ಕೋಲಾರ

ದೊಡ್ಡದ್ಯಾವರ ಮಹೋತ್ಸವ: ಮೆರವಣಿಗೆ

Published On :

ಕೋಲಾರ:  ತಾಲೂಕಿನ ಬ್ಯಾಲಹಳ್ಳಿಯಲ್ಲಿ ಮೂರು ದಿನಗಳ ದೊಡ್ಡದ್ಯಾವರ ಮಹೋತ್ಸವ ಆರಂಭಗೊಂಡಿದ್ದು, 2ನೇ ದಿನವಾದ ಶುಕ್ರವಾರ ಹಾಲು ಮತಸ್ಥರು ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಹೊಳೆಯಾಟದ ನಂತರ ಕೀಲುಕೋಟೆಯಿಂದ ಕಠಾರಿಪಾಳ್ಯದ ಕುಲಸ್ಥರ ದೇವಾಲಯಕ್ಕೆ ದೇವರ ಮೆರವಣಿಗೆ ಕಾರ್ಯ ಹಮ್ಮಿಕೊಂಡಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು. ಈ ಸಂದರ್ಭ ಕುಲಸ್ಥರು ಜನಪದ ನೃತ್ಯಗಳ ಮೂಲಕ ಜನರ ಗಮನ ಸೆಳೆದರು. ಪೂಜಾರಿಗಳ ತಲೆ ಮೇಲೆ ತೆಂಗಿನಕಾಯಿ ಹೊಡೆಯುವ ಪವಾಡ ವಿಸ್ಮಯವನ್ನು ಉಂಟು ಮಾಡಿತು. ಜತೆಗೆ ಕಂಬಿಯಾಟದ ಚಮತ್ಕಾರವೂ ನೋಡುಗರಲ್ಲಿ ಕುತೂಹಲವನ್ನು ಕೆರಳಿಸಿತು.ಮೆರವಣಿಗೆಯಲ್ಲಿ ಕಾರ್ಯಕ್ರಮದ ಮೇಲ್ವಿಚಾರಕರಾದ ಅನಂತಪ್ಪ, ಕೆ.ಎನ್.ಜಯಣ್ಣ, ಕೆ.ಬಿ.ಶ್ರೀನಿವಾಸ್, ಕೆ.ಮಹೇಶ್, ಡಿ.ಸಿ.ಜಗದೀಶ್, ಸುರೇಶ್, ಮಂಜುನಾಥ, ಜೆ.ಜೆ. ಪರಮೇಶ್,ಕೆ.ಎನ್. ನವೀನ್‌ಕುಮಾರ್, ವೇಣು, ಜಿ.ಮಹೇಶ್, ಜೆ.ವೆಂಕಟಾಚಲಪತಿ, ಅನಿಕಿರಿ ಕೃಷ್ಣಪ್ಪ ಹಾಗೂ ಹಾಲ ಮತಕ್ಕೆ ಸೇರಿದ ಕುಲಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಆರ್. ರವಿಶಂಕರ್ ನಾಯ್ಕ್  ನೇಮಕ
ಪಾವಗಡ:
ಕರ್ನಾಟಕ ಜನತಾ ಪಕ್ಷದ ತಾ. ಅಧ್ಯಕ್ಷರಾಗಿ ಉಪ್ಪರಹಳ್ಳಿ ರವಿಶಂಕರ್ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ರಂಗನಾಯ್ಕ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾ. ಅಧ್ಯಕ್ಷ ರವಿಶಂಕರ್‌ನಾಯ್ಕ್, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಾಲೂಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.

96 ನಾಮಪತ್ರ ಸಲ್ಲಿಕೆ
ತಿಪಟೂರು:
ತಿಪಟೂರು ನಗರಸಭಾ ಚುನಾವಣೆಗೆ ಇಂದಿನವರೆಗೆ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಕೆಜೆಪಿ 27, ಕಾಂಗ್ರೆಸ್ 21, ಬಿಜೆಪಿ 20, ಜೆಡಿಎಸ್ 9, ಬಿಎಸ್‌ಆರ್ 1, ಜೆಡಿಯು 1 ಮತ್ತು 17 ಪಕ್ಷೇತರರಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ವಿಜಯಕುಮಾರ್ ತಿಳಿಸಿದ್ದಾರೆ.

