ಒಂದೇ ಬೇಡಿಕೆಗೆ ಪ್ರತ್ಯೇಕ ಹೋರಾಟ
ಕೋಲಾರ: ಶಿಕ್ಷಕರ, ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸಬೇಕು ಹಾಗೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಮನೆ ಬಾಡಿಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಶಿಕ್ಷಕರ ಸಂಘಟನೆಯ ಎರಡು ಗುಂಪುಗಳು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತ್ಯೇಕ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯನವರಿಗೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರ ಹಾಗೂ ನೆರೆಹೊರೆಯ ರಾಜ್ಯ ಸರ್ಕಾರಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕದ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳ ಶಿಕ್ಷಕರು, ಪದವಿ ಪೂರ್ವ ಉಪನ್ಯಾಸಕರು ಅತ್ಯಂತ ಕಡಿಮೆ ಮೂಲ ವೇತನ ಪಡೆಯುತ್ತಿದ್ದಾರೆ. ಈ ವೇತನ ತಾರತಮ್ಯ ನಿವಾರಿಸುವಂತೆ, ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲವೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ದೂರಿದ್ದಾರೆ.
ಸರ್ಕಾರ ಆಯವ್ಯಯ ಮಂಡನೆ ಸಂದರ್ಭದಲ್ಲಿ ಶಿಕ್ಷಕರ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮತ್ತು ಮೂಲ ವೇತನದಲ್ಲಿ ವಿಶೇಷ ವೇತನ ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪ ಮಾಡದೇ ಇರುವುದು ಶಿಕ್ಷಕ ಹಾಗೂ ಉಪನ್ಯಾಸಕರ ಸಮುದಾಯಕ್ಕೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಪ್ರಕಾರ 6ನೇ ವೇತನ ಸಮಿತಿಯ ಶಿಫಾರಸ್ಸುಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮನೆ ಬಾಡಿಗೆ ಭತ್ಯೆ ಮತ್ತು ನಗರ ಭತ್ಯೆಗಳನ್ನು 2001ರ ಜನಗಣತಿ ಆಧಾರದ ಮೇಲೆ ಪುನರ್ ವರ್ಗೀಕರಿಸಿ 2012 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿತ್ತು.ಆದರೆ, ಈ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಕೇವಲ ಬೆಂಗಳೂರು ನಗರಕ್ಕೆ ಈಗಿರುವ ಮನೆ ಬಾಡಿಗೆಯನ್ನು ಶೇ. 25ರಿಂದ 30 ಕ್ಕೆ ಹೆಚ್ಚಿಸಲಾಗಿದ್ದು, ಉಳಿದ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶ ನೌಕರರಿಗೆ ಅನ್ಯಾಯವಾಗಿದೆ ಎಂದು ಆರೋಪಿದ್ದಾರೆ.ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಾಂಕೇತಿಕವಾಗಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣ ಸಚಿವರು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರು ಕ್ರಿಯಾ ಸಮಿತಿ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಧರಣಿಯಲ್ಲಿ ಸಮಿತಿಯ ಜಿಲ್ಲಾ ಶಾಖೆ ಅಧ್ಯಕ್ಷ ಆರ್.ಅನಿಲಲ್ಕುಮಾರ್, ಕಾರ್ಯಾಧ್ಯಕ್ಷ ಟಿ.ಕೆ. ನಟರಾಜ್, ಖಜಾಂಚಿ ಜೆ.ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಮಚಂದ್ರ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪರವಾಗಿ ಅಮರನಾರಾಯಣ, ಅಸೀಫ್ ಉಲ್ಲಾಖಾನ್, ಚಂದ್ರಪ್ಪ, ಉಪನ್ಯಾಸಕರ ಸಂಘದ ಪರವಾಗಿ ನಾಗನಂದ, ಸರ್ಕಾರಿ ಕಿರಿಯ ಕಾಲೇಜಿನ ಪ್ರಾಂಶುವಾಲ ವೆಂಕಟಸ್ವಾಮಿ, ಉಪನ್ಯಾಸಕ ಜೆ.ಜಿ.ನಾಗರಾಜ್ ಇನ್ನಿತರರು ಭಾಗವಹಿಸಿದ್ದರು. ಮತ್ತೊಂದು ಪ್ರತಿಭಟನೆಯ ನೇತೃತ್ವವನ್ನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ,ಅಪ್ಪಾಜಿಗೌಡ, ನಾಗರಾಜ್ ವಹಿಸಿದ್ದರು. ಈ ಗುಂಪಿನ ಶಿಕ್ಷಕರು ಎಸಿ ಕಚೇರಿಯಿಂದ ಡಿಸಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

