ಕೋಲಾರ

ಚಿಕ್ಕಬಳ್ಳಾಪುರ: 120 ನಾಮಪತ್ರ ಅಸಿಂಧು

Published On :

ಚಿಕ್ಕಬಳ್ಳಾಪುರ: ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಬಯಸಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಸೋಮವಾರ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಒಟ್ಟು 120 ನಾಮಪತ್ರಗಳು ನಾನಾ ದೋಷಗಳಿಂದ ಅಂಗೀಕಾರವಾಗದೇ ತಿರಸ್ಕೃತಗೊಂಡಿವೆ.
ತಿರಸ್ಕೃತಗೊಂಡಿರುವುದರಲ್ಲಿ 79 ನಾಮಪತ್ರಗಳು ಚಿಕ್ಕಬಳ್ಳಾಪುರ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಬಯಸಿದವರು. ಈ ಮೂಲಕ ಜಿಲ್ಲಾ ಕೇಂದ್ರವೇ ಜಿಲ್ಲೆಯಲ್ಲಿ ಅತಿ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿದ್ದರಲ್ಲಿ ಮೊದಲ ಸ್ಥಾನದಲ್ಲಿದೆ.
ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳಿಗಿಂತ ಚಿಕ್ಕಬಳ್ಳಾಪುರ ನಗರಸಭೆ ವಿವಾದಗಳಿಂದ ಸಾಕಷ್ಟು ಸುದ್ದಿ ಮಾಡುವ ಮೂಲಕ ರಾಜಕೀಯವಾಗಿ ತನ್ನದೇ ಆದ ಹೆಸರನ್ನು ಪಡೆದುಕೊಂಡಿದೆ. ಅಭಿವೃದ್ಧಿಯಲ್ಲಿ ನಿಧಾನಗತಿಯಾದರೂ ಅಧಿಕಾರಕ್ಕಾಗಿ ಕಿತ್ತಾಟ, ಕಾಲೆಳೆಯುವುದು. ತಮ್ಮ ಸ್ವಾರ್ಥ ಸಾಧನೆಗಾಗಿ ಬಹಳಷ್ಟು ಮಂದಿ ಸದಸ್ಯರು ಚಿಟ್ಟೆಗಳಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದು.
ಒಬ್ಬ ವ್ಯಕ್ತಿಗೆ ಕೆಲ ದಿನಗಳವರೆಗೂ ತಮ್ಮ ಬೆಂಬಲ ವ್ಯಕ್ತಪಡಿಸಿ, ಇದ್ದಕ್ಕಿದ್ದಂತೆ ಆ ವ್ಯಕ್ತಿಯ ವಿರುದ್ಧವೇ ತಿರುಗಿ ಬಿದ್ದು ರಾಜಕೀಯ ಚದುರಂಗದಾಟವನ್ನಾಡಿ ಅಧಿಕಾರದಿಂದ ಇಳಿಸುವುದು ಇಲ್ಲಿ ಸಾಮಾನ್ಯವಾಗಿ ನಡೆಯುವ ರಾಜಕೀಯ ಚಟುವಟಿಕೆಗಳು. ಈ ಬಗ್ಗೆ ಎಷ್ಟೇ ಟೀಕೆಗಳು ಬಂದರೂ ಸದಸ್ಯರಾಗಿದ್ದಂತಹವರು(ಕೆಲವರು) ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಜನರ ಸಮಸ್ಯೆಗಳನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಇಂತಹ ನಗರಸಭೆಯ ಆಡಳಿತ ವ್ಯವಸ್ಥೆ ಬದಲಾಯಿಸುವ ದೃಷ್ಟಿಯಿಂದಲೇನೋ ಎನ್ನುವಂತೆ ಒಟ್ಟು 165 ಮಂದಿ ನಾಮಪತ್ರಗಳನ್ನು ಈ ಬಾರಿ ಸಲ್ಲಿಸಿದ್ದು, ಇದರಲ್ಲಿ ಪಕ್ಷೇತರ ಪಾಲು 66 ಆಗಿತ್ತು. ಇನ್ನೂ ಕಾಂಗ್ರೆಸ್ 33, ಬಿಜೆಪಿ 10, ಜೆಡಿಎಸ್ 31, ಜೆಡಿಯು 2, ಕೆಜೆಪಿ 12, ಬಿಎಸ್ ಆರ್ ಕಾಂಗ್ರೆಸ್ 11 ಕಡೆ ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದು, ಪಕ್ಷೇತರರಿಂದಲೇ ನಾಮಪತ್ರಗಳು ಹೆಚ್ಚಿಗೆ ಸ್ವೀಕಾರವಾಗಿತ್ತು. ಇದೀಗ 79 ನಾಮಪತ್ರಗಳು ದೋಷಗಳಿಂದ ತಮ್ಮ ಮಾನ್ಯತೆ ಕಳೆದುಕೊಂಡಿವೆ.
