ಹಳೇ ಮೀಸಲು, ಹೊಸ ಕಸರತ್ತು...
ಬಂಗಾರಪೇಟೆ: ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದೇ ಭಾವಿಸಿರುವ ಪುರಸಭೆ ಚುನಾವಣೆ ಎಂಬ ಮಿನಿ ಮಹಾಸಮರ ರಾಜಕೀಯ ಪಕ್ಷಗಳಿಗೆ ಸಧ್ಯಕ್ಕೆ ಬೇಡಬಾಗಿದ್ದರೂ ಅನಿವಾರ್ಯವಾಗಿ ಎದುರಿಸಲು ಸಜ್ಜಾಗುತ್ತಿದೆ.
2007ರ ಮೀಸಲಾತಿಯಂತೆಯೇ ಈ ಬಾರಿಯ ಚುನಾವಣೆ ಎದುರಿಸಲು ಚುನಾವಣೆ ಆಯೋಗ ನಿಗದಿಪಡಿಸಿರುವುದು ಕೆಲವು ಹೊಸ ಆಕಾಂಕ್ಷಿಗಳಿಗೆ ತನ್ನೀರೆರಚಿದೆ. ಅಲ್ಪಾವಧಿಯಲ್ಲಿ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಚುನಾವಣೆ ಎದುರಿಸುಲು ಮೂರು ಪ್ರಮುಖ ಪಕ್ಷಗಳು ತಯಾಗುತ್ತಿವೆ.
ಇಲ್ಲಿನ ಪುರಸಭೆ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ದಶಕಗಳಿಂದ ಕಾಂಗ್ರೆಸ್ ಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಪ್ರಯತ್ನ ಮಾಡುತ್ತಲೆ ಇವೆ. ಆದರೂ ಫಲಿತಾಂಶ ಮಾತ್ರ ಶೂನ್ಯ. ಈ ಬಾರಿ ಹೇಗಾದರೂ ಮಾಡಿ ಕೈ ಕೋಟೆಗೆ ನುಗ್ಗಲು ಬಿಜೆಪಿ ಜೊತೆ ಜೆಡಿಎಸ್ ಸಹ ಮುಂದಾಗಿದೆ.
ಪಟ್ಟಣದಲ್ಲಿ ಜೆಡಿಎಸ್ ಆರಕ್ಕೇರದೆ ಮೂರಕ್ಕೀಳಿಯದ ಸ್ಥಿತಿಯಲ್ಲಿತ್ತು. ಈಗ ರಾಮಚಂದ್ರ ಹಾಗೂ ಮಾಜಿ ಶಾಸಕ ವೆಂಕಟಮುನಿಯಪ್ಪ ಪಕ್ಷಕ್ಕೆ ಆಗಮನದಿಂದಾಗಿ ಕಾರ್ಯಕರ್ತರಿಗೆ ಇದ್ದ ಮುಖಂಡರ ಕೊರತೆ ನೀಗಿಸಿ ಆನೆ ಬಲಬಂದಿದೆ. ಇಬ್ಬರು ಮುಖಂಡರು ಒಟ್ಟಾಗಿ ಭಿನ್ನಮತವಿಲ್ಲದೆ ಚುನಾವಣೆಯನ್ನು ಎದುರಿಸಿ ಪಕ್ಷವನ್ನು ಪ್ರಥಮ ಬಾರಿ ಪುರಸಭೆಯಲ್ಲಿ ಬಾವುಟ ಹಾರಿಸಲು ಪಣತೊಟ್ಟಿದ್ದಾರೆ. ಇನ್ನು ಬಿಜೆಪಿ ಕಳೆದ ಬಾರಿ 7 ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಸಮನ್ವಯ ಕೊರತೆಯಿರುವುದರಿಂದ ಯಾವ ರೀತಿಯಲ್ಲಿ ಚುನಾವಣೆ ಎದುರಿಸಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.
