ಮಳೆ ಕಾಣದೆ ರೈತರು ಕಂಗಾಲು
ಶನಿವಾರಸಂತೆ: ಶನಿವಾರಸಂತೆ ಹೋಬಳಿಯಾದ್ಯಂತ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಸಲುವಾಗಿ ಮಳೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಉಳುಮೆ ಕಾರ್ಯ ಮುಗಿದಿದ್ದು, ಬಿತ್ತನೆ ಕೈಗೊಳ್ಳಲು ಮಳೆಯ ಮುನ್ಸೂಚನೆ ಕಾಣದಿರುವುದರಿಂದ ರೈತರು ಕಂಗಲಾಗಿದ್ದಾರೆ.
ಶನಿವಾರಸಂತೆ ಹೋಬಳಿಯ ಆಲೂರುಸಿದ್ದಾಪುರ, ನಿಡ್ತ, ಗೌಡಳ್ಳಿ, ಹಂಡ್ಲಿ, ಶನಿವಾರಸಂತೆ, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ವಾಣಿಜ್ಯ ಬೆಳೆಯಾದ ಕಾಫಿಯನ್ನು ಹೊರತು ಪಡಿಸಿದಂತೆ ಆಹಾರ ಬೆಳೆಗಳಾದ ಬತ್ತ, ಜೋಳವನ್ನು ಬೆಳೆಯಲಾಗುತ್ತದೆ. ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಜೋಳ ಹಾಗೂ ಬತ್ತವನ್ನು ಬೆಳೆಯಲಾಗುತ್ತಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಜೋಳದ ತಳಿಗಳಾದ ಐಸೆಲ್, ಪ್ಯಾರಿ, ಗಂಗಾ-ಕಾವೇರಿ ತಳಿಯನ್ನು ರೈತರು ಬೆಳೆಯುತ್ತಾರೆ.
ಬಿತ್ತನೆಗೆ ಸಿದ್ಧವಾದರೂ ಮಳೆ ಇಲ್ಲ: ಈ ವ್ಯಾಪ್ತಿಯಲ್ಲಿ ಜೋಳ ಬೆಳೆಯುವ ರೈತರು ಮೇ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸುವುದು ವಾಡಿಕೆ. ಆದರೆ, ಇನ್ನೂ ಮಳೆ ಆಗಮನದ ಮುನ್ಸೂಚನೆ ಕಾಣದೆ ರೈತರು ಕೈ ಚೆಲ್ಲಿ ಕುಳಿತ್ತಿದ್ದಾರೆ. ತಮ್ಮ ಹೊಲಗಳನ್ನು ಉಳುಮೆ ಮಾಡಿ ತಮಗೆ ಬೇಕಾದ ಬಿತ್ತನೆ ಬೀಜವನ್ನು ಖರೀದಿಸಿಕೊಂಡು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಜೋಳ ತಳಿಗಳನ್ನು ಬಿತ್ತನೆ ಕಾರ್ಯ ಜೂನ್ ತಿಂಗಳ ಮೊದಲ ವಾರದಲ್ಲಿ ಮುಗಿಸಿದರೆ ನವಂಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಬಿತ್ತನೆ ಕಾರ್ಯ ವಿಳಂಬವಾದರೆ ಇಳುವರಿ ತುಂಬಾ ಕ್ಷೀಣಿಸುತ್ತದೆ ಎಂಬುವುದು ಈ ಭಾಗದ ರೈತರ ಅಳಲು.
ಬತ್ತ ಬಿತ್ತನೆಯೂ ಆಗಿಲ್ಲ: ಶನಿವಾರಸಂತೆ ಹೋಬಳಿಯಾದ್ಯಂತ ಬತ್ತ ಬೆಳೆಯುವ ರೈತರು ಗದ್ದೆಗಳನ್ನು ಟ್ರ್ಯಾಕ್ಟರ್, ಟಿಲ್ಲರ್ ಮೂಲಕ ಈಗಾಗಲೇ ಉಳುಮೆ ಮಾಡಿದ್ದಾರೆ. ತಮಗೆ ಬೇಕಾದ ಬತ್ತದ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಆದರೆ, ಮಳೆ ಬೀಳುವ ಲಕ್ಷಣ ಕಾಣದೇ ರೈತ ಕಂಗಲಾಗಿದ್ದಾನೆ.
