ಕೊಡಗು

ಕಾವೇರುತ್ತಿದೆ ಕಾವೇರಿ ತಾಲೂಕು ಹೋರಾಟ

Published On :

ಮಡಿಕೇರಿ: ರಾಜ್ಯ ಸರ್ಕಾರ ಹೊಸದಾಗಿ 43 ತಾಲೂಕು ರಚನೆಗೆ ಮುಂದಾಗಿರುವಂತೆಯೇ ಕೊಡಗಿನಲ್ಲಿ ಹಳೇ ಬೇಡಿಕೆಯಾಗಿದ್ದ ಕಾವೇರಿ ತಾಲೂಕು, ನಾಪೋಕ್ಲು ಮತ್ತು ಪೊನ್ನಂಪೇಟೆ ತಾಲೂಕು ರಚನೆ ಪ್ರಸ್ತಾಪವೇ ಇಲ್ಲದಿರುವುದು ಈ ವ್ಯಾಪ್ತಿ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಬುಧವಾರ ಕುಶಾಲನಗರ ಬಂದ್‌ಗೆ ಹೋರಾಟ ಸಮಿತಿ ಕರೆ ನೀಡುತ್ತಿರುವಂತೆಯೇ ಇದು ರಾಜಕೀಯ ತಿರುವಿಗೂ ಕಾರಣವಾಗಿದೆ.
ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಬುಧವಾರ ಕುಶಾಲನಗರ ಬಂದ್‌ಗೆ ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದೆ. ಆದರೆ ಈ ಬಂದ್ ಅನ್ನು ಬಿಜೆಪಿ ವಿರೋಧಿಸಿದ್ದು, ತಾಲೂಕು ರಚನೆಗೆ ತನ್ನ ಬೆಂಬಲ ಇದೆಯಾದರೂ ಬಂದ್ ಕರೆ ರಾಜಕೀಯ ಪ್ರೇರಿತವಾಗಿದ್ದು ಈ ಹಿನ್ನಲೆಯಲ್ಲಿ ಬಂದ್ ವಿರೋಧಿಸುತ್ತಿರುವುದಾಗಿ ಬಿಜೆಪಿ ಪ್ರಮುಖರು ಹೇಳಿದ್ದಾರೆ.
ಗುಂಡೂರಾವ್ ಕನಸಿನ ಕೂಸು: ಕಾವೇರಿ ತಾಲೂಕು ರಚನೆಯ ಪ್ರಸ್ತಾಪಕ್ಕೆ ಹಲವು ವರ್ಷಗಳ ಸುದೀರ್ಘ ಇತಿಹಾಸವಿದೆ. ಕುಶಾಲನಗರದವರೇ ಆಗಿದ್ದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕನಸಿನ ಕೂಸೇ ಈ ಕಾವೇರಿ ತಾಲೂಕು. ಕಾವೇರಿ ನದಿ ಹರಿಯುವ ಕುಶಾಲನಗರ ಮತ್ತು ಪಕ್ಕದ ಪಿರಿಯಾಪಟ್ಟಣ ವ್ಯಾಪ್ತಿಯ ಗ್ರಾ.ಪಂ.ಗಳನ್ನು ಒಟ್ಟು ಸೇರಿಸಿ ಹೊಸದಾಗಿ ಕಾವೇರಿ ತಾಲೂಕು ರಚಿಸಬೇಕೆಂಬ ಉದ್ದೇಶ ಗುಂಡೂರಾವ್ ಅವರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಇತ್ತು. ಈ ಸಂಬಂಧಿತ ಬೆಂಗಳೂರು ಮತ್ತು ಕುಶಾಲನಗರಗಳಲ್ಲಿ ಗುಂಡೂರಾವ್ ಅಧಿಕಾರವಧಿಯಲ್ಲಿಯೇ ಕೆಲವು ಸಭೆಗಳೂ ನಡೆದಿದ್ದವು. ರಾಯರು ಅಕಾಲಿಕ ನಿಧನಹೊಂದಿದ ಬಳಿಕ ಕಾವೇರಿ ತಾಲೂಕು ಬೇಡಿಕೆ ಕೆಲ ವರ್ಷ ನನೆಗುದಿಗೆ ಬಿತ್ತು. ತರುವಾಯ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದ ಸಂದರ್ಭ ಅವರು ಭಾಗಮಂಡಲಕ್ಕೆ ಬಂದ ಸಂದರ್ಭ ಕುಶಾಲನಗರದ ಕೆಲವು ಪ್ರಮುಖರು ಭೇಟಿಯಾಗಿ ಕಾವೇರಿ ತಾಲೂಕಿನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಕಾವೇರಿ ತಾಲೂಕು ಹೋರಾಟ ಸಮಿತಿಗೆ ಯುವ ಹೋರಾಟಗಾರ ವಿ.ಪಿ. ಶಶಿಧರ್ ಅವರನ್ನು ಆಯ್ಕೆ ಮಾಡಲಾಯಿತು. ಕಾಲಾನಂತರದಲ್ಲಿ ಶಶಿಧರ್ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಪ್ರಸ್ತುತ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದಾರೆ.
