ಭೂಸೇನಾ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣ ಗುಳುಂ
ಕ.ಪ್ರ. ವಾರ್ತೆ ಕೋಲಾರ ಮಾ.30
ಜಿಲ್ಲಾ ಪಂಚಾಯಿತಿಗೆ 5054 ಲೆಕ್ಕ ಶೀರ್ಷಿಕೆಯಡಿ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ 17 ಕೋಟಿ ರು.ಗಳ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಆರೋಪಿಸಿದ್ದಾರೆ.
ತಾಲೂಕಿನ ನರಸಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಗುಣಮಟ್ಟದ ರಸ್ತೆ ಕಾಮಗಾರಿಗೆ ಬಳಕೆ ಮಾಡದೆ ಕಳಪೆ ಕಾಮಗಾರಿ ಮೂಲಕ ಭೂ ಸೇನಾ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಚಿವ ಆರ್.ವರ್ತೂರು ಪ್ರಕಾಶ್ ಶಾಮೀಲಾಗಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ತಮಗೆ ಖಚಿತ ಮಾಹಿತಿ ಬಂದಿದ್ದು, ಇದರ ಬಗ್ಗೆ ತನಿಖೆಗಾಗಿ ದಾಖಲಾತಿಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದೆಂದು ಎಂದು ತಿಳಿಸಿದ್ದಾರೆ.
ಹತ್ತು ಕೋಟಿ ರು.ಗಳು ಅನುದಾನದಲ್ಲಿ ಮೂರು ಕೋಟಿ ಎಪ್ಪತ್ತು ಲಕ್ಷ ರು.ಗಳನ್ನು ಭೂ ಸೇನಾ ನಿಗಮಕ್ಕೆ ನೀಡಿದ್ದು ಉಳಿದ ಏಳು ಕೋಟಿ ಮೂವತ್ತು ಲಕ್ಷ ರು.ಗಳನ್ನು ಜಿಲ್ಲಾ ಪಂಚಾಯ್ತಿಯ ತಾಂತ್ರಿಕ ವಿಭಾಗಕ್ಕೆ ನೀಡಲಾಗಿದೆಯಲ್ಲದೆ ನೀತಿ ಸಂಹಿತೆ ಜಾರಿಯಾದ ಮೇಲೆ ಬಂದಿರುವ 7 ಕೋಟಿ ರು. ಹಿಂದಿನ ದಿನಾಂಕಗಳಲ್ಲಿ ಕೆಲಸ ಪ್ರಾರಂಭಿಸಿದಂತೆ ತೋರಿಸಿ ಹಣ ಲಪಟಾಯಿಸುವ ಸಂಚು ನಡೆಸುತ್ತಿದ್ದಾರೆಂದು ದೂರಿದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ದಯಾನಂದ್, ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಕುರ್ಕಿ ರಾಜರಾಜೇಶ್ವರಿ,ನರಸಾಪುರ ಹೋಬಳಿ ಅಧ್ಯಕ್ಷ ಬೆಳಮಾರನಹಳ್ಳಿ ಆನಂದ್,ಎಪಿಎಂಸಿ ಸದಸ್ಯ ಬಣಕನಹಳ್ಳಿ ನಟರಾಜ್ ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

