ಕೋಲಾರ

ವಿವಿಧ ಕಾಮಗಾರಿಗೆ ವರ್ತೂರು ಚಾಲನೆ

Published On :

ಕೋಲಾರ: ಜಿಲ್ಲಾ ಕೇಂದ್ರವಾದ ಕೋಲಾರದ ಮಿನಿ ಹೊಟೇಲ್ ವೃತ್ತದಿಂದ ಬೈರೇಗೌಡ ಇಂಜಿನಿಯರಿಂಗ್ ಕಾಲೇಜು ಮೂಲಕ ಹಾದು ಶ್ರೀನಿವಾಸಪುರ, ಗೌನಿಪಲ್ಲಿವರೆಗೆ, ಮಾಲೂರು ತಾಲೂಕಿನ ಕೊತ್ತಪಲ್ಲಿಯಿಂದ ಮಾಸ್ತಿಯವರೆಗೆ 27 ಕೋಟಿ ರು. ವೆಚ್ಚದಲ್ಲಿ ಡಾಂಬರು ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಪ್ರಕಟಿಸಿದರು.
ನಗರದ ಮಿನಿ ಹೊಟೇಲ್ ವೃತ್ತದಲ್ಲಿ ಬುಧವಾರ ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಯನಗರದ ಮುಖ್ಯರಸ್ತೆಯಿಂದ ಹಾದು ಹೋಗುವ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ರಸ್ತೆ ಅಭಿವೃದ್ಧಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಹಣ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗಿದೆ ಎಂದರು. ಶ್ರೀನಿವಾಸಪುರ ಮುಖ್ಯರಸ್ತೆ ಸೇರಿದಂತೆ ತೋರದೇವಂಡಹಳ್ಳಿ ಮೂಲಕ ಶ್ರೀನಿವಾಸಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು, ಅದಕ್ಕೂ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಾಲೂರು ತಾಲೂಕಿನ ಕೊತ್ತಪಲ್ಲಿಯಿಂದ ಮಾಸ್ತಿ ರಸ್ತೆಯೂ ಇದೇ ಅನುದಾನದಲ್ಲಿ ಅಭಿವೃದ್ಧಿಯಾಗಲಿದೆ ಎಂದು ವಿವರಿಸಿದರು. ಈ ಕಾಮಗಾರಿಯನ್ನು ಬೆಂಗಳೂರು ಮೂಲದ ಎಂ. ವೆಂಕಟರಾಮರೆಡ್ಡಿ ಎಂಬುವರು ಗುತ್ತಿಗೆ ಪಡೆದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವೆಂದು ತಿಳಿಸಿದರು. ಶ್ರೀನಿವಾಸಪುರದ 10.10 ಕಿ.ಮೀ, ಕೋಲಾರ 9.96 ಕಿ. ಮೀ, ಮಾಲೂರು ತಾಲೂಕಿನಲ್ಲಿ 23.46 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಈ ಅನುದಾನದ ಸದ್ಬಳಕೆ ಆಗಲಿ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ರಘುರಾಂ, ಜಿಲ್ಲಾ ವಕ್ಫ್‌ಬೋರ್ಡ್ ಮಾಜಿ ಅಧ್ಯಕ್ಷ ಸಾಬೀರ್‌ಪಾಷ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.