ಯರಗೋಳ್ ಯೋಜನೆಗೆ ಗ್ರಹಣ?
ಕೆ.ರಮೇಶ್
ಬಂಗಾರಪೇಟೆ: ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ನಂತರ ನಾಲ್ಕು ತಾಲೂಕಿನ ಜನರ ಬಹುನಿರೀಕ್ಷಿತ ಯೋಜನೆಯಾದ ಯರಗೋಳ್ ಯೋಜನೆ ಅಣೆಕಟ್ಟು ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ನೀಡಿದ್ದರು.
ಆದರೆ, ಜನವರಿ ಮುಗಿದು ಫೆಬ್ರವರಿ ಬಂದರೂ ಅಣೆಕಟ್ಟು ನಿರ್ಮಾಣ ಬಗ್ಗೆ ಚಕಾರವಿಲ್ಲದಿರುವುದು ಮತ್ತೆ ಜನರಲ್ಲಿ ನಿರಾಶೆ ಮೂಡಿಸಿದೆ.
ರಾಜಕೀಯ: ನಿಗದಿತ ಸಮಯಕ್ಕೆ ನೀರಾವರಿ ಕಾಮಗಾರಿ ಆರಂಭವಾಗಿದ್ದರೆ ಈ ವೇಳೆಗೆ ಜಿಲ್ಲೆಯ ನಾಲ್ಕು ತಾಲೂಕಿನ ಜನತೆಯ ಬಾಯಾರಿಕೆ ನೀಗುತ್ತಿತ್ತು. ಆದರೆ, ಕಳೆದ ಏಳು ವರ್ಷಗಳಿಂದ ಯೋಜನೆ ರಾಜಕೀಯ ಸುಳಿಗೆ ಸಿಲುಕಿ ನಲುಗುತ್ತಿದೆ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಯರಗೋಳ್ ಯೋಜನೆಗೆ ಮರು ಜೀವ ನೀಡುವ ಕುರಿತು ಹಾಗೂ ಜಿಲ್ಲೆಗೆ ಶಾಶ್ವತ ನೀರಾವರಿ ಅನುಕೂಲ ಒದಗಿಸುವ ಬಗ್ಗೆ ಮಮಕಾರ ಬಂದಿದೆ.
ಚುನಾವಣೆ ಗಿಮಿಕ್: ನಮ್ಮ ಪಕ್ಷ ಅಧಿಕಾರಕ್ಕೆ ತಂದರೆ ಶಾಶ್ವತ ನೀರಾವರಿ ಖಚಿತ ಎಂಬ ವಾಗ್ದಾನ ಎಲ್ಲಾ ರಾಜಕೀಯ ಪಕ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಇದು ಬರೀ ಚುನಾವಣೆ ಗಿಮಿಕ್ ಎಂಬುದು ಮತದಾರರು ಚೆನ್ನಾಗಿ ಅರಿತಿದ್ದಾರೆ. ಇಷ್ಟು ವರ್ಷಗಳ ಕಾಲವಿಲ್ಲದ ಶಾಶ್ವತ ನೀರಾವರಿ ಮಾತು ಈಗ ನೆನಪಾಯಿತೇ ಎಂದು ಟೀಕೆಗೂ ಕಾರಣವಾಗಿದೆ.
ಅವ್ಯವಹಾರ ವಾಸನೆ: ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಹತ್ವಾಕಾಂಕ್ಷೆ ಯೋಜನೆಯ 240 ಕೋಟಿ ವೆಚ್ಚದ ಯರಗೋಳ್ ಯೋಜನೆಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಗಲ್ಲು ಹಾಕಿದ್ದರು. ಅಡಿಗಲ್ಲು ಹಾಕಲು ತೋರಿದ ಆಸಕ್ತಿ ಕಾಮಗಾರಿ ಮುನ್ನಡೆಗೆ ತೋರಿಸಲಿಲ್ಲ. ಇದಕ್ಕೆ ಮುನ್ನವೆ ಪೈಪ್ಲೈನ್ ಕಾಮಗಾರಿ ಮಾಡಿ ಮುಗಿಸಿದರು. ಇದರಲ್ಲಿಯೂ ಅವ್ಯವಹಾರ ವಾಸನೆ ಕೇಳಿ ಬಂದಿದ್ದವು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಅಣೆಕಟ್ಟು ನಿರ್ಮಾಣಕ್ಕೆ ಅನೇಕ ಅಡೆತಡೆಗಳಿದ್ದವು. ಈಗ ಅದೂ ಬಗೆಹರಿದಿದೆ. ಅಲ್ಲದೆ, ರೈತರು ಅಣೆಕಟ್ಟು ನಿರ್ಮಾಣಕ್ಕೆ ಬೇಕಾದ ಜಮೀನು ನೀಡಲು ಸಮ್ಮತಿ ನೀಡಿದ್ದಾರೆ.
