'ಅನಂತ' ಪ್ರಯತ್ನದಿಂದ ಪರಿಹಾರ: ಬಿಜೆಪಿ
ಜಮ್ಮಾ ಬಾಣೆ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಕ್ಷಾತೀತವಾದ ಚಿಂತನೆಯಿಂದ ಅಂಕಿತ ಹಾಕುವ ಮೂಲಕ ಕಳೆದ ಹಲ ದಶಕಗಳಿಂದ ಕೊಡಗಿನ ಭೂ ಹಿಡುವಳಿದಾರರು ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗೆ ಮುಕ್ತಿ ನೀಡುವ ಮೂಲಕ ಜಿಲ್ಲೆಯ 39 ಸಾವಿರ ಹೆಕ್ಟೇರ್ ಹಿಡುವಳಿದಾರರಿಗೆ ಮಾಲೀಕತ್ವ ಸಿಕ್ಕಿದೆ ಎಂದು ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಮ್ಮಾ ಸಮಸ್ಯೆಗೆ ಶಾಶ್ವತ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರ ಪ್ರಯತ್ನದೊಂದಿಗೆ ಪಕ್ಷಾತೀತವಾಗಿ ಕೈ ಜೋಡಿಸಿದ ಸರ್ವ ಪಕ್ಷಗಳ ಮುಖಂಡರಿಗೆ ಈ ಸಂದರ್ಭ ಅಭಿನಂದನೆ ಸಲ್ಲಿಸಿದರು.
ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಮ್ಮಾ ಬಾಣೆ ಇತ್ಯರ್ಥದ ಪ್ರಯತ್ನವಾಗಿ ಕರ್ನಾಟಕ ರಾಜ್ಯ ಭೂ ಕಂದಾಯ ಕಾಯ್ದೆಯ 3ನೇ ತಿದ್ದುಪಡಿಯ ವಿಧೇಯಕ ಮಂಡಿಸಿದಾಗ ಎಲ್ಲಾ ಪಕ್ಷದ ಪ್ರಮುಖರು ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುವುದರೊಂದಿಗೆ, ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಸ್ಮರಿಸಿದ ಬಿ.ಡಿ. ಮಂಜುನಾಥ್, ಈ ಹಂತದಲ್ಲಿ ರಾಜ್ಯಪಾಲರು, ತಮ್ಮ ಮಿತಿಯನ್ನು ಮೀರಿದೆಯೆಂದು ಕಾರಣ ನೀಡಿ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ವಿಧೇಯಕ ಅಂಗೀಕಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿದ್ದರ ಪರಿಣಾಮ ಸಮಸ್ಯೆ ಬಗೆಹರಿದಿದೆ ಎಂದು ಅಭಿಪ್ರಾಯುಪಟ್ಟರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರ ಸ್ವೀಕಾರ ಮಾಡಿ ಆರಂಭದಲ್ಲಿ ಜಮ್ಮಾ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿತ್ತು. ಇದೀಗ ಈ ಹಿಂದೆ ನುಡಿದಂತೇ ಬಿಜೆಪಿ ಸರ್ಕಾರ ನಡೆದುಕೊಂಡಿದೆ. ಜಮ್ಮಾ ಸಮಸ್ಯೆ ಇತ್ಯರ್ಥಕ್ಕೆ ಕಾರಣರಾದ ವಿಪಕ್ಷಗಳ ಪ್ರಮುಖರಾದ ಎಚ್.ಡಿ. ರೇವಣ್ಣ, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಪ್ರಮುಖರಿಗೆ ಧನ್ಯವಾದಗಳನ್ನು ಬಿಜೆಪಿ ಸಲ್ಲಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಜಿಲ್ಕೃಷ್ಣನ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

