ಹೈಟೆಕ್ ಮಾದರಿಯ ಪತ್ರಕರ್ತರ ಭವನಕ್ಕೆ ಶಂಕು
ಕ.ಪ್ರ. ವಾರ್ತೆ ್ಣ ಚಿಕ್ಕಬಳ್ಳಾಪುರ ್ಣ ಮಾ.29
ನಗರದ ಹಳೆಯ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಹೈಟೆಕ್ ಮಾದರಿಯ ಪತ್ರಕರ್ತರ ಭವನ ನಿರ್ಮಾಣಕ್ಕಾಗಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಇಡೀ ರಾಜ್ಯದಲ್ಲಿಯೇ ಪತ್ರಕರ್ತರ ಸಂಘದ ಭವನಗಳಿಗೆ ಮಾದರಿಯಾಗಿ 2.34 ಕೋಟಿ ರು. ವೆಚ್ಚದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಪತ್ರಕರ್ತರ ಭವನದ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ಹಳೆಯ ಉಪ ವಿಭಾಗಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಿರ್ಮಿಸಲು ಮುಂದಾಗಿದ್ದು ನಾಲ್ಕು ಅಂತಸ್ತುಗಳ ಕಟ್ಟಡದಲ್ಲಿ ಗ್ರಂಥಾಲಯ, ಸಭಾಂಗಣ, ಮೀಟಿಂಗ್‌ಹಾಲ್, ಪ್ರೆಸ್‌ಕಾನ್ಫೆರೆನ್ಸ್ ಹಾಲ್ ಸೇರಿದಂತೆ ಸುಸಜ್ಜಿತ ಕೊಠಡಿಗಳಿಂದ ಕಟ್ಟಡ ತಲೆ ಎತ್ತಲಿದೆ. ಇದಕ್ಕೆ ಶ್ರೀ ಅದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಗುದ್ದಲಿ ಪೂಜೆ ನೆರವೇರಿಸಿ ಶುಭ ಕೋರಿದರು.
ನಂತರ ನಿವೇಶನ ಜಾಗದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಮಾಜದ ಓರೆಕೋರೆಗಳನ್ನು ತಿದ್ದುವಂತಹ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುವ ಪತ್ರಕರ್ತರು ಎಚ್ಚರ ತಪ್ಪದೇ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿರುವುದು ಸಮಾಜದ ಪ್ರಗತಿ, ಜನರ ಶ್ರೇಯಸ್ಸಿನ ದೃಷ್ಟಿಯಲ್ಲಿ ಅಗತ್ಯವಾಗಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಮಾದರಿಯಲ್ಲಿ ಆಕರ್ಷಕವಾಗಿ ಭವನವನ್ನು ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತಸದ ವಿಷಯ. ಆದಷ್ಟು ಬೇಗ ಕಟ್ಟಡ ನಿರ್ಮಾಣವಾಗಿ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಆಶಿಸಿದ ಶ್ರೀಗಳು, ಯಾವುದೇ ಕೆಲಸಗಳು ಸುಸೂತ್ರವಾಗಿ ನಡೆಯಬೇಕಾದರೆ ಪ್ರತಿಯೊಬ್ಬರ ಸಹಕಾರ ಬೇಕಾಗುತ್ತದೆ.ಎಲ್ಲರೂ ಸೇರಿಕೊಂಡಾಗ ದೊಡ್ಡ ಕೆಲಸವು ಚಿಕ್ಕದಾಗುತ್ತದೆ. ಇದನ್ನರಿತು ಪತ್ರಕರ್ತರು ತಮ್ಮ ತಮ್ಮಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಮೊದಲಿಯರ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಂಘವು 2.34 ಕೋಟಿ ರು. ವೆಚ್ಚದಲ್ಲಿ ಭವನವನ್ನು ನಿರ್ಮಿಸುತ್ತಿದ್ದು ರಾಜ್ಯದಲ್ಲಿಯೇ ಇಷ್ಟು ಮೊತ್ತದಲ್ಲಿ ನಿರ್ಮಿಸಿರುವ ಮೊದಲ ಪತ್ರಕರ್ತರ ಭವನ ಇದಾಗುತ್ತಿದೆ. ಇದು ತಮಾಷೆಯ ವಿಷಯವಲ್ಲ. ಪತ್ರಕರ್ತರ ಸಂಘದ ಮಟ್ಟಿಗೆ ದಾಖಲೆ ಎಂದು ಬಣ್ಣಿಸಿದ ಅವರು, ನಿವೇಶನ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್ ಅವರ ಪರಿಶ್ರಮ ಮತ್ತು ಸಂಘದ ಸದಸ್ಯರ ಸಹಕಾರ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್ ಮಾತನಾಡಿ, ಸಂಘದ ಸದಸ್ಯರಿಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಾಗಿದೆ ಎಂದ ಅವರು, ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಭವನನಿರ್ಮಾಣಕ್ಕೆ 5 ಗುಂಟೆಯಷ್ಟು ಜಾಗ ಸಿಕ್ಕಿರುವುದು ಎಲ್ಲರ ಹೆಮ್ಮೆಪಡುವಂತಹ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅದಿಚುಂಚನಗಿರಿ ಮಠದ ಶ್ರೀಮಂಗಳಾನಂದನಾಥ ಸ್ವಾಮೀಜಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಕವನ, ತಹಸೀಲ್ದಾರ್ ನಟೇಶ್, ಪತ್ರಕರ್ತರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

