ಕುಡಿವ ನೀರಿಗೆ ಅಭಾವ: ನಾಗರಿಕರ ಆಕ್ರೋಶ
ಕ.ಪ್ರ. ವಾರ್ತೆ ಬಾಗೇಪಲ್ಲಿ ಮಾ.30
ಪಟ್ಟಣದ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಪಟ್ಟಣದಲ್ಲಿ ತಾಂಡವವಾಡುತ್ತಿದ್ದರೂ, ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಪುರಸಭೆಯ ಅಧಿಕಾರಿಗಳು ವರ್ತಿಸುತ್ತಿದ್ದು, ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿತನದಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 7-8 ತಿಂಗಳಿಂದ ಪಟ್ಟಣದ ಕೆಲವು ವಾರ್ಡ್‌ಗಳಿಗೆ ಸಮರ್ಪಕವಾಗಿ ಪುರಸಭೆಯವರು ನೀರು ಪೂರೈಸಿಲ್ಲ, ಕೆಲವು ವಾರ್ಡ್ ಗಳಲ್ಲಿ 10-15 ದಿನಗಳಿಗೆ ನೀರು ಬಿಡುತ್ತಿದ್ದಾರೆ. ಅಧಿಕಾರಿಗಳು ಪುರಸಭೆಯ ಸಿಬ್ಬಂದಿ ವರ್ಗದವರು ಮಾಡುತ್ತಿರುವ ಮಲತಾಯಿ ಧೋರಣೆಗೆ ಅನೇಕ ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡುತ್ತಿದ್ದರೂ ಹಾಗೂ ಪತ್ರಿ ನಿತ್ಯವೂ ಪತ್ರಿಭಟನೆಗಳು ನಡೆಯುತ್ತಿದ್ದರೂ ಸಹ ತಲೆಕೆಡಿಸಿಕೊಳ್ಳುತ್ತಿಲ್ಲ.
ಕಳೆದ 2-3 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಅಂರ್ತಜಲದ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿನ ಏಕೈಕ ಆಸರೆಯಾಗಿದ್ದ ಚಿತ್ರಾವತಿ ಬ್ಯಾರೇಜ್ ಸೇರಿದಂತೆ ಕೆರೆ, ಕುಂಟೆ ಹಾಗೂ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರಿಂದ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರಿಕೆ ಉತ್ತರ ನೀಡುವ ಮೂಲಕ ಪುರಸಭೆ ಮುಖ್ಯಾಧಿಕಾರಿ ಕೈತೊಳೆದುಕೊಳ್ಳುತ್ತಿದ್ದಾರೆ.
ಇದರಿಂದ ಪಟ್ಟಣದ ನಾಗರಿಕರ ಗೋಳು ಯಾರಿಗೆ ಹೇಳಬೇಕೋ ತಿಳಿಯದ ಪರಿಸ್ಥಿತಿ ಸಾರ್ವಜನಿಕರದ್ದು. ಮೊದಲೇ ಬರದಿಂದ ಬಳಲುತ್ತಿರುವ ಪಟ್ಟಣದ ಜನರಿಗೆ ಕುಡಿಯುವ ನೀರಿನ ಭವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರು. ಅನುದಾನವನ್ನು ಪುರಸಭೆಗೆ ಬಿಡುಗಡೆ ಮಾಡಿದ್ದರೂ, ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕುಡಿಯುವ ನೀರಿಗಾಗಿ ಸಾರ್ವಜನಿಕರ ಹಾಹಾಕಾರ ಮುಗಿಲು ಮಟ್ಟಿದೆ.
ಎಲ್ಲಾ ಮತದಾನಕ್ಕಾಗಿ: ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ಸೀಮಿತ ವಾಡ್ ರ್ಗಳಿಗೆ ಮಾತ್ರ ನೀರನ್ನು ಪೂರೈಸುತ್ತಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಮತ್ತೆ ಮನೆ ಬಾಗಿಲಿಗೆ ನೀರನ್ನು ಪೂರೈಸಬಹುದು. ಆದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರು ನೀರಿಗಾಗಿ ಪರದಾಟ ತಪ್ಪಿಲ್ಲ, ಪಟ್ಟಣದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳಲ್ಲಿ ಬಹು ಮುಖ್ಯವಾಗಿರುವಂತಹ ಕುಡಿಯುವ ನೀರುನ್ನು ಪೂರೈಸಬೇಕಾದ ಪುರಸಭೆಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಾಗರಿಕರು ಒಂದು ಹನಿ ಕುಡಿಯುವ ನೀರಿಗಾಗಿ ಸಮಾಜ ಸೇವಕರನ್ನು ಅವಲಂಭಿಸುವಂತಹ ಪರಿಸ್ಥಿತಿ ಇದೆ. ಆದರೆ ಪುರಸಭೆಯ ಅಧಿಕಾರಿಗಳು ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನೀರಿಲ್ಲ ನಾವು ಮಾತ್ರ ಏನು ಮಾಡುವುದು ಎಂದು ಕೈಚೆಲ್ಲುತ್ತಿರುವುದು ಎಷ್ಟರಮಟ್ಟಿಗೆ ಸರಿ. ಕುಡಿಯುವ ನೀರಿಗಾಗಿ ಪಟ್ಟಣದಲ್ಲಿ ಮಹಿಳೆಯರು ಮನೆಯಲ್ಲಿ ಕೆಲಸ ಕಾರ್ಯ ಬಿಟ್ಟು ಸಾರ್ವಜನಿಕ ಕೊಳಾಯಿಗಳ ಮುಂದೆ ಗಂಟೆಗಟ್ಟಲೆ ಕಾದು ಕುಳಿತರೂ ನೀರು ಸಿಗುವುದಿಲ್ಲ. ಅಲ್ಪಸ್ವಲ್ಪ ನೀರು ಬಂದರೆ ನೀರು ಹಿಡಿಯುವ ತವಕದಲ್ಲಿ ಜಗಳ ಮಾಡಿಕೊಳ್ಳುವಂತೆ ಸ್ಥಿತಿ, ಜಗಳದಲ್ಲಿ ಬರುವ ನೀರು ರಸ್ತೆ ಮತ್ತು ಚರಂಡಿಗಳ ಪಾಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ನಿವಾರಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

