ಹಾವೇರಿ

ನೀರಿಲ್ಲದೆ ತಿಂಗಳಾಯ್ತು

Published On :

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಜನತೆ ಕಳೆದ ಒಂದು ತಿಂಗಳಲ್ಲಿ ನಗರಸಭೆಯಿಂದ ಪೂರೈಕೆಯಾಗುವ ನೀರನ್ನು ಕಂಡದ್ದು ಒಮ್ಮೆ ಮಾತ್ರ. ಅದೂ ಒಂದು ಗಂಟೆ ಕಾಲ. ಅಂದರೆ ಸರಾಸರಿ ದಿನವೊಂದಕ್ಕೆ ಒಂದು ನಿಮಿಷ.
ಇದು ಆಶ್ಚರ್ಯವಾದರೂ ಸತ್ಯ. ಕಡು ಬೇಸಿಗೆಯಲ್ಲಿ ಕೂಡ ನಗರಸಭೆಯಿಂದ ನೀರು ಪೂರೈಕೆಯಾಗದಿದ್ದರೂ ಹಾವೇರಿ ಜನತೆ ಸುಮ್ಮನಿರುವುದನ್ನು ಗಮನಿಸಿದರೆ ಇಲ್ಲಿಯವರ ಸಹನಾ ಶಕ್ತಿ ಎಷ್ಟು ಎಂಬುದು ಅರಿವಿಗೆ ಬರುತ್ತದೆ. ಏಪ್ರಿಲ್ ಮೊದಲ ವಾರದಿಂದ ತಿಂಗಳ ಮಧ್ಯದವರೆಗೂ ವಾರ್ಡ್‌ವಾರು ನೀರು ಪೂರೈಕೆಯಾಗಿದ್ದೇ ಕೊನೆ. ಆಮೇಲೆ ಮತ್ತೊಂದು ಪಾಳಿ ಬರಲೇ ಇಲ್ಲ. ಒಂದು ತಿಂಗಳಿಂದ ನಗರಸಭೆ ನೀರು ಪೂರೈಸುವ ನಲ್ಲಿಗಳು ಒಣಗಿ ನಿಂತಿವೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಬತ್ತಿದೆ. ಜನ ಬಿಸಿಲ ಝಳಕ್ಕೆ ಬಸವಳಿದು, ನೀರಿಗಾಗಿ ಕಾದು ಸುಸ್ತಾಗಿದ್ದಾರೆ. ನಗರಸಭೆಗೆ ಹಿಡಿಶಾಪ ಹಾಕುತ್ತ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ, ನಗರಸಭೆ ಮಾತ್ರ ಸಬೂಬು ಹೇಳುತ್ತಲೇ ದಿನ ನೂಕುತ್ತಿದೆ.
ನಗರಸಭೆ ನಿದ್ರಿಸುತ್ತಿದೆಯೇ?: ಯಾವುದೇ ನಗರದಲ್ಲಾದರೂ ಇಷ್ಟು ದಿನದವರೆಗೆ ನೀರು ಪೂರೈಕೆಯಾಗದಿದ್ದರೆ ಪರಿಸ್ಥಿತಿಯೇ ಬೇರೆಯೇ ಆಗಿರುತ್ತಿತ್ತು. ಆದರೆ, ಇಲ್ಲಿನ ನಗರಸಭೆಯ ಜಿಡ್ಡುಗಟ್ಟಿದ ವಾತಾವರಣ, ದಪ್ಪ ಚರ್ಮದ ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ನಾಗರಿಕರು ಬೀದಿಗಿಳಿದಿಲ್ಲ. ಬಿಜೆಪಿಯಿಂದ ಹೆದ್ದಾರಿ ತಡೆ, ಇಜಾರಿ ಲಕಮಾಪುರದ ಜನರ ಪ್ರತಿಭಟನೆ ಹೊರತಾಗಿ ಜನರು ನೀರಿಗಾಗಿ ಧ್ವನಿ ಎತ್ತುವುದನ್ನೇ ಮರೆತಿದ್ದಾರೆ. ಜನರ ಸಹನೆಯನ್ನು ದೌರ್ಬಲ್ಯ ಎಂದು ನಗರಸಭೆ ಅಧಿಕಾರಿಗಳು ತಿಳಿದುಕೊಂಡಂತಿದೆ. ತಾಲೂಕಿನ ಕರ್ಜಗಿ ಹಾಗೂ ಕಂಚಾರಗಟ್ಟಿ ಬಳಿ ಜಾಕ್‌ವೆಲ್‌ಗಳಿದ್ದು, ತುಂಗಭದ್ರಾದಿಂದ ನಗರಕ್ಕೆ ನೀರು ಪೂರೈಸುವ ಪಂಪ್ ಕೆಟ್ಟು ಜನರಿಗೆ ಈ ದುಸ್ಥಿತಿ ಬಂದಿದೆ. ದುರಸ್ತಿಗಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದ್ದರೂ ಜನರಿಗೆ ನೀರು ಸಿಗುತ್ತಿಲ್ಲ.