ಬಿಜೆಪಿ ಶಾಸಕರಿದ್ದರೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದೆ ಮತ್ತು ಅವರ ಕಷ್ಟ-ಸುಖಗಳಿಗೆ ಸ್ವಂದಿಸುವುದಿಲ್ಲ ಎಂಬ ಆರೋಪ ಇರುವುದು ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ. ಬಿಜೆಪಿ ಸರ್ಕಾರ ಪಟ್ಟಣ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡಿದೆ. ಈ ವಿಷಯವನ್ನೇ ಅವರು ಚುನಾವಣೆ ಅಸ್ತ್ರವಾಗಿ ಬಳಸಿ ಜನರು ಮುಂದೆ ಹೋಗಲು ತಯಾರಿ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಈ ಬಾರಿಯೂ ಸಹ ಪುರಸಭೆಯಲ್ಲಿ ತನ್ನ ಪರಂಪರೆ ಮುಂದುವರಿಸಲು ಸಕಲ ಸಿದ್ಧತೆಯಲ್ಲಿ ನಿರತವಾಗಿದೆ. ಕಳೆದ ಒಂದೂವರೆ ವರ್ಷದಿಂದ ಮುಖಂಡ ಎಸ್.ಎನ್. ನಾರಾಯಣಸ್ವಾಮಿ ನಾಗರಿಕರಿಗೆ ಕುಡಿಯುವ ನೀರು ಸೇರಿದಂತೆ ಹಲವು ಸಮಾಜ ಸೇವೆ ಮಾಡುತ್ತಿರುವುದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳೇ ಕಾಂಗ್ರೆಸ್ ಪ್ರಚಾರದ ಅಸ್ತ್ರವಾಗಿದೆ. ಈ ಬಾರಿ ಹಲವು ಹೊಸ ಮುಖಗಳು ಚುನಾವಣೆಗೆ ನಿಲ್ಲಲು 3 ತಿಂಗಳಿಂದ ತಯಾರಿ ನಡೆಸಿದ್ದರು. ಆದರೆ, ಅವರ ಲೆಕ್ಕಾಚಾರವನ್ನು ಚುನಾವಣಾ ಆಯೋಗವು ತಲೆಕೆಳಗಾಗಿಸಿದೆ. 2007ರ ಮೀಸಲು ಪ್ರಕಾರವೇ ಮತ್ತೆ ಎದುರಿಸಲು ಸೂಚಿಸಿರುವುದು ಹಾಲಿ ಸದಸ್ಯರಿಗೆ ಅನುಕೂಲವಾಗಿದೆ. ಹಾಗಿದ್ದರೂ ಯಾವೊಬ್ಬ ಸದಸ್ಯರು ವಾರ್ಡುಗಳಲ್ಲಿ ಕೆಲಸ ಮಾಡದಿರುವುದರಿಂದ ಮರು ಆಯ್ಕೆಗೆ ಅಡ್ಡಿಯಾಗಿದೆ.
3 ಪಕ್ಷಗಳಲ್ಲಿಯೂ ಸೂಕ್ತ ಹಾಗೂ ಗೆಲ್ಲುವ ಕುದುರೆಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹಾಲಿ ಸದಸ್ಯರು ಮರು ಆಯ್ಕೆಗೆ ಬಯಸಿದ್ದಾರೆ. ಆದರೆ, ಅವರಿಗೆ ಯುವಕರ ಪಡೆ ಸೆಡ್ಡು ಹೊಡೆಯಲು ಸದ್ದಿಲ್ಲದೆ ತಯಾರಾಗುತ್ತಿರುವುದು ರಾಜಕೀಯ ಪಕ್ಷಗಳಿಗೆ ತಲೆಬಿಸಿ ತಂದಿದೆ. ಈ ಚುನಾವಣೆಯಲ್ಲಿ ಯಾವ ಪಕ್ಷ ಜಯ ಗಳಿಸುವುದೋ ಆ ಪಕ್ಷಕ್ಕೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಅನುಕೂಲ ಎಂದು ಮೂರು ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯಾಗಿ ಮಾರ್ಪಡಿಸಿದೆ.
-ಕೆ. ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