ಕಳೆದ ವರ್ಷ ಇದೇ ಅವಧಿಯಲ್ಲಿ ನಿರೀಕ್ಷೆಗೆ ಮೀರಿ ಈ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿತ್ತು. ಇದೇ ಅವಧಿಯಲ್ಲಿ ಶೇ.50 ರಷ್ಟು ಬತ್ತದ ಬಿತ್ತನೆ ಕಾರ್ಯ ಮುಗಿದಿತ್ತು. ಆದರೆ, ಪ್ರಸ್ತುತ ವರ್ಷ ಶೇ.1 ರಷ್ಟು ಸಹ ಬಿತ್ತನೆ ಕಾರ್ಯವಾಗಿಲ್ಲ.
ಶನಿವಾರಸಂತೆ ಹೋಬಳಿಯಲ್ಲಿ ಬತ್ತದ ತಳಿಗಳಾದ ರಾಜ್ಮಡಿ, ಎ1, ಸೊನಮಸೂರಿ, ಬಿಆರ್, ತುಂಗ, ಇಂಟಾನ್, ಐಆರ್20 ತಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ತಳಿಯನ್ನು ಬೆಳೆಯುವ ರೈತ ಜೂ. 10 ರೊಳಗೆ ಬಿತ್ತನೆ ಮಾಡಿದರೆ, ಜು. 10 ರೊಳಗೆ ನಾಟಿ ಕಾರ್ಯ ಮಾಡಿ, ನವಂಬರ್ ಕೊನೆ ವಾರದಲ್ಲಿ ಕಟಾವು ಮಾಡುವುದು ವಾಡಿಕೆ. ರೈತರು ಈಗಾಗಲೇ ತಮಗೆ ಬೇಕಾದ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಆದರೆ, ಮಳೆ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಬಿತ್ತನೆ ಮಾಡಿಲ್ಲ
ಜೋಳದ ಬಿತ್ತನೆಯನ್ನು ಈಗಾಗಲೇ ಮುಗಿಸಬೇಕಾಗಿತ್ತು. ಬಿತ್ತನೆಗಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ. ಆದರೆ, ಮಳೆ ಬೀಳಲು ವಿಳಂಬವಾದರೆ ಜೋಳದ ಬೆಳೆಯನ್ನೆ ನಂಬಿರುವ ನಮಗೆ ತುಂಬಾ ತೊಂದರೆಯಾಗುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬತ್ತದ ಬಿತ್ತನೆ ಕಾರ್ಯವನ್ನು ಮುಗಿಸಿದ್ದೇವು, ಇದೇ ಅವಧಿಯಲ್ಲಿ ಸುಮಾರು 15 ಇಂಚಿನಷ್ಟು ಮಳೆಯಾಗಿತ್ತು. ಆದರೆ, ಈ ವರ್ಷ ತುಂಬಾ ಕಡಿಮೆ ಮಳೆಯಾಗಿದ್ದು, ಯಾರೂ ಬಿತ್ತನೆ ಕಾರ್ಯ ಮಾಡಿಲ್ಲ.
- ರಾಜು, ಹಿತ್ತಲಕೇರಿ ರೈತ
ಬೀಜ ದಾಸ್ತಾನಿದೆ
ಶನಿವಾರಸಂತೆ ವ್ಯಾಪ್ತಿಯಲ್ಲಿ ಬತ್ತದ ಬಿಆರ್, ತುಂಗ ಮತ್ತು ಇಂಟಾನ್ ತಳಿಗೆ ತುಂಬಾ ಬೇಡಿಕೆ ಇದ್ದು, ಈಗಾಗಲೇ ನಮ್ಮ ಇಲಾಖೆ ರೈತರ ಬೇಡಿಕೆಯಂತೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ರೈತರು ತಮಗೆ ಬೇಕಾದ ಬಿತ್ತನೆ ಬೀಜವನ್ನು ಕೊಂಡುಕೊಂಡಿದ್ದಾರೆ. ಎಸ್1 ಗದ್ದೆಯಲ್ಲಿ ಬತ್ತದ ಬಿತ್ತನೆ ಕಾರ್ಯದ ಸಿದ್ಧತೆಗಾಗಿ ಉಳುಮೆ ಮಾಡುತ್ತಿರುವ ರೈತ. ಆದರೆ, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
- ತಿಮ್ಮಯ್ಯ, ಕೃಷಿ ಸಹಾಯಕ ಅಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