ಟ್ಯಾಂಕರ್ ಅವಲಂಬನೆ: ನಗರಸಭೆಯಿಂದ ಈ ಹಿಂದೆ ವಾರಕ್ಕೆ, 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಆದರೆ, ಬೇಸಿಗೆ ಶುರುವಾಗುತ್ತಿದ್ದಂತೆ ಈ ಅವಧಿ ದ್ವಿಗುಣಗೊಳ್ಳತೊಡಗಿತು. ಕಡು ಬೇಸಿಗೆ ಆರಂಭವಾದಾಗಿನಿಂದ ನೀರು ಪೂರೈಕೆಯೇ ಬಂದ್ ಆಯಿತು. ನಗರದ ಖಾಸಗಿ ಹಾಗೂ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಬಹುತೇಕ ಈಗ ಬತ್ತಿವೆ. ಕೆಲವು ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಲ್ಲದ ಸವಳು ನೀರು ಬರುತ್ತಿದೆ. ಜನ ಅನಿವಾರ್ಯವಾಗಿ ಟ್ಯಾಂಕರ್‌ಗಳಿಂದ ನೀರು ತರಿಸಿಕೊಳ್ಳುತ್ತಿದ್ದಾರೆ. ಪ್ರತಿ ಟ್ಯಾಂಕರ್‌ಗೆ ರು.300 ನೀಡಿ ನೀರು ಪಡೆಯುತ್ತಿದ್ದಾರೆ. ನಗರದಲ್ಲಿ 50ಕ್ಕೂ ಹೆಚ್ಚು ನೀರು ಪೂರೈಸುವ ಟ್ಯಾಂಕರ್ ವಾಹನಗಳಿದ್ದು, ನಿತ್ಯ 400ಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ಸಾರ್ವಜನಿಕರು ತರಿಸಿಕೊಳ್ಳುತ್ತಿದ್ದಾರೆ.
ಹೀಗಾದ್ರೆ ಹ್ಯಾಗೆ ಶಿವಾ?: ನಗರಸಭೆಗೆ ಶಿವಕುಮಾರಯ್ಯ ಆಯುಕ್ತರಾಗಿ ಬಂದಾಗ ಜನತೆ ಅವರ ಮೇಲೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದರು. ಆರಂಭದಲ್ಲಿ ಅವರು ಕೈಗೊಂಡ ಕೆಲ ಕ್ರಮಗಳಿಂದ ದಕ್ಷ ಆಡಳಿತ ನಿರೀಕ್ಷಿಸಿದ್ದರು. ಆದರೆ, ಬೇಸಿಗೆ ಬಿದ್ದು ನೀರಿಗಾಗಿ ಹಾಹಾಕಾರ ಎದ್ದರೂ ನೀರು ಪೂರೈಸಲು ಅವರಿಂದ ಸಾಧ್ಯವಾಗಲಿಲ್ಲ. ಜಾಕ್‌ವೆಲ್‌ನಲ್ಲಿ ಪಂಪ್ ದುರಸ್ತಿ, ಪೈಪ್‌ಲೈನ್ ಒಡೆದಿದ್ದಾರೆ, ಪೈಪ್‌ಲೈನ್ ಮಾರ್ಗದಲ್ಲಿ ಗಾಳಿ ಹೋಗುವ ವ್ಯವಸ್ಥೆ ಇಲ್ಲದ್ದರಿಂದ ಪಂಪ್ ಮೇಲೆ ಒತ್ತಡ ಬೀಳುತ್ತಿದೆ. ಇದರಿಂದ ಪಂಪ್ ಪದೇಪದೇ ದುರಸ್ತಿಗೆ ಬರುತ್ತಿದೆ ಇತ್ಯಾದಿ ಸಬೂಬುಗಳೇ ಅವರಿಂದ ಬರುತ್ತಿವೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವಾಗಿಲ್ಲ. ಜನರಿಗೆ ನೀರು ಬೇಕೆ ಹೊರತು ಪಂಪ್ ಕೆಟ್ಟಿರುವುದಕ್ಕೆ ಕಾರಣವಲ್ಲ. ಜನರಿಂದ ಸರಿಯಾಗಿ ತೆರಿಗೆ ಹಣ ಪಡೆಯುವ ನಗರಸಭೆ ಅವರಿಗೆ ನೀರು ಪೂರೈಸುವಲ್ಲಿ ಮಾತ್ರ ಹಿಂದಕ್ಕೆ ಬೀಳುತ್ತಿದೆ.
ನದಿ ನೀರು ಪೂರೈಕೆಯಾಗದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಜನರ ಜಾತ್ರೆಯೇ ನೆರೆದಿರುತ್ತದೆ. ಮಹಿಳೆಯರು, ಪುರುಷರೆನ್ನದೆ ನೀರು ತರುವುದೆ ಅನೇಕರ ನಿತ್ಯದ ಕಾಯಕವಾಗಿದೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ತುರ್ತು ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವುದು ನಗರದ ಜನತೆಯ ದೌರ್ಭಾಗ್ಯ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.