ನಾಳೆ ವಿಶೇಷ ಪೂಜೆ
ತುಮಕೂರು:
ಇಲ್ಲಿಗೆ ಸಮೀಪದ ಕುಚ್ಚಂಗಿಯ 1008 ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದಲ್ಲಿ ಫೆ.24 ರಂದು ಬೆಳಗ್ಗೆ 11 ಗಂಟೆಗೆ 44ನೇ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮಹಾಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು 10 ಗಂಟೆಗೆ ಕುಚ್ಚಂಗಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ.

ಹೈದರಾಬಾದ್ ಬಾಂಬ್ ಸ್ಫೋಟ: ಪ್ರತಿಭಟನೆ
ತುಮಕೂರು:
ಹೈದರಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಖಂಡಿಸಿ ಭಗತ್ ಕ್ರಾಂತಿ ಸೇನೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸ್ಫೋಟದಿಂದ ಅಮಾಯಕರು ಸಾವನ್ನಪ್ಪಿದ್ದು, ಇದು ಭಯೋತ್ಪಾದಕರ ಕೃತ್ಯವಾಗಿದ್ದು, ಈ ದುರಂತ ಮತ್ತೆಂದೂ ನಡೆಯಬಾರದೆಂದು ಹಾಗೂ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುವ ಮೂಲಕ ಕ್ರಾಂತಿ ಸೇನೆ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.
ಕೇಂದ್ರದ ವಿರುದ್ಧ ಕಿಡಿ: ಇಂತಹ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇದ್ದರೂ ಗೃಹ ಇಲಾಖೆ ಹಾಗೂ ಕಠಿಣ ಕಾನೂನುಗಳನ್ನು ರೂಪಿಸದೆ ಇರುವುದೇ ಕಾರಣ ಎಂದು ಸೇನೆಯ ಕಾರ್ಯಕರ್ತರು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸೇನೆಯ ಶ್ರೀನಿವಾಸಗೌಡ ಮಾತನಾಡಿದರು. ಸೇನೆಯ ಮುಖಂಡರಾದ ಆರಾಧ್ಯ ಮಂಚಲದೊರೆ, ಕಿರಣ, ಗಂಧರ್ವ, ನಿಶಾಂತ್, ಮೌರ್ಯ, ಮಂಜು, ರಮೇಶ್, ಮಂಜು ಆಂಬುಲೆನ್ಸ್, ರೋಷನ್, ಭಾನು, ಪವನ್, ರಾಜು, ಉಪೇಂದ್ರ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ರಾಜ್ಯ ವಿಕಲಚೇತನರ ಕ್ರೀಡಾಕೂಟ ಜಿಲ್ಲೆಯ 25 ಮಂದಿ ಆಯ್ಕೆ
ಕೋಲಾರ:
ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆಯಲಿರುವ 2ನೇ ರಾಜ್ಯ ಮಟ್ಟದ ವಿಕಲಚೇತನರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲೆಯ 25 ಮಂದಿ ತೆರಳಿದರು.
18 ಮಂದಿ ಬಾಲಕರು ಹಾಗೂ 7 ಮಂದಿ ಬಾಲಕಿಯರು ಈ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು, ತಂಡದ ವ್ಯವಸ್ಥಾಪಕರಾಗಿ ಮಾಲೂರಿನ ಐಐಆರ್‌ಟಿಯ ಅಶ್ವಥ್ಥ್, ಕಲಾವತಿ ಪಾಲ್ಗೊಂಡಿದ್ದಾರೆ.
ಡಿಡಿಪಿಐ ಕಚೇರಿ ಮುಂಭಾಗ ಕ್ರೀಡಾಕೂಟಕ್ಕೆ ತೆರಳಿದ ವಿಕಲಚೇತನರನ್ನು ಡಿಡಿಪಿಐ ಪದ್ಮನಾಭ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ, ಕಾರ್ಯದರ್ಶಿ ಚೌಡಪ್ಪ, ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಮುರಳಿಮೋಹನ್, ಜಿಲ್ಲಾ ಸಂಯೋಜಕ ಮುನಿರಾಜು, ಅನುದಾನಿತ ಶಾಲೆಗಳ ತಾಲೂಕು ಅಧ್ಯಕ್ಷ ಅಬ್ದುಲ್‌ಮುನ್ನಾನ್ ಹಾಜರಿದ್ದು ಬೀಳ್ಕೊಟರು.

