ಇಂದು ವೀರ ಸೇನಾನಿ ಜನ್ಮದಿನ ಸಂಭ್ರಮ
ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಜ.28 ರಂದು ಗೋಣಿಕೊಪ್ಪಲಿನಲ್ಲಿ ರಾಷ್ಟ್ರದ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 114 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಫೋರಂನ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಫೋರಂನ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಜ.28 ರಂದು ಸೋಮವಾರ ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇಗುಲದ ಬಳಿ ಮತ್ತು ಪಾಲಿಬೆಟ್ಟ ಜಂಕ್ಷನ್ನಲ್ಲಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಪ್ರತಿಮೆ ಸ್ಥಾಪನೆಗೆ ಕೊಡಂದೇರ ಕುಟುಂಬದ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 9.30 ಗಂಟೆಗೆ ಗೋಣಿಕೊಪ್ಪಲಿನ ಪಾಲಿಬೆಟ್ಟ ಜಂಕ್ಷನ್ನಿಂದ ವಿವಿಧ ಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡ ಭವ್ಯ ಪಥಸಂಚಲನ ಉಮಾಮಹೇಶ್ವರಿ ದೇವಸ್ಥಾನದವರೆಗೆ ನಡೆಯಲಿದ್ದು, ಬಳಿಕ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದೂ ಫೋರಂ ಅಧ್ಯಕ್ಷ ಕರ್ನ್ಲ್ ಸುಬ್ಬಯ್ಯ ತಿಳಿಸಿದರು.
ಕಾವೇರಿ ಕಾಲೇಜು ಮೈದಾನದವರೆಗೆ ಪಥಸಂಚಲನ ಮುಂದುವರೆಯಲಿದ್ದು ಆ ಬಳಿಕ ಕಾವೇರಿ ಕಾಲೇಜು ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಇದರಲ್ಲಿ ಹಿರಿಯ ಸೇನಾಧಿಕಾರಿಗಳು, ವಿಧಾನಸಭಾಧ್ಯಕ್ಷರನ್ನು ಒಳಗೊಂಡಂತೆ ಗಣ್ಯರು ಪಾಲ್ಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.
ಫೀ.ಮಾ.ಕೆ.ಎಂ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ಈ ಬಾರಿ ಮೈಸೂರಿನ ದೀನ ಬಂಧು ಟ್ರಸ್ಟ್ ಅಧ್ಯಕ್ಷ ಮಾಳೇಟಿರ ಎಂ. ಕಾವೇರಪ್ಪ ಅವರಿಗೆ ಕೇಂದ್ರದ ಸಾಮಜಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ. ಐಚೆಟ್ಟೀರ ಪ್ರೇಮಾ ಕಾರ್ಯಪ್ಪ ಪ್ರಧಾನ ಮಾಡಲಿದ್ದಾರೆ ಎಂದು ಕರ್ನ್ಲ್ ಸುಬ್ಬಯ್ಯ ತಿಳಿಸಿದರು.
ಭಿನ್ನಾಭಿಪ್ರಾಯವಿಲ್ಲ: ಫೀ.ಮಾ.ಕೆ.ಎಂ. ಕಾರ್ಯಪ್ಪ ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಕರ್ನಲ್ ಸುಬ್ಬಯ್ಯ 2012ರಲ್ಲಿ ಪ್ರಥಮ ಬಾರಿಗೆ ಕಾರ್ಯಪ್ಪನವರ ಜನ್ಮ ದಿನಾಚರಣೆ ಆಚರಿಸುವ ಸಂದರ್ಭವೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ, ಮುಂದಿನ ವರ್ಷ ಗೋಣಿಕೊಪ್ಪಲಿನಲ್ಲಿ ಕಾರ್ಯಪ್ಪ ಜನ್ಮ ದಿನಾಚರಣೆ ನಡೆಸುವುದಾಗಿ ಸ್ಪಷ್ಟಪಡಿಸಿತ್ತು ಎಂದರು.
ಈ ನಿಟ್ಟಿನಲ್ಲಿ ಫೋರಂ ಕಳೆದ ವರ್ಷ ನಡೆಸಿದ ಪ್ರಯತ್ನಗಳಿಂದ ಸರ್ಕಾರ ಕಳೆದ ಬಾರಿ ಕಾರ್ಯಪ್ಪ ಜನ್ಮದಿನಾಚರಣೆಗೆ ಮೊದಲ ಬಾರಿಗೆ ಅನುದಾನವನ್ನು ಬಿಡುಗಡೆ ಮಾಡಿತ್ತು. ಇದೀಗ ಜಿಲ್ಲಾಡಳಿತ ಈ ಬಾರಿಯ ಅನುದಾನವನ್ನು ಜಿಲ್ಲಾ ಕೇಂದ್ರದಲ್ಲಿ ವೀರಸೇನಾನಿಯ ಜನ್ಮ ದಿನಾಚರಣೆಗೆ ಬಳಸುತ್ತಿದೆ. ಹೀಗಿದ್ದೂ ಮಡಿಕೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ವೀರಸೇನಾನಿಯ ಜನ್ಮ ದಿನಾಚರಣೆ ನಡೆಯುವುದು ಸ್ವಾಗತಾರ್ಹ ಎಂದು ಕರ್ನಲ್ ಸುಬ್ಬಯ್ಯ ಸ್ಪಷ್ಟಪಡಿಸಿದರು.
