ಮರವೇರಿ ಕುಳಿತ ಕಾಳಿಂಗ!
ಟಿ.ಎಲ್. ಶ್ರೀನಿವಾಸ್
ಗೋಣಿಕೊಪ್ಪಲು: ಇಲ್ಲಿನ ಸಮೀಪ ಹಾತೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಕಾಳಿಂಗ ರಾಜನ ದರ್ಶನವಾಗಿದೆ. ಬಿಸಿಲ ಧಗೆಯನ್ನು ಸಹಿಸದ ಕಾಳಿಂಗ ಭಾರಿ ಗಾತ್ರದ ಮರವನ್ನು ಮಂಗನಂತೆ ಏರಿ ಕುಳಿತುಕೊಂಡ ಘಟನೆ ಊರಲ್ಲೆಲ್ಲಾ ಗುಲ್ಲೆಬ್ಬಿದೆ. ಆದರೆ, ಕೊಡಗಿನಲ್ಲಿ ಬಹು ಸಂಖ್ಯೆಯಲ್ಲಿ ಗುರುತಿಸಿಕೊಂಡಿರುವ ಉರಗ ತಜ್ಞರಿಗೆ ಮರವೇರಿದ ಕಾಳಿಂಗನನ್ನು ಕೆಳಗಿಳಿಸುವುದು ಹೇಗೆ ಅನ್ನುವ ಪ್ರಶ್ನೆಯೂ ಕಾಡಿದೆ.
ಸ್ವಲ್ಪ ಹೆಚ್ಚೂ ಕಮ್ಮಿಯಾದರೂ ಜೀವಕ್ಕೆ ಕುತ್ತು. ಕಾಳಿಂಗ ಕಚ್ಚಿದರೆ ಕೆಲವೆ ಸೆಕೆಂಡ್ ಅಂತರದಲ್ಲಿ ಮನುಷ್ಯ ಇಹಲೋಕ ತ್ಯಜಿಸಬಹುದು. ಅಂತೂ ಇಂತೂ ಕಾಳಿಂಗನನ್ನು ಮರದಿಂದ ಕೆಳಗಿಳಿಸಿ, ಕೇರಳ ಗಡಿಭಾಗ ಮಾಕುಟ್ಟ ವನ್ಯಜೀವಿ ವಲಯಕ್ಕೆ ಸಂಜೆ ಸುಮಾರು 13 ಅಡಿ ಉದ್ದದ ಕಾಳಿಂಗನನ್ನು ಬಿಡುಗಡೆಗೊಳಿಸಿ ಇಲ್ಲಿನ ಉರಗ ತಜ್ಞರು ಸಾಹಸ ಮೆರೆದಿದ್ದಾರೆ.
ಇಳಿಸಿದ್ದು ಹೀಗೆ: ಹಾತೂರು ಸಮೀಪ ಕುಂದ ವ್ಯಾಪ್ತಿಯ ಕಡೇಮಾಡ ವಿಶ್ವನಾಥ್ ಅವರ ಕಾಫಿ ತೋಟದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರವೇರಿದ ಕಾಳಿಂಗನನ್ನು ತೋಟ ಕಾರ್ಮಿಕರು ನೋಡಿದ್ದು, ತಮ್ಮ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಮಾಲೀಕ ವಿಶ್ವನಾಥ್ ಅವರು ಗೋಣಿಕೊಪ್ಪಲು ಕಾಪ್ಸ್ ಶಾಲೆಯ ಸ್ನೇಕ್ ಸತೀಶ್ ಹಾಗೂ ಶ್ರೀಮಂಗಲದ ಉರಗ ತಜ್ಞ ಕುಂಜ್ಞಂಗಡ ಬೋಸ್ ಮಾದಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಕಾಳಿಂಗನನ್ನು ಮರ ಇಳಿಸುವ ಸಾಹಸಕ್ಕೆ ಗೋಣಿಕೊಪ್ಪಲಿನ ಮತ್ತೋರ್ವ ಉರಗ ಪ್ರೇಮಿ ಶರತ್ ಅವರೂ ಈ ಸಂದರ್ಭ ಸೇರಿಕೊಂಡರು. ಈ ಹಂತದಲ್ಲಿ ತಂಡೋಪತಂಡವಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ಕಾಳಿಂಗನನ್ನು ನೋಡಲು ನೂರಾರು ಸಂಖ್ಯೆಯಲ್ಲಿ ವಿಶ್ವನಾಥ್ ತೋಟಕ್ಕೆ ತೆರಳಿ ಕೌತುಕದಿಂದ ಕಾರ್ಯಾಚರಣೆ ತಂಡದ ಕೈಚಳಕ ನೋಡಲು ಕಾದು ಕುಳಿತಿದ್ದರು.