ಸಫಲಮ್ಮ ದೇಗುಲ ಜೀರ್ಣೋದ್ಧಾರ
ಕೋಲಾರ:
ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಸಫಲಮ್ಮ ದೇವಾಲಯದಲ್ಲಿ ಶ್ರೀ ಸಫಲಮ್ಮ ದೇವಿಯ ಪುನರ್‌ಪ್ರತಿಷ್ಠಾಪನಾ ಮಹೋತ್ಸವ ಅದ್ಧೂರಿಯಿಂದ ನೆರವೇರಿತು. ಪುರಾತನವಾದ ಈ ಸಣ್ಣ ದೇವಾಲಯವನ್ನು ಇದೀಗ ಸುಂದರವಾಗಿ ನಿರ್ಮಿಸಿದ್ದು, ಈ ಸಂಬಂಧ ವಿಶೇಷ ಪೂಜಾ ಕಾರ್ಯಗಳು ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮತಾ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಪ್ಪಿಗೌಡ, ಜಗನ್ನಾಥ್, ಆನಂದ್ ಸೇರಿದಂತೆ ಗ್ರಾಮಸ್ಥರು ಇದ್ದರು.

ಮಹಿಳೆ ಚಿನ್ನದ ಸರ ಅಪಹರಣ
ಕೆಜಿಎಫ್:
ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ದುಷ್ಕರ್ಮಿಗಳು ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.  ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸುಗುಮಾರನ್ ಎಂಬುವರ ಪತ್ನಿ ದೀಪಾ ಅವರು ಪಾರಂಡಹಳ್ಳಿ ಗ್ರಾಮದ ಶ್ರೀ ಮಹಾವಿಷ್ಣು ಕಲ್ಯಾಣ ಮಂಟಪದಲ್ಲಿ ಮದುವೆಗೆ ಹೋಗಿದ್ದು ಮದುವೆ ಮುಗಿಸಿಕೊಂಡು ಹಿಂತಿರುಗಲು ತಮ್ಮ ಕಾರನ್ನು ಹತ್ತುತ್ತಿದ್ದಾಗ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ದೀಪಾ ಅವರ ಕತ್ತಿನಲ್ಲಿದ್ದ ಸುಮಾರು 2.4 ಲಕ್ಷ ರು. ಬೆಲೆಬಾಳುವ 80 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.  ಕೂಡಲೇ ದೀಪಾ ಕಿರುಚಿಕೊಂಡಿದ್ದು  ಮದುವೆಗೆ ಆಗಮಿಸಿದ್ದ ನಾಗರೀಕರು ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ.

ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ದಾಳಿ
ಚಿಂತಾಮಣಿ:
ಕಳ್ಳಭಟ್ಟಿ ತಯಾರಿ ಮಾಡುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ   ದಾಳಿ ನಡೆಸಿ ನೂರಾರು ಲೀಟರ್ ಕಳ್ಳಭಟ್ಟಿಯನ್ನು ನಾಶ ಪಡಿಸಿರುವ ಘಟನೆ ತಾಲೂಕಿನ ಕೋರ್ಲಪರ್ತಿ ಗ್ರಾಪಂ ವ್ಯಾಪ್ತಿಯ ನೇರಡಗುಟ್ಟಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕೋರ್ಲಪರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೇರಡಗುಟ್ಟಹಳ್ಳಿಯ ಹತ್ತಿರದ ನಿರ್ಜನ ಪ್ರದೇಶವೊಂದರಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಲಾಗುತ್ತಿತ್ತು. ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಹೆಚ್ಚುವರಿ ಪ್ರಭಾರ ಅಧಿಕಾರಿ ರಮೇಶ್‌ಬಾಬು, ನಿರೀಕ್ಷಕರಾದ ಚಂದ್ರಪ್ಪ, ಉಪನಿರೀಕ್ಷಕರಾದ ರಮಾಮಣಿ, ಬಸವರಾಜ್, ಗೋವಿಂದಪ್ಪ, ಸಿಬ್ಬಂದಿ ವರ್ಗ 100 ಲೀ. ಬೆಲ್ಲದ ಕೊಳೆ, 20 ಕೆಜಿ ಬಿಳಿ ಜಾಲಿ ಚಕ್ಕೆ, ಸಾಮಗ್ರಿ ನಾಶಪಡಿಸಿದ್ದಾರೆ.