ಫೋರಂ ಪದಾಧಿಕಾರಿಗಳಾದ ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ, ಸಂಚಾಲಕ ಉಳ್ಳಿಯಡ ಎಂ. ಪೂವಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ ಉಪಸ್ಥಿತರಿದ್ದರು.
ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ- ರಸಪ್ರಶ್ನೆ ಸ್ಪರ್ಧೆ
ಗೋಣಿಕೊಪ್ಪ: ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ 114ನೇ ಜನ್ಮ ದಿನೋತ್ಸವದ ಪ್ರಯುಕ್ತ ಇಗ್ಗುತ್ತಪ್ಪ ಕೊಡವ ಸಂಘ ಏರ್ಪಡಿಸಿದ್ದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಲಯನ್ಸ್ ಹಾಗೂ ಸೈಂಟ್ ಥೋಮಸ್ ಶಾಲೆಗಳು ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾಲ್ಸ್ ಹಾಗೂ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗೆದ್ದಿದ್ದಾರೆ.
ಇಲ್ಲಿಯ ಸ್ವಾತಂತ್ರ ಹೋರಾಟಗಾರರ ಭವನದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮವನ್ನು ಡಾ. ಶಿವಪ್ಪ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ. ಭಾಗ್ಯಲಕ್ಷಿ ಮಾತನಾಡಿ, ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾದರೂ ದೇಶದ ರಕ್ಷಣೆಗಾಗಿ ಅಸಂಖ್ಯಾತ ಸೈನಿಕರನ್ನು ನೀಡಿದೆ. ತಾಯ್ನಾಡಿಗಾಗಿ ಜಿಲ್ಲೆಯ ಸೈನಿಕರು ಹುತಾತ್ಮರಾಗಿದ್ದು, ಎಲ್ಲರಿಗೂ ಮಾದರಿಯಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮ ದಿನೋತ್ಸವದಲ್ಲಿ ಭಾಗಿಯಾಗುತ್ತಿರುವುದು ನಿಜಕ್ಕೂ ಖುಷಿ ತರುವ ಸಂಗತಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಕಾರ್ಯಪ್ಪನವರ ಶಿಸ್ತು, ಸಂಯಮ, ಕಾರ್ಯಶೀಲತೆ ಗುಣಗಳನ್ನು ಬೆಳೆಸಿಕೊಳ್ಳಲಿ ಎಂದು ಹಾರೈಸಿದರು.
ಸ್ವಾತಂತ್ರ ಹೋರಾಟಗಾರರ ಭವನದ ಸಂಚಾಲಕ ಅಜಿತ್ ಅಯ್ಯಪ್ಪ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೇರಣೆಯಾಗಿದ್ದು, ಮುಂದೆಯೂ ಏರ್ಪಡಿಸುವುದರ ಮೂಲಕ ಕಾರ್ಯಪ್ಪನವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ವೀರಯೋಧ ಸಿಂಗೂರ ಮೇದಪ್ನವರ ಪತ್ನಿ ಪಾರ್ವತಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ರಸಪ್ರಶ್ನೆ ಕಾರ್ಯಕ್ರಮವನ್ನು ಸಣ್ಣುವಂಡ ರಜನ್ ಹಾಗೂ ತೀತಿರ ಡಾ. ರೇಖಾ ವಸಂತ್ ನಡೆಸಿಕೊಟ್ಟರು.
ಸಂಘದ ಅಧ್ಯಕ್ಷ ಪಿ.ಎಸ್. ಸುರೇಶ್ ಅಧ್ಯಕ್ಷತೆ ವಹಿಸಿ, ಸಂಘವು ಗೋಣಿಕೊಪ್ಪಲಿನಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಹೋರಾಟ ನಡೆಸುತ್ತಿದೆ. ವಿದ್ಯಾರ್ಥಿಗಳು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಆದರ್ಶವನ್ನು ರೂಢಿಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಮೊದಲಿಗೆ ಸುಮಿಸುಬ್ಬಯ್ಯ ಪ್ರಾರ್ಥಿಸಿದರೆ, ರಜನ್ ತಿಮ್ಮಯ್ಯ ಸ್ವಾಗತಿಸಿ, ಕುಪ್ಪಂಡ ದತ್ತಾತ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ. ಬೋಜಮ್ಮ, ಮುರುವಂಡ ಜಯ ಕುಶಾಲಪ್ಪ, ಸಿ.ಡಿ. ಮಾದಪ್ಪ, ಕುಪ್ಪಂಡ ರೋಹಿತ್, ರೇಖಾ ಸೋಮಯ್ಯ, ಹೊಟ್ಟೇಂಗಡ ಹೇಮಂತ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