ಉರಗ ತಜ್ಞರು ಕುಂದ ಗ್ರಾಮಕ್ಕೆ ಬರುವಷ್ಟರಲ್ಲಿ ಕಾಳಿಂಗ 3- 4 ಮರಗಳನ್ನು ಬದಲಾಯಿಸಿ, ನಂತರ ಮಾವಿನ ಮರದ ರೆಂಬೆಯ ಮೇಲೆ ಆಶ್ರಯ ಪಡೆದಿತ್ತು. ಮರವೇರಿ ಕಾಳಿಂಗನ ಬಾಲ ಎಳೆದು ಕೆಳಕ್ಕಿಳಿಸುವುದೂ ಅಪಾಯಕ್ಕೆ ಆಹ್ವಾನ ನೀಡಿದಂತೆ ಅನ್ನುವದನ್ನು ಉರಗ ತಜ್ಞರು ಅಂದಾಜಿಸಿದ್ದರು.
ರೆಂಬೆ ಕಡಿದರು: ಸುಮಾರು 1 ಗಂಟೆಯವರೆಗೆ ವಿವಿಧ ಉಪಾಯಗಳನ್ನು ಮಾಡಿದರೂ ಕಾಳಿಂಗ ಮರ ಇಳಿಯಲು ತನ್ನ ನಿರಾಕರಣೆಯನ್ನು ಮುಂದುವರಿಸಿತ್ತು.
ಈ ಹಂತದಲ್ಲಿ ಉರಗ ತಜ್ಞರ ಮುಂದೆ ಇದ್ದದ್ದು ಒಂದೇ ದಾರಿ. ಕಾಳಿಂಗ ಆಶ್ರಯ ಪಡೆದಿದ್ದ ಮಾವಿನ ರೆಂಬೆಯನ್ನು ಕಡಿದು ಬೀಳಿಸುವುದು. ಅದೇ ಯೋಜನೆ ಫಲ ನೀಡಿತು. ಅಂದಾಜು 8 ರಿಂದ 10 ಕೆ.ಜಿ. ತೂಗುವ ಕಾಳಿಂಗ ಸರ್ಪ ದೊಪ್ಪನೆ ಮರದ ರೆಂಬೆಯೊಂದಿಗೆ ಕೆಳಕ್ಕೆ ಬಿತ್ತು. ಈ ಹಂತದಲ್ಲಿ ಉರಗ ತಜ್ಞ ಬೋಸ್ ಅವರು ಉಪಾಯದಿಂದ ಕಾಳಿಂಗನನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. ಸುಮಾರು 3 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಸಾಧು ಜೀವಿ ಕಾಳಿಂಗ ಉರಗ ತಜ್ಞರ ಬಂಧಿಯಾಯಿತು.
ಈ ಕುರಿತು ಮಾಹಿತಿ ನೀಡಿದ ಉರಗ ತಜ್ಞ ಸ್ನೇಕ್ ಸತೀಶ್, ಬೇಸಗೆಯಲ್ಲಿ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ವಿರಳ. ಅದರಲ್ಲೂ ಕುಂದ ಗ್ರಾಮದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಕಾಳಿಂಗ ಗೋಚರವಾಗಿರಲಿಲ್ಲ. ಮಳೆಗಾಲದಲ್ಲಿ ಮಾತ್ರ ಸಾಮಾನ್ಯವಾಗಿ ಕಾಳಿಂಗ ಗೋಚರವಾಗುತ್ತದೆ. ಪ್ರಾಯಶಃ ಆಹಾರವನ್ನು ಅರಸಿ ಬಂದಿರಬಹುದು. ಹಲವು ಮಂದಿ ಸೆರೆಯಾದ ಕಾಳಿಂಗನನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸುವ ಮೂಲಕ ಆನಂದಿಸಿದರು.
ಸ್ಥಳದಲ್ಲಿ ಜಿ.ಪಂ. ಸದಸ್ಯ ಕೊಡಂದೇರ ಗಣಪತಿ ಅವರೂ ಉರಗ ತಜ್ಞರ ಸಾಹಸವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಜೆ ಸುಮಾರು 6 ಗಂಟೆಗೆ ಮಾಕುಟ್ಟ ವನ್ಯಜೀವಿ ವಲಯಕ್ಕೆ ಕಾಳಿಂಗನನ್ನು ಬಿಡುಗಡೆಗೊಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