ಜೆ.ಎಚ್. ಪಟೇಲ್ ಕಾವೇರಿ ತಾಲೂಕು ರಚನೆಗೆ ಒಲವು ಹೊಂದಿದ್ದರು. ನಂತರ ಶ್ರೀಕಂಠಯ್ಯ ರಾಜ್ಯ ಕಂದಾಯ ಸಚಿವರಾದ ಸಂದರ್ಭವೂ ರಾಜ್ಯದಲ್ಲಿ ಹೊಸ ತಾಲೂಕು ರಚನೆ ಪ್ರಸ್ತಾಪ ಬಂದಾಗಲೂ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಗೆ ಪ್ರಸ್ತಾಪ ಗರಿಗೆದರಿತ್ತು. ಕುಮಾರಸ್ವಾಮಿ- ಯಡಿಯೂರಪ್ಪ ಸಮ್ಮಿಶ್ರ ಸರ್ಕಾರಕ್ಕೆ ಕೂಡ ಕಾವೇರಿ ತಾಲೂಕು ಹೋರಾಟ ಸಮಿತಿ ನಿಯೋಗ ತೆರಳಿ ತಾಲೂಕಿಗಾಗಿ ಆಗ್ರಹಿಸಿತ್ತು. ಈ ಸಂದರ್ಭ ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ್ ನೇತೃತ್ವದ ಸಮಿತಿ ರಾಜ್ಯದ ವಿವಿಧೆಡೆ ತೆರಳಿ ಹೊಸ ತಾಲೂಕು ರಚನೆ ಪ್ರಸ್ತಾಪ ವರದಿ ಸಲ್ಲಿಸಿತ್ತಾದರೂ ಕುಶಾಲನಗರ ಮತ್ತು ಪೊನ್ನಂಪೇಟೆಗೆ ಈ ಸಮಿತಿ ಬರಲೇ ಇಲ್ಲ.
ಡೀವಿ ಸಿಎಂ ಆದಾಗ ಮತ್ತೆ ಚಾಲನೆ: ಕುಶಾಲನಗರದ ಅಳಿಯ ಸದಾನಂದಗೌಡ ಮುಖ್ಯಮಂತ್ರಿಯಾದ ಕಳೆದ ವರ್ಷ ಮತ್ತೆ ಕಾವೇರಿ ತಾಲೂಕು ರಚನೆ ಪ್ರಸ್ತಾಪಕ್ಕೆ ಚಾಲನೆ ಬಂತು. ಸದಾನಂದ ಗೌಡ ಅವರ ಬಳಿಯೂ ಮನವಿ ಸಲ್ಲಿಸಲಾಯಿತು. ಆದರೆ ಈವರೆಗೂ ಹೊಸ ತಾಲೂಕುಗಳು ಮಾತ್ರ ಕೊಡಗಿನ ಪಾಲಿಗೆ ದೊರಕಲಿಲ್ಲ. ಇದರಿಂದಾಗಿ ಕಾವೇರಿ ತಾಲೂಕು ರಚಿಸಬೇಕು ಎಂಬ ಹಳೇ ಬೇಡಿಕೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಪೊನ್ನಂಪೇಟೆ ಎಂಬ ಮತ್ತೊಂದು ಹೊಸ ತಾಲೂಕು ರಚಿಸಬೇಕೆಂಬ ಆಶಯ ಈಡೇರಲೇ ಇಲ್ಲ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಬಜೆಟ್‌ನಲ್ಲಿ ರಾಜ್ಯವ್ಯಾಪಿ 43 ಹೊಸ ತಾಲೂಕು ರಚಿಸುವುದಾಗಿ ಹೇಳಿದ್ದು ಈ ಪೈಕಿ ಕೊಡಗಿನಲ್ಲಿ ಹೊಸ ತಾಲೂಕುಗಳ ಪ್ರಸ್ತಾಪವೇ ಇಲ್ಲ.
