ದೊಡ್ಡದ್ಯಾವರ ಮಹೋತ್ಸವ ಇಂದು ಶುರು
ಕೋಲಾರ: ಮೀಸೆ, ಮಜ್ಜಿಗೆ, ಸಕುಲ ಹಾಗೂ ಅರಿಶಿಣ ಗೋತ್ರಗಳಿಗೆ ಸೇರಿದ ಹಾಲು ಮತದವರಲ್ಲಿ ಸಾಮರಸ್ಯ ಮೂಡಿಸಲು ಅನಾದಿಕಾಲದಿಂದ ಆಚರಣೆಯಲ್ಲಿರುವ ದೊಡ್ಡ ದ್ಯಾವರ ಮಹೋತ್ಸವ ಫೆ.21 ರಿಂದ 23ರವರೆಗೆ ಕೋಲಾರ ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೂರು ದಿನಗಳ ಕಾರ್ಯಕ್ರಮ ಯಶಸ್ವಿಗೆ ಕುಲಸ್ಥರು ಸಕಲ ಸಿದ್ಧತೆ ನಡೆಸಿದ್ದಾರೆ.
ಪ್ರತಿ ಹತ್ತು ಓಮ್ಮೆ ನಡೆಯುವ ಈ ಮಹೋತ್ಸವ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತದೆ, ಬೀರೇಶ್ವರ, ಬತ್ತೇಶ್ವರ, ಸಿದ್ದೇಶ್ವರ ಹೀಗೆ ಹಲವು ಹೆಸರಿನಲ್ಲಿ ಕರೆಯಲ್ಪಡುವ ಈಶ್ವರನ ಹೆಸರನ್ನು ಹೊಂದಿರುವ ಹಾಲು ಮತಕ್ಕೆ ಸೇರಿದ ಸುಮಾರು 500 ಕುಟುಂಬದವರು ತಮ್ಮಲ್ಲಿನ ಮನಸ್ತಾಪ, ದ್ವೇಷ, ವೈಮನಸ್ಸುಗಳನ್ನು ಬದಿಗಿಟ್ಟು ಮೂರು ದಿನಗಳ ಕಾಲ ನಡೆಯುವ ದೊಡ್ಡ ದ್ಯಾವರ ಮಹೋತ್ವದಲ್ಲಿ ಭಾಗವಹಿಸಿ ಅನ್ಯೋನತೆ ಸಾರುವುದು ವಿಶೇಷ.
ಕಾರ್ಯಕ್ರಮಕ್ಕೆ ಹಾಲು ಮತಸ್ಥರು ಮಾತ್ರವಲ್ಲದೆ ವಿವಿಧ ಕಡೆಗಳಿಂದ ಸುಮಾರು 25 ಸಾವಿರ ಜನರು ಸೇರಲಿದ್ದು ಭಕ್ತರಿಗೆ ಬ್ಯಾಲಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ವಸತಿ, ಪ್ರಸಾದ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಈ ಹಬ್ಬದ ಮತ್ತೊಂದು ವಿಶೇಷವೆಂದರೆ ಹಿರಿಯರ ತಲೆಯ ಮೇಲೆ ದೀಪ ಅಂದರೆ ದೇವರನ್ನು ಇಟ್ಟು ಕುರಸ್ಥರು ನಮಸ್ಕಾರ ಮಾಡಿ ಐಕ್ಯತೆಯನ್ನು ಪ್ರದರ್ಶಿಸುತ್ತಾರೆ.
ಫೆ.21ರಂದು ಬೆಳಿಗ್ಗೆ 11 ಗಂಟೆಗೆ ಶ್ರೀಬ್ಯಾಲಹಳ್ಳಿ ಬೆಳೆರಾಯಸ್ವಾಮಿ ದೇವಾಲಯದಲ್ಲಿ ಕಳಸ ಸ್ಥಾಪನೆ, ದೇವರುಗಳ ಹೊಳೆ ಪೂಜೆ, ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ.22 ರಂದು ಕುಲಸ್ಥರ ಸಮಾವೇಶ, ಎಲ್ಲಾ ಗೋತ್ರಗಳ ಹಾಲು ಮತಸ್ಥ ಹಿರಿಯರು ಸೇರುವ ಕೂಟವ ಸಭೆ ಹಾಗೂ ದ್ಯಾವರ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ.
