ಘನತ್ಯಾಜ್ಯ ಕಾವೇರಿಗೆ ಸೇರಿಸದಿರಿ
ಮಡಿಕೇರಿ: ಜಿಲ್ಲೆಯ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿನ ಘನ ತ್ಯಾಜ್ಯಗಳು ನದಿಗೆ ಸೇರದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆ ದಿಸೆಯಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮವಹಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ನಿರ್ದೇಶನ ನೀಡಿದ್ದಾರೆ.
ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಕಾವೇರಿ ನದಿ ಬಳಿಯಿರುವ ಗ್ರಾಮಗಳು ಸೇರಿದಂತೆ ಗ್ರಾಮೀಣ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅನುರಾಗ್ ತಿವಾರಿ ಮಾತನಾಡಿದರು.
ಕಾವೇರಿ ನದಿ ಪಾತ್ರದಲ್ಲಿ 23 ಗ್ರಾಪಂಗಳು ಬರಲಿದ್ದು, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ದಡದ ಗ್ರಾಮಗಳಲ್ಲಿ ಕಲುಷಿತ ನೀರು ನದಿಗೆ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ. ಜೊತೆಗೆ ನಗರ- ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಕಸ ಹಾಕಬೇಕು. ಸಂಗ್ರಹಿಸಿದ ತ್ಯಾಜ್ಯದಿಂದ ವಿದ್ಯುತ್, ಬಯೋಗ್ಯಾಸ್ ತಯಾರಿಸಲು ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಸ್ವಚ್ಛ- ಸುಂದರ ಜಿಲ್ಲೆ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ಕಸ ಪಡೆಯುವಾಗಲೇ ಹಸಿ ಮತ್ತು ಒಣಗಿದ ಕಸವನ್ನು ಬೇರ್ಪಡಿಸಿ ಪಡೆಯಬೇಕು. ಸ್ವಚ್ಛ- ಸುಂದರ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಮಾತನಾಡಿ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಪ್ರಥಮ ಆದ್ಯತೆ ನೀಡಬೇಕು. ವಿವಿಧ ಇಲಾಖೆಗಳ ವ್ಯಾಪ್ತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಂಬಂಧ ಕಾಳಜಿ ವಹಿಸಬೇಕಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಕಾವೇರಿ ನದಿ ಪಾತ್ರದಲ್ಲಿ ಜಿಲ್ಲೆಯ 23 ಗ್ರಾಪಂಗಳು ಬರಲಿದ್ದು, ಈ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಕಲುಷಿತ ನೀರು ನದಿಗೆ ಸೇರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೆಯೇ ಘನ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲು ಸಂಬಂಧಪಟ್ಟ ಪಿಡಿಓಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಚಿದಾನಂದ ಮಾತನಾಡಿ, ಆ.17ರಂದು ಮೈಸೂರಿನಲ್ಲಿ ವಿಭಾಗ ಮಟ್ಟದ ಲೋಕ ಅದಾಲತ್ ನಡೆಯಲಿದ್ದು ಘನತ್ಯಾಜ್ಯ ವಿಲೇವಾರಿ ಸಂಬಂಧ ಸಮಗ್ರ ಮತ್ತು ನಿಖರ ಮಾಹಿತಿ ಒದಗಿಸುವಂತೆ ತಿಳಿಸಿದರು.
ಪಪಂ ಮುಖ್ಯಾಧಿಕಾರಿಗಳಾದ ಬಾಬು(ಕುಶಾಲನಗರ), ರಂಜನ್(ಸೋಮವಾರಪೇಟೆ), ರಮೇಶ್(ವಿರಾಜಪೇಟೆ) ಮತ್ತಿತರರು ಘನ ತ್ಯಾಜ್ಯ ವಿಲೇವಾರಿ ಸಂಬಂಧ ಹಲವು ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಜಿಪಂ ಕಾರ್ಯಪಾಲಕ ಎಂಜಿನಿಯರ್ ದೊಡ್ಡಸಿದ್ದಯ್ಯ, ಪೌರಾಯುಕ್ತ ಬಿ.ಬಿ. ಪುಷ್ಪಾವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್.ಶ್ರೀರಂಗಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಕೃಷ್ಣ, ನಗರ ನೀರು ಒಳಚರಂಡಿ ಮಂಡಳಿ ಎಇಇ ಮಾದಯ್ಯ ಮತ್ತಿತರರು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ನಗರಾಭಿವೃದ್ಧಿ ಯೋಜನಾ ಶಾಖೆಯ ಎಇಇ ನಾಗೇಶ್ ಬಾಬು, ಶಿವಪ್ರಸಾದ್, ಮಂಜುಳಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