ತಾಲೂಕು ರಚನೆಗೆ ಬೇಕಾದ ಜನಸಂಖ್ಯೆಯೂ ಇದೆ: ಹೊಸ ತಾಲೂಕು ರಚನೆಗೆ ಜನಸಂಖ್ಯೆ ನಿಗದಿತ ಪ್ರಮಾಣದಲ್ಲಿ ಅಗತ್ಯ ಎಂಬುದು ಸರ್ಕಾರದ ವಾದ. ಆದರೆ 1.30 ಲಕ್ಷ ಜನಸಂಖ್ಯೆಯುಳ್ಳ ಕುಶಾಲನಗರ ವ್ಯಾಪ್ತಿಯ 20 ಗ್ರಾಪಂಗಳನ್ನು ತಾಲೂಕು ರಚನೆಗೆ ನಿರ್ಲಕ್ಷಿಸಿರುವ ಸರ್ಕಾರ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಅನೇಕ ಪ್ರದೇಶಗಳನ್ನು ಹೊಸ ತಾಲೂಕು ರಚನೆಯ ಪಟ್ಟಿಗೆ ಸೇರಿಸಿದೆ. ಈಗಾಗಲೇ ರಚಿಸಲ್ಪಟ್ಟಿರುವ ಶೃಂಗೇರಿ, ಯಳಂದೂರು ತಾಲೂಕುಗಳಲ್ಲಿ ಇನ್ನೂ 1 ಲಕ್ಷ ಜನಸಂಖ್ಯೆಯೇ ಇಲ್ಲ. ಹೀಗಿರುವಾಗ ಕಾವೇರಿ ತಾಲೂಕು ರಚನೆಗೆ ಮುಂದಾದರೆ ಸರ್ಕಾರ ಕಳೆದುಕೊಳ್ಳುವುದೇನು ಎಂಬುದು ಹೋರಾಟಗಾರರ ಪ್ರಶ್ನೆ.
ಕಾವೇರಿ ತಾಲೂಕು ಎಂಬ ಹೆಸರು ನೀಡಿ ವ್ಯಾಪ್ತಿಯನ್ನು ಗುರುತಿಸಿ, ನಕಾಶೆ ರಚಿಸಿ ಅತ್ಯಂತ ವ್ಯವಸ್ಥಿತವಾಗಿ ತಾಲೂಕು ರಚನೆಗೆ ರೂಪುರೇಷೆ ತಯಾರಿಸಿದ ಏಕೈಕ ಉದಾಹರಣೆ ಕುಶಾಲನಗರ ಹೋರಾಟ ಸಮಿತಿಗೆ ಸಲ್ಲುತ್ತದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ 'ಕನ್ನಡಪ್ರಭ'ದೊಂದಿಗೆ ಹೇಳಿದರು.