ಮೀನಮೇಷ: ಏಳು ವರ್ಷಗಳ ಹಿಂದೆಯೇ ಅಣೆಕಟ್ಟು ನಿರ್ಮಾಣ ಮಾಡಿದ್ದರೆ ಈ ವೇಳೆಗಾಗಲೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಬಹುದಿತ್ತು. ಅಲ್ಲದೆ, ಮತ್ತೊಂದೆಡೆ ಯೋಜನೆ ಸಂಪೂರ್ಣ ಮಳೆಯಾಶ್ರಿತವಾಗಿರುವುದರಿಂದ ಮತ್ತು ಜಿಲ್ಲೆಯಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮಖವಾಗುತ್ತಿರುವುದರಿಂದ ಯೋಜನೆ ಪ್ರಾರಂಭವಾದರೂ ಪ್ರಯೋಜನವಿಲ್ಲ ಎಂಬ ಮಾತಿನಿಂದ ಸರ್ಕಾರ ಸಹ ಯೋಜನೆ ಪ್ರಾಂಭಕ್ಕೆ ಮೀನಮೇಷ ಏಣಿಸುತ್ತಿದ್ದಾರೆ. ಈಗ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಎಲ್ಲಾ ಪಕ್ಷಗಳಿಗೂ ಶಾಶ್ವತ ನೀರಾವರಿ ಬಗ್ಗೆ ಚರ್ಚಿಸುತ್ತಿದ್ದಾರೆ.
ಜನ ತತ್ತರ: ಜಿಲ್ಲೆಯ ಜನರು ಸದಾ ಬರದಿಂದ ತತ್ತರಿಸುತ್ತಿದ್ದಾರೆ. ಮಳೆಯಿಲ್ಲದೆ ರೈತರು ಕೃಷಿ ಕೈಬಿಟ್ಟು ಪರ್ಯಾಯ ಕಸುಬು ಅವಲಂಬಿಸುವಂತಾಗಿದೆ. ರಾಜಕೀಯ ಗಿಮಿಕ್ಗಾಗಿ ನೀರಾವರಿ ವಿಷಯ ಬಳಸಿಕೊಳ್ಳದೆ ನುಡಿದಂತೆ ನಡೆಯಬೇಕೆಂದು ಜನರು ಕೋರಿದ್ದಾರೆ.
ಅನುಮಾನ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಸರ್ಕಾರ ಜಿಲ್ಲೆಯ ಜನರನ್ನು ಸೆಳೆಯಲು ಜಿಲ್ಲಾಧಿಕಾರಿಗಳ ಮುಖಾಂತರ ಯರಗೋಳ್ ಯೋಜನೆ ಪ್ರಸ್ತಾಪಿಸಿರಬಹುದು ಎಂಬ ಶಂಕೆ ಉಂಟಾಗಿದೆ. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಹೇಳಿ ತಿಂಗಳಾದರೂ ಏಕೆ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ಸಿಕ್ಕಿಲ್ಲ ಎಂಬ ಅನುಮಾನ ಮೂಡಿದೆ.
ಬೇಸಿಗೆಗೆ ಮುನ್ನವೆ ಕ್ಷೇತ್ರದಲ್ಲಿ ನೀರಿನ ಅಭಾವ ಪ್ರಾರಂಭವಾಗಿದೆ. ಮತ್ತೊಂದೆಡೆ ವಿದ್ಯುತ್ ಬೇಕಾಬಿಟ್ಟಿಯಾಗಿ ಕಡಿತಗೊಳಿಸಲಾಗುತ್ತಿದೆ. ಜನರು ಸಿಡಿದೇಳುವ ಮುನ್ನವೆ ಸರ್ಕಾರ ಎಚ್ಚರ ವಹಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