ಮಾಲೂರಲ್ಲಿ ನಾಮಪತ್ರ ಸಲ್ಲಿಕೆಗೆ ತುಂಬಿದ ಅಭ್ಯರ್ಥಿಗಳು
ಮಾಲೂರು:
ಇಲ್ಲಿನ ಪುರಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳ ಮಹಾಪೂರವೇ ಶುಕ್ರವಾರ ಹರಿದು ಬಂದಿದ್ದು, ಪಟ್ಟಣದ 23 ವಾರ್ಡ್‌ಗಾಗಿ ಒಂದೇ ದಿನ ದಾಖಲೆಯ 82 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬಿಜೆಪಿಯ 39 ಮಂದಿ, ಕಾಂಗ್ರೆಸ್‌ನ 17 ಮಂದಿ, ಜೆಡಿಎಸ್‌ನ 14 ಮಂದಿ ತಮ್ಮ ಉಮೇದಾರಿಕೆಯನ್ನು ಸಲ್ಲಿಸಲಾಗಿದ್ದು, ಪಕ್ಷೇತರರಾಗಿ 12 ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕ ಕೃಷ್ಣಯ್ಯ ಶೆಟ್ಟಿ ಅವರೂಡನೆ ಬಂದ ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಡನೆ ಮಾರಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪುರಸಭೆಗೆ ಆಗಮಿಸಿ ತಮ್ಮ ಉಮೇದಾರಿಕೆ ಸಲ್ಲಿಸಿದರು. ಎಂ.ಪಿ. ವಿಜಯಕುಮಾರ್, ಸಿ.ಪಿ. ನಾಗರಾಜ್, ವೇಮನ, ರಾಮಮೂರ್ತಿ, ದೇವರಾಜ್, ಪುರಸಭೆ ಅಧ್ಯಕ್ಷೆ ಅಮುದಾ ವೇಣು ಸೇರಿದಂತೆ ಹಾಲಿ ಸದಸ್ಯರೆಲ್ಲರೂ ತಮ್ಮ ಉಮೇದಾರಿಕೆಯನ್ನು ಸಲ್ಲಿಸಿದರು. ಮುಖಂಡರಾದ ಪಿ. ವೆಂಕಟೇಶ್, ಬಿಜೆಪಿ ಅಧ್ಯಕ್ಷ ನಾರಾಯಣಗೌಡ, ಶಿವಣ್ಣ, ಎಸ್.ಎನ್. ರಮೇಶ್, ವೆಂಕಟೇಶ್ ಗೌಡ ಇದ್ದರು. ಜೆಡಿಎಸ್‌ನ ರಾಮಚಂದ್ರ, ಸತ್ಯನ್, ಟಿ. ಶ್ರೀನಿವಾಸ್, ಹಾಗೂ ಕಾಂಗ್ರೆಸ ನಿಂದ ಪುರಸಭೆ ಮಾಜಿ ಅಧ್ಯಕ್ಷ ಸಿ. ಲಕ್ಷಿನಾರಾಯಣ್, ಪ್ಲಾಸ್ಟಿಕ್ ನಿರ್ಮೂಲನ ಸಮಿತಿ ಮುನಿಸ್ವಾಮಿ ನಾಮಪತ್ರ ಸಲ್ಲಿಸಿದ ಪ್ರಮುಖರು.