ಕುಲಸ್ಥರು ಇರುವ ಊರುಗಳಿಗೆ ತೆರಳಿ ದ್ಯಾವರ ಬಗ್ಗೆ ತಿಳಿಸಲಾಗುತ್ತದೆ, ಪೆಟ್ಟಿಗೆಯನ್ನು ಹೊತ್ತ ಎತ್ತಿಗೆ ನವ ವಧುವಿನಂತೆ ಸಿಂಗಾರ ಮಾಡಲಾಗಿರುತ್ತದೆ, ಇದಕ್ಕೆ ಅಗ್ರಪೂಜೆಯನ್ನು ಸಹ ನೆರವೇರಿಸಲಾಗುತ್ತದೆ. ಭಂಡಾರ ಪೆಟ್ಟಿಗೆ ಊರುಗಳಿಗೆ ಹೋಗುವ ಮುನ್ನ ಹೆಣ್ಣು ಮಕ್ಕಳು ಕಲಶ ಹೊತ್ತು ದ್ಯಾವರದ ಎತ್ತಿಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ಊರುಗಳಿಗೆ ಕಳುಹಿಸಿಕೊಡುವುದು ವಾಡಿಕೆ.
ಕೋಲುಕಾರರ ಮೂಲಕ ದ್ಯಾವರ ಕುರಿತು ಸಮುದಾಯಕ್ಕೆ ಮಾಹಿತಿ ನೀಡುವುದು ಅನುಚಾನವಾಗಿ ನಡೆದುಕೊಂಡು ಬಂದಿದೆ. ಇದೇ ದಿನ ಬ್ಯಾಲಹಳ್ಳಿ ದೊಡ್ಡ ದ್ಯಾವರ ದೀಪಾರಾಧನೆ ನಡೆಯಲಿದ್ದು ಆಲಂಬಗಿರಿ ಗುರುಮಠದ ಶ್ರೀಗುರು ರೇವಣ್ಣಾರಾಧ್ಯರವರ ಸಾನಿಧ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಹೊಳೆಯಾಡುವ ಅಂದರೆ ಸ್ನಾನ ಮಾಡುವ ಹಾಗೂ ಬೆಳಿಗ್ಗೆ 9 ಗಂಟೆಗೆ ದೇವರ ಮೆರವಣಿಗೆ ಹಾಗೂ ಸಂಜೆ 5 ಗಂಟೆಗೆ ಕುಲಸ್ಥರ ಸಮಾವೇಶ ನಡೆಯಲಿದ್ದು, ಭಕ್ತರನ್ನು ರಂಜಿಸಲು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ.
ಫೆ.23 ರಂದು ಬೆಳಿಗ್ಗೆ ನಾಗದೇವರಿಗೆ ತನಿ ಹೊಯ್ಯುವ ಹಾಗೂ ದೇವರಿಗೆ ನವವಸ್ತ್ರ ಇಡುವ ಕಾರ್ಯಕ್ರಮ, ಪೂಜಾರರ ತಲೆ ಮೇಲೆ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಹಾಗೂ ದೇವರಿಗೆ ಬೆಳಿಗ್ಗೆ 11 ಗಂಟೆಗೆ ಜ್ಯೋತಿ ಬೆಳಗಿಸುವುದು ಆದ ನಂತರ ಸಂಜೆ ದೀಪಾರಾಧನೆ ಕಂಬಿ ದೀಪ ಹೊರುವ ಕಾರ್ಯಕ್ರಮವಿರುತ್ತದೆ.
ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ವಿಧಾನ ಪರಿಷತ್ಸ್ದಸ್ಯ ಬಿ.ಎಸ್.ಸುರೇಶ್ಬೈರತಿ, ಶಾಸಕ ವೆಂಕಟಶಿವಾರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಿ.ಎಸ್. ಅಶ್ವಥ್ ಅವರನ್ನು ಆಹ್ವಾನಿಸಲಾಗಿದೆ.
ದೊಡ್ಡ ದ್ಯಾವರ ಮಹೋತ್ಸವದ ಬಗ್ಗೆ ಬುಧವಾರ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಾಲುಮತದ ಮುಖಂಡರು ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಚಿಕ್ಕಹನುಮಪ್ಪ, ಮಾಜಿ ಕೆಯುಡಿಎ ಅಧ್ಯಕ್ಷ ಡಿ.ಎಲ್.ಚಂದ್ರಶೇಖರ್ ಹಾಗೂ ಕಾರ್ಯಕ್ರಮದ ಮೇಲ್ವಿಚಾರಕ ಅನಂತಪ್ಪ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

