ಕೊಡಗು

ಕೊಡಗಲ್ಲೇ ಇದ್ದಾರಾ ಸ್ಪೀಕರ್ ಬೋಪಯ್ಯ?

Published On :

ಮಡಿಕೇರಿ: ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ನೇಪಾಳಕ್ಕೆ ಹೋಗಿಲ್ಲ... ಕೊಡಗಿನಲ್ಲಿಯೇ ಇದ್ದಾರೆ ಎಂಬ ವದಂತಿಗಳು ಬುಧವಾರ ಇಡೀ ದಿನ ಜಿಲ್ಲೆಯಾದ್ಯಂತ ಹಬ್ಬಿತ್ತು!
 ವಿಧಾನಸಭಾಧ್ಯಕ್ಷರನ್ನು ಮಧ್ಯಾಹ್ನದಿಂದಲೇ ಹುಡುಕಾಡುತ್ತಿದ್ದ ರಾಜ್ಯ ಕೆಜೆಪಿ ನಾಯಕರಂತೂ ಬೋಪಯ್ಯ ಕೊಡಗು ಬಿಟ್ಟು ಹೊರೆಗೆಲ್ಲೂ ಹೋಗಿಲ್ಲ ಎಂಬ ಅನುಮಾನದಿಂದ ಕೊಡಗಿನ ತಮ್ಮ ಸಂಪರ್ಕಗಳ ಮೂಲಕ ಬೋಪಯ್ಯ ಹುಡುಕಾಟದ ಕಾರ್ಯಾಚರಣೆ ನಡೆಸಿದ್ದರು. ಬೋಪಯ್ಯ ಅವರ ಮಡಿಕೇರಿ ನಿವಾಸ ಸೇರಿದಂತೆ ಹುಟ್ಟೂರು ಕಾಲೂರಿಗೂ ಕೆಲವು ಮಾಧ್ಯಮದವರು ತೆರಳಿ ವಿಧಾನಸಭಾಧ್ಯಕ್ಷರು ಅಲ್ಲಿ ಎಲ್ಲಿಯಾದರೂ ಇದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಆದರೆ ಎಲ್ಲ ಕಡೆಯೂ ಬೋಪಯ್ಯ ಎಲ್ಲಿಗೆ ತೆರಳಿದ್ದಾರೆ ಎಂಬ ನಿಖರ ಮಾಹಿತಿ ದೊರಕಲಿಲ್ಲ.
ಚಾಲಕ ಮಡಿಕೇರಿಯಲ್ಲಿ: ಬೋಪಯ್ಯ ಕಾರು ಚಾಲಕರು ಮಡಿಕೇರಿಯಲ್ಲಿಯೇ ಇದ್ದದ್ದು ಕೂಡ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತು. ಆದರೆ, ವಿಧಾನಸಭಾಧ್ಯಕ್ಷರಿಗೆ ಸೇರಿದ ಸರ್ಕಾರಿ ಕಾರನ್ನು ಬೆಂಗಳೂರಿನಲ್ಲಿ ಸರ್ವಿಸ್‌ಗೆ ಬಿಟ್ಟಿದ್ದು, ಹೀಗಾಗಿ ಸ್ಪೀಕರ್ ಚಾಲಕರು ಮಡಿಕೇರಿಯಲ್ಲಿಯೇ ಇದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿದವು.
ಮಾಹಿತಿ ಇಲ್ಲ-ಕುಂತಿ ಬೋಪಯ್ಯ: ತಮ್ಮ ಪತಿ ಮಂಗಳವಾರ ಸಂಜೆಯೇ ಬೆಂಗಳೂರಿಗೆ ತೆರಳಿದ್ದು, ತನ್ನ ಬಳಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರೇ ವಿನಾ ಬೇರಾವ ಮಾಹಿತಿಯೂ ಇಲ್ಲ ಎಂದು ಬೋಪಯ್ಯ ಪತ್ನಿ ಕುಂತಿ ಬೋಪಯ್ಯ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.
ಗುಜರಾತ್‌ಗೆ ಹೋದರೇ?: ಸ್ಪೀಕರ್ ಬೋಪಯ್ಯ ಅಲ್ಲಿದ್ದಾರೆ... ಇಲ್ಲಿದ್ದಾರೆ... ಬಿಜೆಪಿ ನಾಯಕರ ತೋಟದ ಮನೆಯಲ್ಲಿದ್ದಾರೆ .. ಕಾಟೇಜ್‌ನಲ್ಲಿದ್ದಾರೆ.. ಎಂಬೆಲ್ಲಾ ಸುದ್ದಿಗಳು ದಿನವಿಡೀ ಕಾಡ್ಗಿಚ್ಚಿನಂತೆ ಕೊಡಗಿನಲ್ಲಿ ವ್ಯಾಪಿಸುತ್ತಲೇ ಇದ್ದವು.  
ನೇಪಾಳಕ್ಕೆ ಬೋಪಯ್ಯ ತೆರಳಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಮಾತ್ರ ಬೋಪಯ್ಯ ಹೆಸರಿನಲ್ಲಿದೆಯೇ ವಿನಃ ಬೋಪಯ್ಯ ವಿಮಾನವೇರಿಲ್ಲ ಎಂದೂ ಕೆಜೆಪಿ ಮೂಲಗಳು ಸಂಶಯ ವ್ಯಕ್ತಪಡಿಸುತ್ತಲೇ ಇದ್ದವು.
 ಅಂತೆಯೇ ಬೋಪಯ್ಯ ವಿಮಾನದಲ್ಲಿ ಬಿಜೆಪಿ ಆಡಳಿತದಲ್ಲಿರುವ  ಗುಜರಾತ್‌ಗೂ ತೆರಳಿ ಅಲ್ಲಿ ಕೆಲದಿನಗಳ ಕಾಲ ಬಜೆಟ್ ಮಂಡನೆಯಾಗುವ ಹಿಂದಿನ ದಿನದವರೆಗೂ ಇರುತ್ತಾರೆ ಎಂಬ ಸುದ್ದಿಗಳೂ ತೇಲಾಡಿದವು.
ಹೇಳಿ ಹೋಗಿಲ್ಲ ಸ್ವಾಮಿ...: ನೇಪಾಳಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಮುಖರು ಹೇಳುತ್ತಲೇ ಇದ್ದರೂ ನಿಮಗೆ ನಿಖರವಾಗಿ ಗೊತ್ತೇ? ಎಂದರೆ ತಮಗೆ ಹೇಳಿ ಹೋಗಿಲ್ಲ ಎಂಬ ಉತ್ತರ ಲಭ್ಯವಾಯಿತು. ಬಿಜೆಪಿಯ ನಾಯಕರೂ ಬೋಪಯ್ಯ ಅವರೆಲ್ಲಿದ್ದಾರೆ ಎಂಬ ಬಗ್ಗೆ ಕುತೂಹಲ ವ್ಯಕ್ತಪಡಿಸಿ ಮಾಧ್ಯಮದವರನ್ನೇ ಈ ಬಗ್ಗೆ ಪ್ರಶ್ನಿಸಿದರು. ಒಟ್ಟಿನಲ್ಲಿ ಬೋಪಯ್ಯ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ನಿಖರ ಉತ್ತರ ದೊರಕಲೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.