ತಿರಸ್ಕೃತ ಪತ್ರಗಳು: ಜಿಲ್ಲೆಯಲ್ಲಿ ಒಟ್ಟು 1155 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 120 ನಾಮಪತ್ರಗಳು ಅಂಗೀಕಾರವಾಗಿಲ್ಲವಾದ್ದರಿಂದ ಈಗ 1035 ನಾಮಪತ್ರಗಳು ಮಾನ್ಯತೆ ಪಡೆದುಕೊಂಡಿವೆ. ಚಿಕ್ಕಬಳ್ಳಾಪುರ ನಗರಸಭೆ 31 ವಾರ್ಡುಗಳಿಗೆ ಸಲ್ಲಿಸಲಾದ 371 ನಾಮಪತ್ರಗಳ 79 ನಾಮಪತ್ರಗಳು, ಚಿಂತಾಮಣಿ ನಗರಸಭೆಯ 31 ವಾರ್ಡುಗಳಿಗೆ ಸಲ್ಲಿಸಲಾದ 182 ನಾಮಪತ್ರಗಳಿಗೆ 9 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇನ್ನೂ ಬಾಗೇಪಲ್ಲಿ ಪುರಸಭೆಯ 23 ಸ್ಥಾನಗಳಿಗೆ 196 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 1 ನಾಮಪತ್ರ ತಿರಸ್ಕೃತಗೊಂಡಿದೆ.
ಗುಡಿಬಂಡೆ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ 109 ನಾಮಪತ್ರ ಸಲ್ಲಿಸಿದ್ದರೆ, ಇದರಲ್ಲಿ 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ಗೌರಿಬಿದನೂರು ಪಟ್ಟಣ ಪಂಚಾಯಿತಿಯ 23 ಸ್ಥಾನಗಳಿಗೆ 141 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 12 ನಾಮಪತ್ರಗಳು ತಿರಸ್ಕೃತಗೊಂಡಿವೆ. ಶಿಡ್ಲಘಟ್ಟ ಪುರಸಭೆಯ 27 ಸ್ಥಾನಗಳಿಗೆ ಒಟ್ಟು 156 ನಾಮಪತ್ರ ಸಲ್ಲಿಸಿದ್ದು, ಒಟ್ಟು 13 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಆತಂಕ, ಬೇಸರ... ಅಭ್ಯರ್ಥಿಗಳಲ್ಲಿ ತಮ್ಮ ನಾಮಪತ್ರ ಅಂಗೀಕಾರವಾಗುತ್ತದೆಯಾ ಇಲ್ಲವೇ ಏನಾದರೂ ದೋಷಗಳಿಂದ ತಿರಸ್ಕೃತಗೊಳ್ಳುತ್ತದೆಯಾ ಎಂಬ ಭಯ ಸಾಮಾನ್ಯವಾಗಿ ಕಾಡುತ್ತಿತ್ತು. ಕೆಲವರು ಎರಡೆರಡು ನಾಮಪತ್ರ ಸಲ್ಲಿಸಿದರು. ನಾಮಪತ್ರಗಳ ಸಲ್ಲಿಕೆಯ ನಡುವೆಯೇ ತಮ್ಮ ಆಪ್ತರೊಂದಿಗೆ ಪರಿಶೀಲಿಸಿ ದೋಷ ಹುಡುಕಿದ್ದರು. ಅನೇಕರಿಗೆ ನಾಮಪತ್ರ ಅಂಗೀಕಾರವಾಗಿ ಬಿಟ್ಟರೆ ಸಾಕಪ್ಪ, ಆಮೇಲೆ ಮತದಾರರನ್ನು ಸೆಳೆಯುವ ಕಸರತ್ತನ್ನು ಮಾಡೋಣ ಎಂದುಕೊಂಡಿದ್ದು ಸೋಮವಾರ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅನೇಕರ ಎದೆ ಡವಡವ ಎನ್ನುತ್ತಿತ್ತು.

