ವಾಜಪೇಯಿ ಕಾರ್ಯ ಸೇವೆ ಸ್ಮರಣೀಯ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ.22
ಭವ್ಯ ಭಾರತ ನಿರ್ಮಾಣ ಆಡಳಿತದ ಕನಸನ್ನು ನನಸು ಮಾಡಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಆಡಳಿತ ನೀಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೇವೆ ಸ್ಮರಣೀಯ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮಗೊಳಿಸಿದ ಮುತ್ಸದ್ದಿ ನಾಯಕ ಎಂದು ತಹಸೀಲ್ದಾರ್ ರಮೇಶ ಕೋನರೆಡ್ಡಿ ನುಡಿದರು.
ಮಂಗಳವಾರ ಹಾನಗಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಎನ್ಎಸ್ಎಸ್ ಘಟಕ ಆಶ್ರಯದಲ್ಲಿ ಏರ್ಪಡಿಸಿದ್ದ ಅಟಲ್ ಉತ್ತಮ ಆಡಳಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆದ್ದಾರಿ ಯೋಜನೆ, ಆರ್ಥಿಕಾಭಿವೃದ್ಧಿ ಹಾಗೂ ಇಂಧನ ಉಳಿತಾಯದ ರಹದಾರಿಯಾಯಿತು. ಭಾರತವನ್ನು ಸಮರ್ಥವಾಗಿ ವಿಶ್ವಕ್ಕೆ ಪರಿಚಯಿಸಿದ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಮಾದರಿಯಾಗಿದ್ದು, ಸರ್ಕಾರದ ಯೋಜನೆಗಳನ್ನು ಜನತೆ ಸದುಪಯೋಗ ಮಾಡಿಕೊಳ್ಳಬೇಕು. ಈಗ ಜಾರಿಯಲ್ಲಿರುವ ಸಕಾಲ, ಇನ್ನಿತರ ಯೋಜನೆಗಳು ಆಡಳಿತಾತ್ಮಕವಾಗಿ ಪರಿಣಾಮಕಾರಿಯಾದವು ಎಂದರು. ಅತಿಥಿಯಾಗಿ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಸರಳ ಸಜ್ಜನಿಕೆ, ದೂರದೃಷ್ಟಿ ವ್ಯಕ್ತಿತ್ವ ಹೊಂದಿದ ಅಟಲ್ಜಿ ಅವರ ನದಿ ಜೋಡಣಾ ಕಾರ್ಯ ಕಾರ್ಯಗತವಾಗಬೇಕಿತ್ತು. ದೇಶಕ್ಕಾಗಿ ಬದ್ಧತೆಯಿಂದ ಆಡಳಿತ ಮಾಡಿದ ಅಪರೂಪದ ರಾಜಕಾರಣಿ. ಇಂಥ ನಾಯಕರನ್ನು ಪಡೆದ ಭಾರತ ಪುಣ್ಯನಾಡು. ಗ್ರಾಮೀಣ ಭಾರತ ಸದೃಢವಾಗಲು, ಕೃಷಿ, ಕೈಗಾರಿಕೆ ಅಭಿವೃದ್ಧಿಗೊಳ್ಳಲು ಅಟಲ್ಜಿ ಅವರ ಶ್ರಮ ಸಾರ್ಥಕವಾಗಿದೆ ಎಂದರು. ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿ ಹೃದಯದ ಮಾಜಿ ಪ್ರಧಾನಿ ಅಟಲ್ಜಿ ದಿಟ್ಟ ರಾಷ್ಟ್ರಪ್ರೇಮಿಯೂ ಹೌದು. ಭಾರತ ಅಭಿವೃದ್ಧಿಯಲ್ಲಿ ಪ್ರಜ್ವಲಿಸಿದ ಹೃದಯವಂತ ನಾಯಕ. ಸತ್ಯ, ಶಾಂತಿ, ನಿಷ್ಠೆಯ ಮೂಲಕ ಸರ್ವರಿಗೂ ಉತ್ತಮವಾದುದನ್ನೇ ನೀಡಿದ ಧೀಮಂತ ನಾಯಕ ಎಂದರು. ಮುಖಂಡ ಎ.ಎಸ್. ಬಳ್ಳಾರಿ, ಸಾಹಿತಿ ಮಾರುತಿ ಶಿಡ್ಲಾಪುರ, ಬಿ.ಎಂ. ಕಾಡಪ್ಪನವರ, ಸುರೇಶ ಹಿರೂರು, ವೀಣಾ ದೇವರಗುಡಿ ಪಾಲ್ಗೊಂಡಿದ್ದರು. ಲಕ್ಷ್ಮೀ ಇಟಗಿಮಠ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಸ್.ಬಿ. ಕಮಾಟಿ ಸ್ವಾಗತಿಸಿದರು. ಎಂ.ಡಿ. ಬಾರಿಕರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