ಇಂದು ಬಂದ್: ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಫೆ.13 ರಂದು ಬುಧವಾರ ಕುಶಾಲನಗರ ಬಂದ್‌ಗೆ ಕರೆ ನೀಡಿದೆ. ಚೇಂಬರ್ ಆಫ್ ಕಾಮರ್ಸ್ ಕೂಡ ಬಂದ್‌ಗೆ ಬೆಂಬಲ ನೀಡಿದೆ. ರಾಜಕೀಯ ಹಿನ್ನಲೆಯಲ್ಲಿ ಬುಧವಾರದ ಬಂದ್‌ಗೆ ಅಡ್ಡಿಪಡಿಸಲು ಬಿಜೆಪಿ ಮುಂದಾಗಿದೆ ಎಂಬುದೂ ಶಶಿಧರ್ ಆರೋಪ.
ಒಟ್ಟಿನಲ್ಲಿ, ಕಾವೇರಿ ತಾಲೂಕು ಹೋರಾಟಕ್ಕೆ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದ ಕಾವೇರಿ ತೀರದ ಜನತೆ ಇದೀಗ ತಾಲೂಕು ರಚನೆಯ ಪ್ರಸ್ತಾಪವೂ ರಾಜಕೀಯ ತಿರುವು ಪಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗಿನಲ್ಲಿ ಯಾವುದೇ ಹೋರಾಟಗಳು ನಡೆದರೂ ಆರಂಭದ ಉತ್ಸಾಹ, ಛಲ ಅನಂತರದ ದಿನಗಳಲ್ಲಿ ರಾಜಕೀಯ ತಿರುವು ಪಡೆದು ತನ್ನ ದಿಕ್ಕನ್ನೇ ಬದಲಿಸುತ್ತಾ ಮೂಲ ಉದ್ದೇಶವನ್ನೇ ಮರೆ ಮಾಚುವುದು ಇತಿಹಾಸ. ಇದಕ್ಕೆ ಕಾವೇರಿ ತಾಲೂಕು ರಚನೆಯ ಹೋರಾಟ ಕೂಡ ಸೇರ್ಪಡೆಯಾದಂತಿದೆ.

ಜನಸಂಖ್ಯೆ ಆಧಾರ ಮಾನದಂಡವೇ?
ಕೊಡಗಿನಲ್ಲಿ ಪೊನ್ನಂಪೇಟೆ ಮತ್ತು ನಾಪೋಕ್ಲುಗಳಿಗೂ ಪ್ರತ್ಯೇಕ ತಾಲೂಕು ರಚನೆಯಾಗಬೇಕೆಂಬ ಪ್ರಸ್ತಾಪ ಬಹಳ ಹಿಂದಿನಿಂದಲೂ ಇದೆ. ಕೊಡಗು ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹೋಬಳಿಯಾಗಿರುವ ನಾಪೋಕ್ಲು ಮಡಿಕೇರಿ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಪಂನ್ನೂ ಹೊಂದಿದೆ. ಹೀಗಿರುವಾಗ ಪೊನ್ನಂಪೇಟೆ ಮತ್ತು ನಾಪೋಕ್ಲು ಗ್ರಾಮ ವ್ಯಾಪ್ತಿಗಳನ್ನು ಒಗ್ಗೂಡಿಸಿ ಹೊಸ ತಾಲೂಕು ರಚಿಸಬೇಕೆಂಬ ಪ್ರಸ್ತಾಪವಿದೆ. ಆದರೆ ಹೊಸ ತಾಲೂಕು ರಚನೆ ಜನಸಂಖ್ಯೆ ಆಧಾರದಲ್ಲಿ ನಡೆಯುವುದರಿಂದಾಗಿ ಕೊಡಗಿನಲ್ಲಿ ಹೊಸ ತಾಲೂಕು ರಚನೆಗೆ ಅಗತ್ಯ ಜನಸಂಖ್ಯೆಯಿಲ್ಲ ಎಂಬುದು ಸರ್ಕಾರದ ವಾದ. ಜನಸಂಖ್ಯೆ ಪರಿಗಣನೆಯಿಂದಾಗಿಯೇ ಈ ಹಿಂದೆ ಮೂರು ವಿಧಾನಸಭಾ ಕ್ಷೇತ್ರಗಳಿದ್ದ ಕೊಡಗಿಗೆ ಇತ್ತೀಚಿಗೆ ಎರಡೇ ವಿಧಾನಸಭಾ ಕ್ಷೇತ್ರಗಳನ್ನು ದೊರಕಿದ್ದು ಗಮನಾರ್ಹ. ಜನಸಂಖ್ಯೆ ಆಧಾರದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ದೊರಕದೇ ಮೊದಲು ಮಂಗಳೂರು ಇತ್ತೀಚಿಗೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕೊಡಗನ್ನು ಸೇರ್ಪಡೆಗೊಳಿಸಲಾಗಿದೆ.

