್ಭದಲ್ಲಿ ಗೊಂದಲಗಳಿಗೆ ತೆರೆ ಎಳೆಯಲು ಉದ್ದೇಶಿಸಿದ್ದಾರೆ.


ಜೆಡಿಎಸ್‌ಗೆ ಬಿಜೆಪಿ ಬೆಂಬಲ


ಬಿಜೆಪಿಯ ಸದಸ್ಯರಾದ ಯಲ್ಲಮ್ಮ, ರಾಮಸ್ವಾಮಿರೆಡ್ಡಿ, ಕೆ. ಯಶೋಧ, ಸಿಮೋಲ್ ಮೋಹನ್, ಮುತ್ಯಾಲಮ್ಮ ಅವರು ಜೆಡಿಎಸ್ ಸದದ್ಯರೊಂದಿಗೆ ಇದ್ದಾರೆ. ಇದೇ ಪಕ್ಷದ ಬಿ. ನಾರಾಯಣಮ್ಮ ಹೈದರಬಾದ್ ಕಡೆ ತೆರಳಿದ್ದರೆ, ಮಾಜಿ ಅಧ್ಯಕ್ಷೆ ಮಂಜುಳ ಅವರು ಪತಿ ವೆಂಕಟೇಶ್ ಜೊತೆ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ.
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಕಡೆಯ ಅವಧಿಯ ಅಧಿಕಾರ ಇನ್ನು ಕೇವಲ 17 ತಿಂಗಳು ಬಾಕಿ ಉಳಿದಿದ್ದು ತಮ್ಮ ಪತ್ನಿಗೆ ಕನಿಷ್ಠ 6ರಿಂದ 7 ತಿಂಗಳು ಅವಕಾಶ ನೀಡಿ ನಂತರ ರತ್ನಮ್ಮ ಇಲ್ಲವೇ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಆಶಾ ಪರ ಪತಿ ಲೋಕೇಶ್ ತಿಳಿಸಿದ್ದು, ಬಂಡಾಯ ತಪ್ಪಿಸಲು ಗೋವ ಕ್ಯಾಂಪಿನಲ್ಲಿರುವ ಕೋಮುಲ್ ನಿರ್ದೇಶಕ ನಂಜೇಗೌಡ ಕಸರತ್ತು ಮುಂದುವರೆಸಿದ್ದಾರೆಂದು ತಿಳಿದು ಬಂದಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.