ರೋಗಕ್ಕೆ ಹೆದ್ದಾರಿಯಾದ ನೀರು
ಶಿಗ್ಗಾಂವಿ: ಪುರಸಭೆ ಪೂರೈಕೆ ಮಾಡುವ ನಳದ ನೀರು ಚರಂಡಿ ನೀರೋ? ಕುಡಿಯುವ ನೀರೋ? ಎಂಬ ಆತಂಕ ಪಟ್ಟಣದ ನಾಗರಿಕರನ್ನು ಕಾಡುತ್ತಿದೆ. ಪುರಸಭೆ ಸರಬರಾಜು ಮಾಡುವ ನೀರು ಕಲ್ಮಶದಿಂದ ಕೂಡಿದ್ದು, ನಿತ್ಯ ಕರ್ಮ ಕಾರ್ಯಗಳಿಗೆ ಬಳಸಲು ಸಹ ಯೋಗ್ಯವಾಗಿಲ್ಲ ಎಂದು ಪಟ್ಟಣದ ಜನತೆ ದಿನನಿತ್ಯ ದೂರುತ್ತಿದ್ದಾರೆ.
ಪುರಸಭೆ ಪೂರೈಕೆ ಮಾಡುತ್ತಿರುವ ಇಲ್ಲಿಯ ನಾಗನೂರು ಕೆರೆ ನೀರನ್ನು ಶುದ್ಧೀಕರಿಸದೆ ಕಾಟಾಚಾರಕ್ಕೆಂಬಂತೆ ಗಬ್ಬು ವಾಸನೆ ಬೀರುವ, ನಳದಿಂದ ಕೊಡಕ್ಕೆ ಬಿದ್ದರೆ ಸಾಕು ಮುಕ್ಕಾಲು ಬಿಳಿ ಬುರಗು ತುಂಬುವ ನೀರನ್ನು ಇಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಿತ್ಯ ಪಟ್ಟಣದಲ್ಲಿ ವಾಂತಿ ಭೇದಿ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.
ಆಸ್ಪತ್ರೆಗೆ ದಾಖಲು: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ವಾಂತಿ, ಭೇದಿ ಪ್ರಕರಣಗಳಲ್ಲಿ ಬಹುಪಾಲು ಜನರಿಗೆ ನೀರಿನ ದೋಷದಿಂದ ಬಂದಿದೆ ಎಂಬುದು ವೈದ್ಯರಿಂದ ದೃಢಪಟ್ಟಿದೆ. ಆದರೂ ಪಟ್ಟಣದ ಜನರಿಗೆ ನಿತ್ಯ ನೀರು ಕುಡಿಸುವ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ತಕ್ಷಣಕ್ಕೆ ಕ್ರಮ ಜರುಗಿಸುವ ಗೋಜಿಗೆ ಮುಂದಾಗುತ್ತಿಲ್ಲ.
ಕಳೆದ ಮಳೆಗಾಲಕ್ಕೂ ಮುನ್ನ ವರದಾ ನದಿಯಿಂದ ಪೂರೈಕೆಯಾದ ನೀರಿನಿಂದ ಅರ್ಧ ಭರ್ತಿಯಾಗಿದ್ದ ನಾಗನೂರು ಕೆರೆ ನಂತರದ ಮಳೆಯಲ್ಲಿ ಸಂಪೂರ್ಣ ತುಂಬಿ ಕೋಡಿ ಬಿದ್ದಿತ್ತು. ಈ ನೀರನ್ನು ನಾಗನೂರು ಕೆರೆಯ ದಡದ ಬೃಹತ್ ಜಲ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧಿಗೊಳಿಸಿ ನಾಗರಿಕರಿಗೆ ಪೂರೈಕೆ ಮಾಡುವತ್ತ ಪುರಸಭೆ ಮುಂದಾಗಿತ್ತು. ಆದರೆ, ಶುದ್ಧಿಕರಣ ಘಟಕದಲ್ಲಿ ಜಲ ಶುದ್ಧೀಕರಣಕ್ಕೆ ಬೇಕಾದ ಅಗತ್ಯ ಯಂತ್ರಗಳು ದುರಸ್ತಿಗೆ ಬಂದು ವರ್ಷಗಳೇ ಗತಿಸಿದರೂ, ಅವುಗಳತ್ತ ಗಮನ ಹರಿಸದೆ, ಶುದ್ಧೀಕರಣಕ್ಕೆ ಬೇಕಾದ ರಾಸಾಯನಿಕವನ್ನು ಬೇಕಾಬಿಟ್ಟಿ ಮಿಶ್ರಣಗೊಳಿಸುವ ಮೂಲಕ ಕಾಟಾಚಾರದ ಶುದ್ಧೀಕರಣಕ್ಕೆ ಪುರಸಭೆ ನಿಂತಿದೆ.
ಸದ್ಯ ಅಲ್ಪ ಸ್ವಲ್ಪ ಮಳೆ ಬಿದ್ದಿದ್ದರಿಂದ ಈಗ ವಾತಾವರಣದಲ್ಲಿ ಏರುಪೇರಾಗಿದ್ದು ಅಲ್ಲದೆ ಸಂಪೂರ್ಣ ಶುದ್ಧಗೊಳ್ಳದ ನೀರನ್ನು ಸೇವಿಸುತ್ತಿರುವ ನಾಗರಿಕರು ಸಲೀಸಾಗಿ ರೋಗಕ್ಕೆ ಎಡೆಯಾಗುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಗಮನಹರಿಸಬೇಕಿದೆ.
ಶುದ್ಧೀಕರಣ ಘಟಕ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೂ ದುರಸ್ತಿ ಕಂಡಿಲ್ಲ. ಯಂತ್ರಗಳೂ ಸೇರಿದಂತೆ ಘಟಕದ ಕಿಟಕಿ, ಬಾಗಿಲು ಕೂಡ ಹಾಳಾಗಿವೆ. ಈ ಕುರಿತು ಅಂದಾಜು ರು. 2.76 ಲಕ್ಷ ಯೋಜನೆ ಸಿದ್ಧಪಡಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ತಿಗೊಳಿಸಿ ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
- ಶ್ರೀಕಾಂತ ಬುಳ್ಳಕ್ಕನವರ,ಅಧ್ಯಕ್ಷರು, ಪುರಸಭೆ, ಶಿಗ್ಗಾಂವಿ
ಶುದ್ಧೀಕರಣ ಘಟಕದಲ್ಲಿ ಯಂತ್ರಗಳು ದುರಸ್ತಿಗೆ ಬಂದಿರುವ ಕಾರಣದಿಂದ ಕಳೆದ ಕೆಲ ದಿನಗಳಿಂದ ಗಡಸು ನೀರು ಪೂರೈಕೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಾಗ ತಕ್ಷಣ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತಾಂತ್ರಿಕ ಅಧಿಕಾರಿಗಳನ್ನು ಕರೆಯಿಸಿ ನೀರನ್ನು ಪರೀಕ್ಷೆಗೆ ಒಳಪಡಿಸಿ ಶುದ್ಧ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುತ್ತಿದೆ.
- ಮಾಲತೇಶ ಅಂಗಡಿ
ಪುರಸಭೆ ಶಿಗ್ಗಾಂವಿ.
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

