ಹಾವೇರಿ

ಯುವ ಮೋರ್ಚಾದಿಂದ ಮೊಂಬತ್ತಿ ಮೆರವಣಿಗೆ

Published On :

ಹಾವೇರಿ: ಮೇ 1ರಂದು ಬಾಂಬೆ-ಗುಹಾವಟಿ ರೈಲಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಸ್ವಾತಿ ಪರಚುರಿ ಅವರ ಆತ್ಮಕ್ಕೆ ಶಾಂತಿ ಕೋರಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೊಂಬತ್ತಿ ಹಚ್ಚಲಾಯಿತು. ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ, ದೇಶದ ಭದ್ರತೆ ಜತೆಗೆ ಆಂತರಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಶಿವಲಿಂಗಪ್ಪ ಕಲ್ಯಾಣಿ, ಪ್ರಕಾಶ ಉಜನಿಕೊಪ್ಪ, ನಾರಾಯಣ ರಾಜನಾಳಕರ, ಸಾಗರ ಅಂಗಡಿ, ಚೇತನ ಕುರುಬಗೊಂಡ, ನಗರಸಭೆ ಸದಸ್ಯರಾದ ಕರಬಸಪ್ಪ ಹಳದೂರ, ಇರ್ಫಾನ್ ಪಠಾಣ, ವರುಣ ಆನವಟ್ಟಿ ಇದ್ದರು.
ನಾಳೆ ದೈಹಿಕ ಪರೀಕ್ಷೆ
ಹಾವೇರಿ: ಜಿಲ್ಲಾ ಪೊಲೀಸ್ ಘಟಕದ 13 ನಾಗರಿಕ ಪೊಲೀಸ್ ಪೇದೆ ಹಾಗೂ 4 ಮಹಿಳಾ ನಾಗರಿಕ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಮೇ 7ರಿಂದ 9ರ ವೆರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ (ಮುನ್ಸಿಪಲ್ ಹೈಸ್ಕೂಲ್ ಹತ್ತಿರ) ಬೆಳಗ್ಗೆ 8 ಗಂಟೆಯಿಂದ ಜರುಗಲಿದೆ ಎಂದು ಜಿಲ್ಲಾ  ಪೊಲೀಸ್ ಅಧೀಕ್ಷಕ ಎನ್.ಶಶಿಕುಮಾರ ತಿಳಿಸಿದ್ದಾರೆ. ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರೆ ಪತ್ರಗಳನ್ನು ಆನ್ಲೈನ್ ಮುಖಾಂತರ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಕರೆಪತ್ರಗಳನ್ನು ಆನ್ಲೈನ್ ಮೂಲಕಲೇ ಪಡೆದುಕೊಂಡು ನಿಗದಿತ ದಿನಾಂಕದಂದು ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಮೂಲ ದಾಖಲಾತಿಗಳೊಂದಿಗೆ ಮತ್ತು ಒಂದು ಸೆಟ್ ದೃಢೀಕೃತ ಪ್ರತಿಗಳೊಂದಿಗೆ ಹಾಜರಾಗಬೇಕು. ಕರೆಪತ್ರದಲ್ಲಿ ಸೂಚಿಸಿದ ಸೂಚನೆಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಪೂರ್ಣವಾಗಿ ಗಣಕೀಕೃತ, ವಸ್ತುನಿಷ್ಠ, ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯಲಿದೆ. ಯಾವುದೇ ಶಿಫಾರಸುಗಳಿಗೆ ಅವಕಾಶವಿರುವುದಿಲ್ಲ. ಯಾವುದೇ ಮಧ್ಯವರ್ತಿಗಳು, ಸಿಬ್ಬಂದಿ, ಅಧಿಕಾರಿಗಳ ಅಮಿಷಕ್ಕೆ ಬಲಿಯಾಗಬಾರದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನಕ್ಕೆ ತರಬೇಕೆಂದು ಕೋರಿದ್ದಾರೆ.
ಇಂದು ಮಾಸಿಕ ಶಿವಾನುಭವ ಗೋಷ್ಠಿ
ಗದಗ:  ನಗರದ ಅಡವೀಂದ್ರ ಮಹಾಸ್ವಾಮಿಗಳ ಮಠದ ಅನ್ನಪೂರ್ಣೇಶ್ವರಿ ಮಠದಲ್ಲಿ ಮೇ 6ರಂದು ಸಂಜೆ 5.30ಕ್ಕೆ 223ನೇ ಮಾಸಿಕ ಶಿವಾನುಭವ ನಡೆಯಲಿದೆ. ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಎಸ್. ಹೊಸಳ್ಳಿಮಠ ಸಾನ್ನಿಧ್ಯ ವಹಿಸುವರು. ಗದಗ ವಿ.ಡಿ.ಎಸ್. ಪ.ಪೂ. ಮಹಾವಿದ್ಯಾಲಯ ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಅವರು ಸಮಕಾಲಿನ ಸಂದರ್ಭದಲ್ಲಿ ವಚನ ಸಾಹಿತ್ಯದ ಮಹತ್ವ ಕುರಿತು ಉಪನ್ಯಾಸ ನೀಡುವರು. ಜಿಲ್ಲಾ ಪ್ರಶಸ್ತಿ ವಿಜೇತ ಕಿತ್ತೂರು ಕರ್ನಾಟಕ ಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಗುವುದು. ವೆಂಕಟೇಶ ಬೇಲೂರ, ಪಾಂಡುರಂಗ ಕುರ್ತಕೋಟಿ ಅವರಿಂದ ಭಕ್ತಿ ಸಂಗೀತವಿದೆ. ಭಕ್ತಿ ಸೇವೆಯನ್ನು ಎಂ.ಎಸ್. ಹುಬಳಿಮಠ ವಹಿಸಿಕೊಂಡಿದ್ದಾರೆ ಎಂದು ಎಸ್.ಬಿ. ಪಲ್ಲೇದ ತಿಳಿಸಿದ್ದಾರೆ.
ಸ್ವಉದ್ಯೋಗದ ಮೂಲಕ ಸ್ವಾವಲಂಬಿಯಾಗಿ
ಶಿಗ್ಗಾಂವಿ: ಮಹಿಳೆಯರು ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸ್ವ-ಉದ್ಯೋಗಗಳನ್ನು ಮಾಡುತ್ತ ಸಿರಿಯಂತಹ ವಸ್ತುಗಳನ್ನು ತಯಾರಿಸಿ ಆರ್ಥಿಕವಾಗಿ ಸದೃಡರಾಗಬಹುದು ಎಂದು ಪಟ್ಟಣದ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಯೋಜನಾಧಿಕಾರಿ ಕೆ. ಸದಾನಂದ, ವಿನ್ಸಂಟ್, ಸಿ.ಡಿ. ಪಾಟೀಲ ಇದ್ದರು. ಗಣೇಶ ನಿರೂಪಿಸಿದರು. ಕೃಷಿ ಅಧಿಕಾರಿ ಗಂಗಮ್ಮ ಸ್ವಾಗತಿಸಿದರು. ಶಿಲ್ಪಾ ಪಾಟೀಲ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.