ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಬಾಗೇಪಲ್ಲಿ: ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಪಂ ವ್ಯಾಪ್ತಿಯ ಕಂಬಾಲಪಲ್ಲಿ ಕ್ರಾಸ್ನಿಂದ ಗಿರಿಯಪ್ಪಲ್ಲಿ, ಮೂಗಿಚಿನ್ನೇಪಲ್ಲಿ, ಬುಟ್ಟಿವಾರಿಪಲ್ಲಿ ಮತ್ತಿತರೆ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಪಿಎಂ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪ್ರತಿಭಟನಾಕಾರರು ರಸ್ತೆಗೆ ಕಲ್ಲುಗಳನ್ನು ಅಡ್ಡ ಇಟ್ಟು ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಸುಮಾರು 3 ಗಂಟೆಗೂ ಹೆಚ್ಚಿನ ಕಾಲ ನಡೆದ ರಸ್ತೆ ತಡೆಯಿಂದಾಗಿ ಬಾಗೇಪಲ್ಲಿ-ಚಿಂತಾಮಣಿ ರಸ್ತೆಯಲ್ಲಿ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಇದೇ ಸಂದರ್ಭದಲ್ಲಿ ರಸ್ತೆ ತಡೆಯನ್ನು ತೆರವುಗೊಳಿಸುವ ವಿಚಾರದಲ್ಲಿ ಸ್ಥಳೀಯ ಎಸ್ಸೈ ಮುನಿರೆಡ್ಡಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿಕ ಚಕಮಕಿ ನಡೆಯಿತು. ಒಂದು ಹಂತದಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಪಿಎಸೈ ಎಚ್ಚರಿಕೆಯನ್ನು ನೀಡಿದರೆ, ನೀವೇನು ನೋಡಿಕೊಳ್ಳುವುದು ನಾವೂ ನೋಡಿಕೊಳ್ಳುತ್ತೇವೆ ಎಂದು ಪ್ರತ್ಯುತ್ತರ ಬಂತು. ಇದರಿಂದ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಕೈ ಮಿಲಾಯಿಸುವ ಹಂತಕ್ಕೂ ಬಂದಿತ್ತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ಮಂಜುನಾಥರೆಡ್ಡಿ, ಕಾನಗಮಾಕಲಪಲ್ಲಿ ಪಂಚಾಯ್ತಿಯ ವ್ಯಾಪ್ತಿಯಲ್ಲಿನ ಕಂಬಾಲಪಲ್ಲಿ ಕ್ರಾಸ್ನಿಂದ ಗಿರಿಯ್ಯಪ್ಪಲ್ಲಿ ವಯಾ ಮೂಗಿಚಿನ್ನೇಪಲ್ಲಿ, ಬುಟ್ಟಿವಾರಿಪಲ್ಲಿ, ಕಾನಗಮಾಕಲಪಲ್ಲಿ ಮಾರ್ಗದಲ್ಲಿ ಈ ಹಿಂದೆ ಚಿಕ್ಕಬಳ್ಳಾಪುರ ಡಿಪೋದಿಂದ 3 ಬಸ್ಗಳು ಮತ್ತು ಬಾಗೇಪಲ್ಲಿ ಡಿಪೋದಿಂದ 1 ಬಸ್ ಸಂಚರಿಸುತ್ತಿತ್ತು. ಆದರೆ 3 ವರ್ಷಗಳಿಂದ ಯಾವುದೇ ಬಸ್ಸು ಬರುತ್ತಿಲ್ಲವಾಗಿದೆ. ಈ ಮಾರ್ಗದಲ್ಲಿ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳ ರೈತರು ಸೇರಿದಂತೆ ಪ್ರತಿನಿತ್ಯ ನೂರಾರು ಮಂದಿ ಪ್ರಯಾಣ ಮಾಡುತ್ತಿದ್ದು ತಾಲೂಕು ಕೇಂದ್ರದಿಂದ ಕೇವಲ 9 ಕಿಮೀ ದೂರದಲ್ಲಿದ್ದರೂ ಬಸ್ ಸೌಲಭ್ಯವಿಲ್ಲದಿರುವುದರಿಂದ ಪ್ರತಿನಿತ್ಯ ರೈತರು, ವಿದ್ಯಾರ್ಥಿನಿಯರು, ಅಂಗವಿಕಲರು, ರೋಗಿಗಳು ನಡೆದುಕೊಂಡೇ ಬರುವ ಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಲಿಖಿತವಾಗಿ ತಿಳಿಸಿದ್ದರೂ ಜನಸಾಮಾನ್ಯರ ವಿರೋಧಿಸಿ ಸಾರಿಗೆ ಅಧಿಕಾರಿಗಳು 3 ರಿಂದ 4 ವರ್ಷಗಳಿಂದ ಈ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೇವಲ 9 ಕಿ.ಮೀ. ದೂರದ ಹತ್ತಾರು ಹಳ್ಳಿಗಳಿಗೆ ಬಸ್ ಸೌಲಭ್ಯ ನೀಡಲು ಕೈಲಾಗದ ಅಧಿಕಾರಿಗಳು 500 ಕಿ.ಮೀ. ದೂರದ ಚೆನೈಗೆ ಮತ್ತು 250 ಕಿ.ಮೀ. ತಿರುಪತಿಗೆ ಬಸ್ ಸೌಲಭ್ಯ ನೀಡಲು ಹಾತೊರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಸಾರಿಗೆ ವ್ಯವಸ್ಥಾಪಕರಾದ ರಾಜಶೇಖರ ಭೇಟಿ ನೀಡಿ ಸಾರಿಗೆ ವ್ಯವಸ್ಥೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಅಶ್ವತ್ಥರೆಡ್ಡಿ, ಕೆ.ವಿ.ಪ್ರಭಾಕರರೆಡ್ಡಿ, ಜಿ.ವಿ.ನಾರಾಯಣಸ್ವಾಮಿ, ಸೀನಪ್ಪ, ನಾರಾಯಣಪ್ಪ, ಎನ್.ನಾರಾಯಣಸ್ವಾಮಿ, ಸೋಲಮಾಕಲಪಲ್ಲಿ ಮದ್ದಿರೆಡ್ಡಿ, ಜಯಚಂದ್ರ, ವೆಂಕಟರೋಣಪ್ಪ, ಆದಿನಾರಾಯಣಪ್ಪ, ಎಸ್.ಎಫ್.ಐ., ಬಿ.ವಿ.ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

