ಚುನಾವಣೆ ಬಹಿಷ್ಕಾರ ಬೆದರಿಕೆ
ಚಿಕ್ಕಬಳ್ಳಾಪುರ: ಕೊಟ್ಟ ಭರವಸೆಯನ್ನು ಈಡೇರಿಸದೇ ಜಿಲ್ಲಾ ಕೇಂದ್ರದಲ್ಲಿನ ಅಂಬೇಡ್ಕರ್ ಕಾಲೋನಿಯ ನಿವಾಸಿಗಳನ್ನು ರೇಲ್ವೆ ಹಳಿ ನಿರ್ಮಾಣಕ್ಕಾಗಿ ಒಕ್ಕಲೆಬ್ಬಿಸುತ್ತಿರುವುದಕ್ಕೆ ಅಲ್ಲಿನ ಜನರು ಚುನಾವಣೆ ಬಹಿಷ್ಕರಿಸುವ ಬೆದರಿಕೆಯನ್ನು ಹಾಕಿದ್ದಾರೆ. ತಮಗೆ ಅನ್ಯಾಯವಾದರೆ ಮುಂದೆ ನಡೆಯುವ ಯಾವುದೇ ಚುನಾವಣೆಗೆ ಸಹಕಾರ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ರೈಲ್ವೆ ನಿಲ್ದಾಣ ಸಮೀಪ ಇರುವ ಅಂಬೇಡ್ಕರ್ ಕಾಲೋನಿಯಲ್ಲಿನ 200 ಕ್ಕೂ ಹೆಚ್ಚು ಮನೆಗಳನ್ನು ರೈಲ್ವೆ ಹಳಿ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಮನೆಗಳನ್ನು ಖಾಲಿ ಮಾಡಬೇಕೆಂದು ಜಿಲ್ಲಾಡಳಿತದ ವತಿಯಿಂದ ನೋಟಿಸ್ ಸಹ ವಿತರಣೆ ಮಾಡಲಾಗಿದೆ. ಇದರಿಂದ ಕಂಗಾಲಾಗಿರುವ ನಿವಾಸಿಗಳು, ಈ ಹಿಂದೆ ನೀಡಿದ ಭರವಸೆಯಂತೆ ಮನೆಗಳನ್ನು ಕಳೆದುಕೊಳ್ಳುವವರಿಗೆ ಬೇರೆ ಸ್ಥಳದಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸುವುದು. ಪರಿಹಾರ ನೀಡುವುದಕ್ಕೆ ಹಿಂದೇಟು ಹಾಕುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ದಲಿತ ಮುಖಂಡರು,ಚಾಮರಾಜಪೇಟೆಗೆ ಹೊಂದಿಕೊಂಡಂತಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಅನೇಕ ದಶಕಗಳಿಂದಲೂ ದಲಿತರು ಸಾಲ ಸೋಲ ಮಾಡಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಕೂಲಿ ನಾಲಿ ಮಾಡಿ ಸಂಪಾದಿಸುತ್ತಿದ್ದರೂ ಸಹ ಸಹ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಜನರಿರುವ ಕಾಲೋನಿಗೆ ರಸ್ತೆ, ಚರಂಡಿ, ಶಾಲೆ ಮತ್ತು ಗ್ರಂಥಾಲಯದ ಸೌಲಭ್ಯವನ್ನು ಸಹ ನಗರಸಭೆಯ ಒದಗಿಸಿದೆ. ಹಾಗೆಯೇ ನಗರಸಭೆಯಿಂದ ನಿವಾಸಿಗಳು ತಮ್ಮ ತಮ್ಮ ಮನೆಗಳಿಗೆ ಖಾತೆಗಳನ್ನು ಮಾಡಿಸಿಕೊಂಡಿದ್ದಾರೆ. ಸರ್ಕಾರಕ್ಕೆ ನೀಡಬೇಕಾದ ಕಂದಾಯವನ್ನು ಕಟ್ಟುತ್ತಿದ್ದಾರೆ. ಇದೀಗ ರೈಲ್ವೆ ಹಳಿ ನಿರ್ಮಾಣಕ್ಕಾಗಿ ಅಂಬೇಡ್ಕರ್ ಕಾಲೋನಿಯನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.
ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಒಕ್ಕಲೆಬ್ಬಿಸಬೇಕಾದರೆ ಇಲ್ಲಿನ ನಿವಾಸಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಬೇರೆ ಕಡೆಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈ ಹಿಂದೆ ಸಭೆಯನ್ನು ಕರೆದು ಚರ್ಚೆ ನಡೆಸಿದಾಗ ಕೇಂದ್ರ ಸಚಿವರು ಈ ರೀತಿ ಭರವಸೆಯನ್ನು ನೀಡಿದ್ದರು. ಯಾವುದೇ ಕಾರಣಕ್ಕೂ ನಿವಾಸಿಗಳಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಹೇಳಿದ್ದರು. ಆದರೆ, ಈಗ ಭರವಸೆ ಕೊಟ್ಟವರು ಮರೆತು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕೆ.ಸಿ. ರಾಜಾಕಾಂತ್, ಮಿಲ್ಟನ್ ವೆಂಕಟೇಶ್, ಸು.ಧಾ. ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
ಸಾಮಾಜಿಕ ಬಹಿಷ್ಕಾರ ಖಂಡಿಸಿ ಪ್ರತಿಭಟನೆ
ಶ್ರೀನಿವಾಸಪುರ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಿರುವ 30 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಇಲ್ಲಿನ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆ ಮತ್ತು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಿವೆ. ಅವುಗಳನ್ನು ತಡೆಯಲು ಬಿಜೆಪಿ ಸರ್ಕಾರ ಯಾವುದೇ ರೀತಿಯ ಕ್ರಮ ಜರುಗಿಸದೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾಮಾಜಿಕ ಬಹಿಷ್ಕಾರ ಕೃತ್ಯ ಮಾಡಿವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಪಟ್ಟಣದ ಮುಳಬಾಗಿಲು ರಸ್ತೆಯಲ್ಲಿ ರಸ್ತೆತಡೆ ಹಮ್ಮಿಕೊಂಡು ಸುಮಾರು ಗಂಟೆಗಳ ಕಾಲ ರಸ್ತೆತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಆಡ್ಡಿಯನ್ನುಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆಯು ನೇತೃತ್ವವನ್ನು ವಿ. ವೆಂಕಟೇಶ್, ಈರಪ್ಪ, ವಿ. ಚಂದ್ರಪ್ಪ, ಎನ್. ವೆಂಕಟರವಣಪ್ಪ ಗಂಗಾಧರ, ಎಂ. ನಾರಾಯಣಸ್ವಾಮಿ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

