ಹಾವೇರಿ

ಶಾಂತಕವಿ ರಂಗಭೂಮಿ ಪಿತಾಮಹ

Published On :




ಗುದ್ಲೆಪ್ಪ ಹಳ್ಳೀಕೇರಿ ವೇದಿಕೆ, ಹೊಸರಿತ್ತಿ
ಕರ್ನಾಟಕ ರಾಜ್ಯಕ್ಕೆ ರಂಗಭೂಮಿ ಪರಿಚಯಿಸಿದ ಕೀರ್ತಿ ಹಾವೇರಿ ಜಿಲ್ಲೆ ಹಿರೇಕೆರೂರಿನ ಶಾಂತಕವಿಗೆ ಸಲ್ಲುತ್ತದೆ. ಶಾಂತ ಕವಿಗಳನ್ನು ರಂಗಭೂಮಿ ಪಿತಾಮಹ ಎಂದು ಇಂದಿಗೂ ಗೌರವಿಸಲಾಗುತ್ತಿದೆ ಎಂದು ಸಾಹಿತಿ ಹಾಗೂ ರಂಗಭೂಮಿ ಕಲಾವಿದ ಪಕ್ಕಣ್ಣ ಅರಗೋಳ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ 'ರಂಗಭೂಮಿಗೆ ಹಾವೇರಿ ಜಿಲ್ಲೆಯ ಕೊಡುಗೆ' ಕುರಿತು ಮಾತನಾಡಿದರು.
ನಮ್ಮ ದೇಶದ ಘನತೆ, ಗೌರವ, ಸಂಸ್ಕೃತಿ, ಸಂಪ್ರದಾಯಗಳಿಗೆ ಉನ್ನತ ಆದರ್ಶಗಳಿಗೆ ಕನ್ನಡಿಯಾದ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಜನಸಾಮಾನ್ಯರ ಮನಸ್ಸಿಗೆ ಮುಟ್ಟಿಸಿದ ಕೀರ್ತಿ ರಂಗಭೂಮಿಗೆ ಸಲ್ಲುತ್ತದೆ. ಹಾವೇರಿ ಜಿಲ್ಲೆ ಮೂಲಕವೇ ಕನ್ನಡ ನಾಡಿಗೆ ಪರಿಚಿತವಾದುದು ರಂಗಭೂಮಿ ಎಂಬುದು ಹಾವೇರಿ ಜಿಲ್ಲೆಗೆ ಸಲ್ಲುವ ಮೊದಲ ಗೌರವ.
ಶಾಂತಕವಿಗಳ ಮೊದಲ ನಾಟಕ 'ಉಷಾಕಿರಣ' ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಕಾರ್ಯನಿರ್ವಹಿಸಿ ಜಾಗೃತಿ ಮೂಡಿಸಿದ ಮೊದಲ ನಾಟಕ. ರಂಗಭೂಮಿ ಅನಕ್ಷರಸ್ಥರಿಗೆ ಕಲೆ-ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿದ ಸಾಮಾಜಿಕ ಜಾಗೃತಿಗೆ ನಾಂದಿ ಹಾಡಿರುವುದಾಗಿದೆ.
ರಾಣಿಬೆನ್ನೂರು ತಾಲೂಕು ಹಲಗೇರಿಯ ಜೆಟ್ಟೆಪ್ಪ ನಾಟಕ ಕಂಪನಿ ಒಂದು ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಒಂದು ಗ್ರಾಮದಲ್ಲಿ ಹಾಕಿದ್ದ ನಾಟಕದ ಟೆಂಟ್‌ಗೆ ದಾರಿ ಕಿರಿದಾಗಿತ್ತು. ಈ ಸಂದರ್ಭ ದಾರಿಗೆ ಅಡ್ಡ ಬರುವಂತಹ ಮನೆಗಳನ್ನು ಖರೀದಿಸಿ ಅವುಗಳನ್ನು ಕೆಡವಿ ಹಾಕಿ ನಾಟಕ ನೋಡಲು ಬರುವ ಸಾಹಿತ್ಯಾಸಕ್ತರಿಗೆ ಅನುಕೂಲತೆ ಕಲ್ಪಿಸಿದ್ದರು ಎಂದು ರಂಗಭೂಮಿಯ ಸ್ಥಿತಿಗತಿ ಸ್ಮರಿಸಿದರು.
ಬೆಂಗಳೂರಿನ ಗಾಂಧಿ ನಗರದ ಜನರನ್ನು ರಂಗಭೂಮಿಯತ್ತ ಸೆಳೆದ ಸೂಜಿಗಲ್ಲಿನ ಶಕ್ತಿ ಹಾವೇರಿ ಜಿಲ್ಲೆಗಿದೆ. ಇದೇ ಕಾರಣಕ್ಕೆ ಖ್ಯಾತನಾಮರಾದ ಚಿತ್ರರಂಗದ ಡಾ. ರಾಜಕುಮಾರ್, ನರಸಿಂಹರಾವ್, ಧೀರೇಂದ್ರ ಗೋಪಾಲ, ಸುಧೀರ, ವಜ್ರಮುನಿ ಅಲ್ಲದೇ ಜುಬೇದಾಬಾಯಿ, ಸೋನಾಬಾಯಿಗಳಂತಹ ಧೀಮಂತ ಮಹಿಳೆಯರು ರಂಗಭೂಮಿಗೆ ನೀಡಿದ ಕಾಣಿಕೆ ಅಜರಾಮರ.
ಆದರೆ, ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಅಳಿವಿನಂಚಿನಲ್ಲಿದೆ. ಇದಕ್ಕೆ ಸರ್ಕಾರ ಒಂದು ಕಡೆಯಾದರೆ ಮತ್ತೊಂದೆಡೆ ಹೆಚ್ಚುತ್ತಿರುವ ತಂತ್ರಜ್ಞಾನ ಹಾಗೂ ಆಸಕ್ತಿ ಕಳೆದುಕೊಳ್ಳುತ್ತಿರುವ ಸಾರ್ವಜನಿಕರು ಕಾರಣರಾಗಿದ್ದಾರೆ ಎಂದರು.
ಪ್ರೊ. ಆರ್.ಕೆ. ಬೆಳ್ಳಿಗಟ್ಟಿ, ಶ್ರೀಶೈಲ ಹುದ್ಧಾರ, ಜೀವರಾಜ ಛತ್ರದ, ಡಾ. ಸುಮಂಗಲಾ ಅತ್ತಿಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.