ಕಾವೇರಿ ತಾಲೂಕಿಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ಹೋರಾಟವನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಪಕ್ಷಾತೀತವಾಗಿ ನಡೆಯುತ್ತಿದ್ದ ಕಾವೇರಿ ತಾಲೂಕು ಹೋರಾಟವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿಯೇ ಬಿಜೆಪಿ ಬಂದ್‌ಗೆ ಬೆಂಬಲ ನೀಡುತ್ತಿಲ್ಲ.
- ಚರಣ್, ಕುಶಾಲನಗರ ಬಿಜೆಪಿ ಅಧ್ಯಕ್ಷ

ನನ್ನ ಸ್ವಾರ್ಥಕ್ಕೋಸ್ತರ ಹೋರಾಟ, ಬಂದ್ ನಡೆಸುತ್ತಿಲ್ಲ. ಅನೇಕ ವರ್ಷಗಳ ಹೋರಾಟಕ್ಕೆ ಮನ್ನಣೆ ಸಿಗದ ಹಿನ್ನಲೆಯಲ್ಲಿ ಬಂದ್‌ಗೆ ಕರೆ ನೀಡಿ ಸರ್ಕಾರವನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ. ಪಕ್ಷಾತೀತ ಹೋರಾಟಕ್ಕೂ ನಾನು ಸಿದ್ದ. ಬೇಕಿದ್ದರೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿ ಕಾವೇರಿ ತಾಲೂಕು ಹೋರಾಟಕ್ಕೆ ಧುಮ್ಮಿಕ್ಕುವೆ. ಜನರಿಗೆ ಒಳ್ಳೆಯದಾಗುವುದಾದರೆ ಹುದ್ದೆ ತ್ಯಜಿಸಲೂ ಸಿದ್ಧ.
- ವಿ.ಪಿ. ಶಶಿಧರ್, ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ.

ಬುಧವಾರ ಬೆಳಗ್ಗ ಕಾವೇರಿ ತಾಲೂಕು ರಚನೆ ಸಂಬಂಧಿತ ಬೆಂಗಳೂರಿನಲ್ಲಿ  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗುತ್ತಿದ್ದೇವೆ. ಇದನ್ನು ಹೋರಾಟ ಸಮಿತಿಯವರಿಗೂ ತಿಳಿಸಿ ಅವರನ್ನೂ ಆಹ್ವಾನಿಸಿದ್ದೇವೆ. ಅವರು ಬಂದರೆ ಸ್ವಾಗತ. ಆಗ ನಾಗರಿಕ ನಿಯೋಗದ ಮೂಲಕ ಮುಖ್ಯಮಂತ್ರಿಗಳ ಭೇಟಿಯಾಗುತ್ತೇವೆ. ಮೊದಲು ಸರ್ಕಾರಕ್ಕೆ ನಿವೇದನೆ ಸಲ್ಲಿಸಬೇಕು. ನಿವೇದಯೇ ಸಲ್ಲಿಸದೇ ಸುಮ್ಮನೆ ಹೋರಾಟಕ್ಕೆ ಮುಂದಾದರೆ ಏನು ಪ್ರಯೋಜನ. ಇದೆಂಥ ಹೋರಾಟ?
- ಜಿ.ಎಲ್. ನಾಗರಾಜ್, ಬಿಜೆಪಿ ತಾಲೂಕು ಹೋರಾಟ ಸಮಿತಿ ಪ್ರಮುಖ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.