ಲಾರಿಗೆ ಬಸ್ ಡಿಕ್ಕಿ: 15 ಜನರಿಗೆ ಗಾಯ
ಚಿಕ್ಕಬಳ್ಳಾಪುರ: ಮಂತ್ರಾಲಯದಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಕೆಟ್ಟು ನಿಂತಿದ್ದ ಲಾರಿಗೆ (ಸಿಮೆಂಟ್ ಟ್ಯಾಂಕರ್) ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಚೊಕ್ಕಹಳ್ಳಿ ಬಳಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಚೊಕ್ಕಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7 ರ ರಸ್ತೆಯಲ್ಲಿ ಆಂಧ್ರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಟಿಪ್ಪರ್ ಕೆಟ್ಟು ನಿಂತು ಹೋಗಿದ್ದು ವಾಹನಗಳು ವೇಗವಾಗಿ ಸಂಚರಿಸುವ ರಸ್ತೆಯಲ್ಲಿ ಆ ಲಾರಿಯ ಇಂಡಿಕೇಟರ್ ಹಾಕದೇ ಇರುವುದು ಘಟನೆ ಸಂಭವಿಸಲು ಪ್ರಮುಖ ಕಾರಣ ಎನ್ನಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಬೆಳಿಗ್ಗೆ ಕತ್ತಲಲ್ಲಿ ಲಾರಿ ಕೆಟ್ಟು ನಿಂತಿರುವುದು ಕಾಣಿಸಿಲ್ಲ. ಇದರಿಂದ ಲಾರಿಗೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದ್ದು ಬಸ್ ಚಾಲಕ ಜೋಷಿ, ನಿರ್ವಾಹಕ ಮಂಜುನಾಥ್, ಶ್ಯಾಮಲ, ರಾಧಾ, ವಿಜಯಲಕ್ಷ್ಮೀ, ಸತೀಶ್ಕುಮಾರ್, ಸುಧಾ, ವಿರೇಶ್, ನಾರಾಯಣಚಾರ್, ಸಂತೋಷ್, ರೋನಾಲ್ಟ್, ರೋಹಿಣಿ ರೋನಾಲ್ಟ್, ಮಂಜುನಾಥ್, ಸತೀಶ್ ಕುಲಕರ್ಣಿ, ನಿವೃತ್ತ ಉಪ ವಿಭಾಗಾಧಿಕಾರಿ ಎಸ್.ಎನ್. ಜೋಷಿ ಗಾಯಗೊಂಡಿದ್ದಾರೆ. ಇವರಲ್ಲಿ ಬಸ್ ಚಾಲಕ ಜೋಷಿಯವರ ಸ್ಥಿತಿ ಗಂಭೀರವಾಗಿದೆ. ತಲೆಗೆ ಪೆಟ್ಟು ಬಿದ್ದಿದ್ದು ಕಾಲು ಮುರಿದಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ, ತುರ್ತು ಚಿಕಿತ್ಸೆ ಕೊಡಿಸಿದರು.
ಚಿಕಿತ್ಸೆಗೆ ಪರದಾಟ: ಸರ್ಕಾರಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲು ಪರದಾಡಬೇಕಾಯಿತು. ಅನಿವಾರ್ಯವಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪರಿಹಾರ ಕಾರ್ಯವನ್ನು ಕೈಗೊಂಡು, ಪ್ರಯಾಣಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

