ಹಾವೇರಿ

ನೆಲ, ಜಲ, ಭಾಷೆ ಸಂರಕ್ಷಿಸಿ

Published On :

ಬ್ಯಾಡಗಿ: ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತನ್ನ ಎಂದಿನ ಛಾಪನ್ನು ಕಳೆದು ಕೊಳ್ಳುತ್ತಿದೆ. ಹೀಗಾಗಿ ಹೋರಾಟ ಮಾಡಿ ನೆಲ-ಜಲ-ಭಾಷೆಗಳನ್ನು ಸಂರಕ್ಷಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಕನ್ನಡಿಗರಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ, ಹಿರಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಬಸೂರು ಗ್ರಾಮದ ಕಿರವಾಡಿ ವೀರಬಸಪ್ಪ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ತಿರುಳುಗಳನ್ನು ತಿದ್ದುವ ಒಂದು ಪ್ರಯತ್ನವಾಗಿದೆ. ಸಾಹಿತ್ಯ ಎಲ್ಲ ಧರ್ಮದ ಜನರು ಒಂದೇ ವೇದಿಕೆಯಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೊರ ಚೆಲ್ಲುವ ಸಾಮಾಜಿಕ ಕಳಕಳಿ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿ.ಎಸ್. ರಾಮಾಪುರ ಮಾತನಾಡಿ, ಇತ್ತೀಚಿಗೆ ಜನರಲ್ಲಿ ಓದುವ ಹವ್ಯಾಸ ಕುಂಠಿತಗೊಳ್ಳುತ್ತಿದೆ. ಕವಿಗಳು ಜನರ ಮನಸೂರೆಗೊಳ್ಳುವ ಭಾವಾರ್ಥಕ್ಕೆ ಚ್ಯುತಿ ಬರದಂತೆ ಕವನ ರಚನೆಗೆ ಮುಂದಾಗಬೇಕು. ಕವನಗಳಲ್ಲಿ ನಿರ್ದಿಷ್ಟ ಆಶಯ. ತನ್ನದೇ ಆಯಾಮ, ವಿಭಿನ್ನ ಸಂಸ್ಕೃತಿಗಳ ನಡುವಿನ ಸಂಬಂಧ ಬೆಸೆಯುವ ಸಂದೇಶ ಬೀರಬೇಕಲ್ಲದೇ ಕವನಗಳು ಸರಳವಾಗಿ ಜನರ ನಾಲಿಗೆಗಳ ಮೇಲೆ ಹರಿದಾಡುವಂತಿರಬೇಕು ಎಂದರು.
ಕವನಗಳ ಝಲಕ್: ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಕವನಗಳು ಜನಮನ ಸೂರೆಗೊಂಡವು. ಅವುಗಳ ಕೆಲ ತುಣುಕುಗಳು ಇಲ್ಲಿವೆ. ಹಿಂದೂ ಹುಡುಗ ಮುಸ್ಲಿಂ ಹುಡ್ಗಿ ಮದುವೆಯಾದ್ರೆ ಏನಾಗತ್ತೆ.. ಏನೂ ಆಗಲ್ಲ ಗಂಡ ಹೆಂಡತಿ ಆಗ್ತಾರೆ.. ಮಕ್ಕಳು ಆಗ್ತಾವೆ.. ರಾಮನ ಪಕ್ಕ ಅಲ್ಲಾನ ಮೂರ್ತಿ ಇಟ್ಟರೆ ಏನಾಗುತ್ತೆ... ಏನೂ ಆಗಲ್ಲ.. ಭಕ್ತಿ ಹೆಚ್ಚುತ್ತೆ.. ಭಕ್ತರ ಹೆಚ್ಚಾಗ್ತಾರೆ.. ಹಿಂದೂಸ್ಥಾನ ಪಾಕಿಸ್ತಾನ ಒಂದಾದರೆ ಏನಾಗತ್ತೆ.. ಏನೂ ಆಗಲ್ಲ ಶಾಂತಿ ಸ್ವಾಮರಸ್ಯ ಉಂಟಾಗುತ್ತೆ. ನಾರಿ ನಲುಗಿಸಿದರೆ ಉಳಿದಿತೇ ಮನುಕುಲ? ಬೇಲಿ ಎದ್ದು ಹೊಲ ಮೇಯ್ದಾಗ ರಕ್ಷಣೆ ಇನ್ನೆಲ್ಲಿಂದ ತರಲಿ, ನಾಯಾರನ್ನಂಬ್ಲಿ, ತಾಯಿ ಗರ್ಭದ ಚೀಲ ಕಫನ್ ಏಕಾಗ್ಲಿಲ್ಲ, ಬಯಲಲ್ಲಿ ನಿಂತು ಅಮ್ಮ ನಾ ಯಾರನ್ನ ಕೂಗ್ಲಿ, ನಮ್ಮಣ್ಣ ಬದ್ಲಾಗ್ಯಾನ್ ಮದ್ವಿ ಆದಮ್ಯಾಲ್, ಸಂಸಾರದ ಜಂಜಾಟ ನೋಡಿ ಸಂತನಾಗ್ಲೆ ಇಲ್ಲ ಸುಮ್ಮನಿರಲೇ ನನಗೆ ರಕ್ಷಣೆ ಇಲ್ಲಾರ್ರೀ ಪೊಲೀಸ್, ಶಿಕ್ಷಕ, ಜಡ್ಜ್ ಯಾರ್ಗೈತ್ರಿ ರಕ್ಷಣೆ ಕವನಗಳು ಮೂಡಿ ಬಂದವು.
ಚುಸಾಪ ತಾಲೂಕಾಧ್ಯಕ್ಷ ಜಮೀರ್ ರಿತ್ತಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಆಶೋಕ ಕೊಂಡ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಸಿ.ಎಸ್. ರಾಮಾಪುರ ಅಧ್ಯಕ್ಷತೆ ವಹಿಸಿದ್ದರು. ಕರವೇ ಅಧ್ಯಕ್ಷ ಮಂಜು ಛತ್ರದ, ಕುಮಾರಮಠದ, ಬಿ.ಸಿ. ಬಣಕಾರ, ಎಸ್.ಎನ್. ಸೋಮಸಾಗರ, ವಿ.ಎ. ಲಿಂಗದಳ್ಳಿ, ಗದಿಗೆಯ್ಯ ಕ್ಯಾರಿಕಂಟಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.