ಕೊಡಗು

ಮೊರಾರ್ಜಿ ವಸತಿ ನರಕಸದೃಶ ಶಾಲೆ

Published On :

ಸಿದ್ದಾಪುರ: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಅಧೀನದ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿ 7 ವರ್ಷಗಳ ಹಿಂದೆ ಪ್ರಾರಂಭವಾದ ಮೊರಾರ್ಜಿ ದೇಸಾಯಿ ಮಾದರಿ ವಸತಿಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಾಸ ನರಕ ಸದೃಶವಾಗಿದೆ.
250 ವಿದ್ಯಾರ್ಥಿಗಳು ಸನಿವಾಸ ವ್ಯಾಸಂಗ ಮಾಡುತ್ತಿರುವ ಈ ಶಾಲೆಗೆ ಇನ್ನೂ ಸ್ವಂತ ಕಟ್ಟಡದ ವ್ಯವಸ್ಥೆ ಆಗಿಲ್ಲ.  7 ವರ್ಷಗಳಿಂದಲೂ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಸುತ್ತಿದೆ. ಈ ಹಿಂದೆ ಮದ್ಯದ ಗೋದಾಮು ಆಗಿದ್ದ ಈ ಕಟ್ಟಡಕ್ಕೆ ಸರ್ಕಾರದಿಂದ ಮಾಸಿಕ ರು. 60 ಸಾವಿರ ನಿರ್ವಹಣೆಗಾಗಿ ನೀಡಲಾಗುತ್ತಿದೆ. ಪ್ಯಾಕೆಟ್ ಸಾರಾಯಿ ನಿಷೇಧವಾದ ನಂತರ ಹಾಳು ಬಿದ್ದಿದ್ಧ ಈ ಕಟ್ಟಡದ ಮಾಲೀಕರಿಗೆ ವಸತಿ ನಿಲಯ ವರದಾನವಾಗಿ ಪರಿಣಮಿಸಿತು.
ಅವ್ಯವಸ್ಥೆ ಆಗರ: ಇರುವ ಆರು ಕೊಠಡಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪಠ್ಯೋಪಕರಣಗಳು ಹಾಗೂ ಬಟ್ಟೆಬರೆಗಳನ್ನು ಇಡಲು ಕಪಾಟುಗಳಾಗಲೀ, ಸಜ್ಜೆಗಳಾಗಲೀ ಇಲ್ಲ. ಇವುಗಳನ್ನು ನೆಲದಲ್ಲೇ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. 250 ವಿದ್ಯಾರ್ಥಿಗಳಿಗೆ ಕೇವಲ 8 ಶೌಚಾಲಯ ಹಾಗೂ 6 ಸ್ನಾನದ ಕೊಠಡಿಗಳಿವೆ. ವಿದ್ಯಾರ್ಥಿಗಳೂ ತಮ್ಮ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮಕ್ಕಳು ಕುಡಿಯುವ ನೀರಿಗೆ ವಸತಿ ನಿಲಯದ ಹೊರ ಆವರಣಕ್ಕೆ ಹೋಗಿ ಖಾಸಗಿ ವ್ಯಕ್ತಿಯೊಬ್ಬರ ಜಾಗದಿಂದ ನೀರು ತರಬೇಕಾದ ಪರಿಸ್ಥಿತಿ ಇದೆ. ಮಲಗುವ ಕೋಣೆಗಳಂತೂ ಯಾವುದೇ ರೀತಿಯ ಸುರಕ್ಷತೆ ಹೊಂದಿರುವುದಿಲ್ಲ. ಕಿಟಕಿಗಳಂತೂ ನೆಟ್ಟಗಿಲ್ಲ. ಮಳೆ, ಗಾಳಿ, ಚಳಿಯಿಂದ ರಕ್ಷಣೆ ಪಡೆಯುವ ಯಾವುದೇ ವ್ಯವಸ್ಥೆ ಮಾಡಿರುವುದಿಲ್ಲ. ಎರಡು ವಾರಗಳ ಹಿಂದೆ ಪ್ರಾರಂಭಗೊಂಡ ಮಳೆಯಲ್ಲಿ ಮಕ್ಕಳು ಚಳಿಯಲ್ಲಿಯೇ ರಾತ್ರಿ ಕಳೆಯಬೇಕಾದ ಸ್ಥಿತಿ ಉಂಟಾಗಿದೆ.
ಸರ್ಕಾರದ ಯೋಜನೆಯ ಸದುಪಯೋಗ ಪಡೆಯಲೆಂದು ಬಡ ಕುಟುಂಬಗಳ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮಾತ್ರ ಇಲ್ಲಿ ಪ್ರವೇಶ ಪಡೆಯುತ್ತಾರೆ. ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ.
ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಕಟ್ಟಡ ಕೂಡಲೇ ಸ್ಥಳಾಂತರಗೊಳಿಸುವ ಯೋಜನೆ ಇರುವುದಾಗಿಯೂ ಹತ್ತಿರದಲ್ಲೇ ಇರುವ ಮತ್ತೊಂದು ಕಟ್ಟಡ ನೋಡಿರುವುದಾಗಿಯೂ ಹೇಳಿದರು. ಆದರೆ ಅವರು ಸೂಚಿಸಿದ ಕಟ್ಟಡ ಈಗಿರುವ ಕಟ್ಟಡಕ್ಕಿಂತ ಭಿನ್ನವಲ್ಲ. ನೂತನ ಕಟ್ಟಡದ ಬಾಡಿಗೆ ಎಷ್ಟು ಎಂಬುದಾಗಿ ಲೋಕೋಪಯೋಗಿ ಇಲಾಖೆ ಇನ್ನಷ್ಟೇ ನಿರ್ಧರಿಸಬೇಕಿದೆ.  ಆದರೆ ಕೊರತೆ ನಡುವೆಯೂ ಅಗತ್ಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇರುವುದು ತುಸು ನೆಮ್ಮದಿಯ ಅಂಶವಾಗಿದೆ. ಅವರ ಕಾರ್ಯ ನಿರ್ವಹಣೆಯೂ ತೃಪ್ತಿದಾಯಕವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.