ಆರೋಪಿಯಾದ್ರು, ಚುನಾವಣೆಗೂ ಸೈ!
ಚಿಂತಾಮಣಿ: 
ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರೂ, ಯುವಕನೊಬ್ಬ ಬೆಂಬಲಿಗರೊಂದಿಗೆ ಆಗಮಿಸಿ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕುತೂಹಲಕಾರಿ ಘಟನೆ ಶುಕ್ರವಾರ ನಡೆಯಿತು. ನಗರದ ಚೌಡರೆಡ್ಡಿಪಾಳ್ಯ ನಿವಾಸಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಲೀಲ್ ಎಂಬವರ ಮಗ ಮೊಹಮದ್ ಷಫಿಕ್ ನಾಮಪತ್ರ ಸಲ್ಲಿಸಿದವರು.  ಕಳೆದ ಹಲವು ದಿನಗಳ ಹಿಂದೆ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಇನ್ನೂ ಜೈಲಿನಲ್ಲಿ ಬಿಡುಗಡೆಗೊಳ್ಳದೆ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಷಫಿಕ್ ಬಂದಿಖಾನೆಯಿಂದ ಬಂದು ನೂರಾರು ಬೆಂಬಲಿಗರ ಜೊತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಖಾಸಗಿ ಕಾರಿನಲ್ಲಿ ಅವರನ್ನ ಕರೆತರಲಾಯಿತು. ಈ ಸಂದರ್ಭ ಆರೋಪಿ ಪರ ವಕೀಲ ವಿಜಯ ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

ಪ್ರಗತಿಗೆ ಶ್ರಮಿಸುವ ಅಭ್ಯರ್ಥಿಗೆ ಬೆಂಬಲ
ಕೋಲಾರ:
ಇಲ್ಲಿನ ಪ್ರತಿಷ್ಠಿತ ನಗರದ ಜಯನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮಾರ್ಚ್ 7 ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಬೆಂಬಲಿಸಲು ಜಯನಗರದ ಹಿರಿಯ ನಾಗರೀಕರ ವೇದಿಕೆ ನಿರ್ಧರಿಸಿದೆ. ನಗರದ ಸಪಲಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಗೋ.ರಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಚುನಾವಣೆ ವಿಚಾರವಾಗಿ ಚರ್ಚಿಸಲಾಯಿತು. ಹಿರಿಯರಾದ ಚಂದ್ರಣ್ಣ ಮಾತನಾಡಿ, ಜಯನಗರ ಬಡಾವಣೆಗೆ ಹೆಚ್ಚಿನ ಮೂಲ ಸೌಕರ್ಯಗಳು ಬೇಕಾಗಿದೆ, ನಗರಸಭಾ ಚುನಾವಣೆಗೆ ಯಾರು ಅಭ್ಯರ್ಥಿಗಳಾಗುತ್ತಾರೆಂಬುದನ್ನು ಫೆ.25ರಂದು ತಿಳಿದು  ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವವರನ್ನು ಗೆಲ್ಲಿಸುವುದಕ್ಕೆ ತೀರ್ಮಾನ ಮಾಡೋಣವೆಂದು ತಿಳಿಸಿದರು. ಸೂಕ್ತ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಸಲವಾಗಿ ಫೆ.28 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಜಯನಗರ ಬಡಾವಣೆಯ ಸಪಲಮ್ಮ ದೇವಸ್ಥಾನದ ಬಳಿ ಸೇರುವಂತೆ ವೇದಿಕೆಯ ಎಲ್ಲಾ ಹಿರಿಯ ಸದಸ್ಯರಿಗೆ ಆಹ್ವಾನ ನೀಡಲಾಯಿತು. ಮುಂದೆ ಜಯನಗರ ಬಡಾವಣೆಗೆ ಸೇವಾಮನೋಭಾವದಿಂದ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅವರಿಗೆ ಪ್ರೋತ್ಸಾಹ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಜಯನಗರದ 35ಕ್ಕೂ ಹೆಚ್ಚು ಹಿರಿಯ ನಾಗರೀಕ ಸದಸ್ಯರು ಹಾಜರಿದ್ದರು. ಹಿರಿಯ ನಾಗರೀಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ಪ್ರಮೋದ್ ಸ್ವಾಗತಿಸಿ, ಉಪಾಧ್ಯಕ್ಷ ಕೃಷ್ಣಮೂರ್ತಿ  ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.