ಕೋಲಾರ: 36 ನಾಮಪತ್ರ ತಿರಸ್ಕೃತ
ಕೋಲಾರ: ಕೋಲಾರ ನಗರಸಭೆಯ 35 ವಾರ್ಡುಗಳಿಗೆ ಮಾರ್ಚ್ 7 ರಂದು ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ 262 ನಾಮಪತ್ರಗಳಲ್ಲಿ 36 ತಿರಸ್ಕೃತಗೊಂಡಿವೆ. ಜೆಡಿಎಸ್, ಕಾಂಗ್ರೆಸ್, ವರ್ತೂರ್ ಬಣ, ಬಿಜೆಪಿ, ಕೆಜೆಪಿ, ಸಿಪಿಐಎಂ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಾಮಪತ್ರಗಳನ್ನು ಸಲ್ಲಿಸಲಾಗಿದ್ದು ಜೆಡಿಎಸ್ ಮತ್ತು ವರ್ತೂರ್ ಬಣದಿಂದ ಸ್ಪರ್ಧಿಸಲು ಅನೇಕರು ತೀವ್ರ ಪೈಪೋಟಿ ನಡೆಸಿದ್ದು ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಕಣಕ್ಕೆ ಇಳಿಯಲು ನಿರ್ಧರಿಸಿರುವವರನ್ನು ಸಮಾಧಾನ ಪಡಿಸಲು ಮುಖಂಡರು ಕಸರತ್ತು ನಡೆಸಿದ್ದಾರೆ. 23ನೇ ವಾರ್ಡಿನಲ್ಲಿ ಜೆಡಿಎಸ್‌ನಿಂದ ರಾಜೇಶ್ವರಿ ಮತ್ತು ಸಾಕಮ್ಮ ಎಂಬುವರಿಗೆ ಬಿ. ಫಾರಂ ನೀಡಲಾಗಿತ್ತು. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಮೊದಲು ನಾಮಪತ್ರ ನೀಡಿರುವ ಸಾಕಮ್ಮ ಅವರ ನಾಮಪತ್ರ ಪುರಸ್ಕರಿಸಿ ರಾಜೇಶ್ವರಿ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆಯಲು ಫೆ.27 ಕಡೆ ದಿನವಾಗಿರುವುದರಿಂದ ರಾಜಕೀಯ ಪಕ್ಷದ ಮುಖಂಡರು ಹಾಗೂ ಸಚಿವ ವರ್ತೂರ್ ಪ್ರಕಾಶ್ ಅವರು ಗೆಲ್ಲುವ ಅಭ್ಯರ್ಥಿಗಳಿಗೆ ಅಡ್ಡಿಯಾಗುವವರನ್ನು ಕಣಕ್ಕೆ ವಾಪಸ್ ತೆಗೆಸಲು ತೀವ್ರ ಕಸರತ್ತು ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.